Advertisement

ಕಿರಿಯರ ತರಗತಿ ಆರಂಭ ವಿಳಂಬ?· ಹಿ.ಪ್ರಾಥಮಿಕ,ಪ್ರೌಢ ಶಾಲೆ,ದ್ವಿ.ಪಿಯು ಆರಂಭಕ್ಕೆ ಯತ್ನ

12:56 PM May 24, 2020 | Sriram |

ಬೆಂಗಳೂರು: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕಾಗಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ ಯಾದರೂ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಕೋಶದಿಂದ ಹಸುರು ನಿಶಾನೆ ಸಿಕ್ಕಿಲ್ಲ.

Advertisement

ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಸಂಬಂಧಿಸಿ ದಂತೆ ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಕುರಿತು ಈಗಾಗಲೇ ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಆದರೆ ಶಾಲೆ ಆರಂಭ ಯಾವಾಗ ಎನ್ನುವುದು ಸ್ಪಷ್ಟವಾಗಿಲ್ಲ. ಆರಂಭಿಸಿದರೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ಇನ್ನಷ್ಟು ವಿಳಂಬವಾಗಿ ಆರಂಭಿಸುವ ಬಗ್ಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿ ಯಾವಾಗ ಆರಂಭಿಸಿದರೆ ಸೂಕ್ತ ಎಂಬ ಬಗ್ಗೆ ಸಾರ್ವ ಜನಿಕರಿಂದ ಅಭಿಪ್ರಾಯ ಸಂಗ್ರಹವನ್ನು ಶಿಕ್ಷಣ ಸಚಿವರೇ ಮಾಡಿದ್ದಾರೆ. ಬಹುತೇಕರು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ವಿಳಂಬವಾಗಿ ಆರಂಭಿಸುವಂತೆ ಸಲಹೆ ನೀಡಿದ್ದಾರೆ.

ಹೀಗಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ವಿಳಂಬವಾಗಿ ತೆರೆಯುವ ನಿಟ್ಟಿನಲ್ಲಿ ರೂಪುರೇಷೆಗಳು ಸಿದ್ಧವಾಗುತ್ತಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ.

ತರಗತಿ ಆರಂಭ ಸಂಬಂಧ ಶಿಕ್ಷಣ ಇಲಾಖೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಮಾನವ ಸಂಪದಭಿವೃದ್ಧಿ ಸಚಿವಾಲಯದ ನಿರ್ದೇಶನವನ್ನು ಪಾಲಿಸುವ ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಕೋಶ ನೀಡುವ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

Advertisement

ಜತೆಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕ ಅನಂತರವೇ ತರಗತಿ ಆರಂಭಿಸಲು ಸಾಧ್ಯ. ಯಾವ ರೀತಿಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಆರೋಗ್ಯ ಇಲಾಖೆ ಸೂಚನೆ ನೀಡಲಿದೆ. ಅದರಂತೆ ಶೈಕ್ಷಣಿಕ ತರಗತಿ ಆರಂಭಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭ ಸಂಬಂಧ
ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುಮತಿ ಇಲ್ಲದೆ ಶಾಲೆ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಹಲವು ಆಯಾಮಗಳ ಚರ್ಚೆ ನಡೆಸಿದ್ದೇವೆ. ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
-ಎಸ್‌.ಆರ್‌. ಉಮಾಶಂಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next