Advertisement

ಪ್ರತಿಭೆಗಳ ಶೋಧಕ್ಕೆ ಜೂನಿಯರ್  ಎಚ್‌ಪಿಎಲ್ 

04:37 PM Jun 04, 2018 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ ಜೂನಿಯರ್-2 ಟೂರ್ನಿಯ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಗರದ ಪ್ರಸಿಡೆಂಟ್‌ ಹೊಟೇಲ್‌ನಲ್ಲಿ ರವಿವಾರ ನಡೆಯಿತು.

Advertisement

ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಬಾಬಾ ಭೂಸದ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಚ್‌ಪಿಎಲ್‌ ಜೂನಿಯರ್ ಕ್ರಿಕೆಟ್‌ ಟೂರ್ನಿ ಆಯೋಜಿಸಲಾಗುತ್ತಿದೆ. ಕ್ರಿಕೆಟ್‌ ಬದಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ನಾವು ಕೂಡ ಹೊಸ ಮಾದರಿಗೆ ಹೊಂದಿಕೊಳ್ಳಬೇಕಿದೆ. 14 ಹಾಗೂ 16 ವಯೋಮಿತಿಯ ಪ್ರತಿಭೆಗಳನ್ನು ಗುರುತಿಸಿದರೆ ಮುಂದೆ ಅವರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಲು ಅನುಕೂಲವಾಗುತ್ತದೆ. ಈ ಉದ್ದೇಶದಿಂದ ಕ್ರಿಕೆಟ್‌ ಸಂಘಟಿಸಲಾಗುತ್ತಿದೆ ಎಂದರು.

ಉತ್ತರ ಕರ್ನಾಟಕ ಭಾಗದ ಹುಡುಗರಿಗೆ ಅವಕಾಶಗಳು ಲಭ್ಯವಾಗಬೇಕು. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ 3 ಅಸೋಸಿಯೇಶನ್‌ ಗಳಿವೆ. ಆಂಧ್ರಪ್ರದೇಶದಲ್ಲಿ 2 ಅಸೋಸಿಯೇಶನ್‌ ಗಳಿವೆ. ನಮ್ಮ ರಾಜ್ಯದಲ್ಲಿ ಕೇವಲ ಒಂದೇ ಅಸೋಸಿಯೇಶನ್‌ ಇದ್ದು, ಸ್ಪರ್ಧೆ ಹೆಚ್ಚಾಗಿದೆ. ಆದ್ದರಿಂದ ಹುಡುಗರನ್ನು ಸ್ಪರ್ಧೆಗೆ ಸನ್ನದ್ಧಗೊಳಿಸುವುದು ಮುಖ್ಯ ಎಂದರು.

ಪಾಲಕರು ಹುಡುಗರು ಮುಕ್ತವಾಗಿ ಬೆಳೆಯಲು ಅವಕಾಶ ನೀಡಬೇಕು. ಕ್ರಿಕೆಟ್‌ಗೆ ದೈಹಿಕ ಕ್ಷಮತೆಗಿಂತ ಮಾನಸಿಕ ಸದೃಢತೆ ಬಹಳ ಮುಖ್ಯ. ಅದನ್ನು ಮಕ್ಕಳೇ ಬೆಳೆಸಿಕೊಳ್ಳಬೇಕು. ಅದನ್ನು ಎಲ್ಲಿಯೂ ಕಲಿಸುವುದಿಲ್ಲ. ತಪ್ಪು ತಿದ್ದುಕೊಳ್ಳುತ್ತ ಸಾಗಿದರೆ ಮುಂದೆ ಒಳ್ಳೆ ಕಿಕೆಟಿಗರಾಗಿ ರೂಪಗೊಳ್ಳಲು ಸಾಧ್ಯ ಎಂದರು.

ನಿಖೀಲ್‌ ಭೂಸದ ಪ್ರಾಸ್ತಾವಿಕ ಮಾತನಾಡಿ, ಕಳೆದ ಬಾರಿ 20 ಓವರ್‌ ಗಳ ಪಂದ್ಯವನ್ನಾಡಿಸಲಾಗಿತ್ತು. ಆದರೆ ಈ ಆವೃತ್ತಿಯಲ್ಲಿ 30 ಓವರ್‌ಗಳ ಪಂದ್ಯವನ್ನಾಡಿಸಲಾಗುವುದು. ಈ ಬಾರಿ 16 ವಯೋಮಿತಿ ತಂಡಗಳ ಮಧ್ಯೆ ಸೆಣಸು ನಡೆಯುವುದು. ಹುಬ್ಬಳ್ಳಿಯ ಎನ್‌ ಕೆ ವಾರಿಯರ್,  ಪಿನ್‌ ವಾರಿಯರ್, ಬೆಳಗಾವಿಯ ಸ್ಮಾರ್ಟ್‌ ವಿಜನ್‌, ಬಿಜಾಪುರ ಬುಲ್ಸ್‌ ಸಿಸಿಐ, ಗದಗ್‌ನ ವಾಲ್ಮೀಕಿ ಸ್ಟ್ರೈಕರ್ ಒಟ್ಟು 5 ತಂಡಗಳ ಮಧ್ಯೆ ಸ್ಪರ್ಧೆ ನಡೆಯಲಿದೆ. ಜೂನ್‌ 12ಕ್ಕೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದರು.

Advertisement

ರೌಂಡ್‌ ರಾಬಿನ್‌ ಪದ್ಧತಿಯಂತೆ ಪಂದ್ಯಗಳನ್ನಾಡಿಸಲಾಗುವುದು. ಪ್ರತಿ ದಿನ 2 ಪಂದ್ಯಗಳನ್ನು ಸಂಘಟಿಸಲಾಗುವುದು. ಕೆಂಪು ಚೆಂಡು ಬಳಸಲಾಗುತ್ತಿದ್ದು, 16 ಆಟಗಾರರ ತಂಡದಲ್ಲಿ ಕನಿಷ್ಟ ಐದು ಜನರನ್ನು 14 ವಯೋಮಿತಿ ಕ್ರಿಕೆಟಿಗರನ್ನು ಹಾಗೂ ಆಡುವ 11ರ ತಂಡದಲ್ಲಿ ಕನಿಷ್ಟ 4 ಜನರನ್ನು 14 ವಯೋಮಿತಿ ತಂಡದ ಆಟಗಾರರನ್ನು ಕಡ್ಡಾಯವಾಗಿ ಸೇರಿಸಬೇಕು. ತಂಡವು 14 ಹಾಗೂ 16 ವಯೋಮಿತಿಯ ಮಿಶ್ರಣವಾಗಿರುವುದು ಎಂದರು.

ಮುಖ್ಯ ಅತಿಥಿಯಾಗಿ ಎಸಿಪಿ ಕೆ.ಎಚ್‌. ಪಠಾಣ ಆಗಮಿಸಿದ್ದರು. ಹಿರಿಯ ಕೋಚ್‌ ಅರ್ಮುಗಂ ಮಾತನಾಡಿದರು. ಫ್ರಾಂಚೈಸಿ ಮಾಲೀಕರಾದ ಎಸ್‌. ರವಿಚಂದ್ರ ರೆಡ್ಡಿ, ಡಾ| ಪ್ರಭುಲಿಂಗ ಮಾನಕರ, ವೆಂಕಟೇಶ ವಾಲ್ಮೀಕಿ, ಮಹೇಶ ಚವರಿ, ವಿಕ್ರಮ್‌ ದೇಸಾಯಿ, ಅಜಯ್‌ ಇದ್ದರು. ಶಿವಾನಂದ ಗುಂಜಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next