Advertisement

ಆರ್ಥಿಕ ಚಟುವಟಿಕೆ ಚಿಗುರಿಸಿದ ಜೂನ್‌!

02:03 AM Jul 05, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದ ಬಹುತೇಕ ಹೊರಬಂದಿರುವ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಕಾಣಲಾರಂಭಿಸಿದ್ದು, ವಾಣಿಜ್ಯ ತೆರಿಗೆ ಮೂಲದಿಂದ ಜೂನ್‌ನಲ್ಲಿ ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹವಾಗಿದೆ.

Advertisement

ರಿಯಲ್‌ ಎಸ್ಟೇಟ್‌ ಉದ್ದಿಮೆಯೂ ಚೇತರಿಕೆ ಕಂಡಿರುವುದು ಇನ್ನೊಂದು ಸಮಾಧಾನಕರ ಅಂಶ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದಿಂದ ಜೂನ್‌ನಲ್ಲಿ 713 ಕೋಟಿ ರೂ. ಸಂಗ್ರಹ ವಾಗಿದೆ. ಆದರೆ ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ 273 ಕೋ.ರೂ. ಖೋತಾ ಆಗಿದೆ.

2020ರ ಎಪ್ರಿಲ್‌ನಲ್ಲಿ 29.81 ಕೋಟಿ ರೂ., ಮೇ ತಿಂಗಳಲ್ಲಿ 397.7 ಕೋಟಿ ರೂ. ಸಂಗ್ರಹವಾಗಿದೆ. ಇದು ರಾಜ್ಯದಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆ ಚಿಗುರಿರುವುದಕ್ಕೆ ಸಾಕ್ಷಿ. ವಲಸೆ ಕಾರ್ಮಿಕರು ವಾಪಸಾಗುತ್ತಿರುವುದರಿಂದ ಆಸ್ತಿ ಖರೀದಿ, ಕಟ್ಟಡ ನಿರ್ಮಾಣ ಚಟು ವಟಿಕೆ ಚೇತರಿಸುವ ಲಕ್ಷಣ ಇದೆ.

ಅಬಕಾರಿಯಲ್ಲೂ ಹೆಚ್ಚು ಆದಾಯ
ಅಬಕಾರಿ ತೆರಿಗೆ ಆದಾಯ ಕೂಡ ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಹೆಚ್ಚು ಸಂಗ್ರಹ ವಾಗಿದೆ. ಆದರೆ ಅಬಕಾರಿ ಸುಂಕ ಹೆಚ್ಚಳ ಪ್ರಮಾಣಕ್ಕೆ ಪೂರಕವಾಗಿ ತೆರಿಗೆ ಆದಾಯ ಸಂಗ್ರಹವಾಗಿಲ್ಲ. ಮೋಟಾರು ವಾಹನ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯ ಕೂಡ ಎಪ್ರಿಲ್‌, ಮೇ ತಿಂಗಳಿಗೆ ಹೋಲಿ ಸಿದರೆ ಜೂನ್‌ನಲ್ಲಿ ಸಾಕಷ್ಟು ಸುಧಾರಿಸಿದೆ. ಇದೇ ರೀತಿಯ ಬೆಳವಣಿಗೆ ಕಾಯ್ದುಕೊಂಡರೆ ಮುಂದಿನ ತ್ತೈಮಾಸಿಕದಲ್ಲಿ ತೆರಿಗೆ ಆದಾಯ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ.

ಲಾಕ್‌ಡೌನ್‌ ಬಹುತೇಕ ತೆರವಾದ ಬಳಿಕ ವಾಣಿಜ್ಯ ಚಟುವಟಿಕೆಗಳು ಚೇತರಿಸಿವೆ. ಪರಿಣಾಮವಾಗಿ 2020ರ ಜೂನ್‌ನಲ್ಲಿ 6,708.56 ಕೋಟಿ ರೂ. (ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್‌ಟಿ, ಸೆಸ್‌ ಸಹಿತ) ಸಂಗ್ರಹವಾಗಿದೆ.

Advertisement

2019-20ನೇ ಸಾಲಿನ ಜೂನ್‌ನಲ್ಲಿ  ಸಂಗ್ರಹ ವಾಗಿದ್ದ 6,658.8 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 49.76 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ.

ರಾಜ್ಯದಲ್ಲಿ ವಾಣಿಜ್ಯ ತೆರಿಗೆದಾರರು 8 ಲಕ್ಷಕ್ಕೂ ಹೆಚ್ಚು ಜನರಿದ್ದು, ಈ ಪೈಕಿ ಸುಮಾರು 60 ಸಾವಿರ ಮಂದಿ ಶೇ.80 ವಾಣಿಜ್ಯ ತೆರಿಗೆ ಪಾವತಿಸುತ್ತಾರೆ.

ವಾಣಿಜ್ಯ ತೆರಿಗೆ ಇಲಾಖೆಯು ಭಾರೀ ಮೊತ್ತದ ತೆರಿಗೆ ಪಾವತಿದಾರರನ್ನು ಸಂಪರ್ಕಿಸಿ ಪ್ರೇರೇಪಿಸಿದ ಹಿನ್ನೆಲೆಯಲ್ಲಿ ಲಾಕ್‌ಡೌನ್‌, ಅನ್‌ಲಾಕ್‌ ನಡುವೆಯೂ ವಾಣಿಜ್ಯ ತೆರಿಗೆ ಆದಾಯ ಏರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.

ಜೂನ್‌ನಲ್ಲಿ ಅಬಕಾರಿ ತೆರಿಗೆಯೂ ಹೆಚ್ಚಳ
ಮೊದಲ ತ್ತೈಮಾಸಿಕದಲ್ಲಿ ಅಬಕಾರಿ ತೆರಿಗೆ ಆದಾಯದಲ್ಲಿ ಗಣನೀಯ ಇಳಿಕೆಯಾದರೂ ಜೂನ್‌ನಲ್ಲಿ ತೆರಿಗೆ ಸಂಗ್ರಹ ಚೇತರಿಸಿದೆ. ಕಳೆದ ಜೂನ್‌ನಲ್ಲಿ 2,459 ಕೋಟಿ ರೂ. ಸಂಗ್ರಹವಾಗಿದ್ದು, 2019ರ ಜೂನ್‌ಗೆ ಹೋಲಿಸಿದರೆ 54 ಕೋಟಿ ರೂ. ಹೆಚ್ಚುವರಿ ತೆರಿಗೆ ಆದಾಯ ಸಂಗ್ರಹವಾಗಿದೆ.

ಬಜೆಟ್‌ ಘೋಷಣೆಯಂತೆ ಎ.1ರಿಂದಲೇ ಭಾರತೀಯ ತಯಾರಿಕೆ ಮದ್ಯ (ಐಎಂಎಲ್‌)ದ ಮೇಲೆ ಅಬಕಾರಿ ಸುಂಕವನ್ನು ಶೇ.6 ಹೆಚ್ಚಿಸಲಾಗಿತ್ತು. ಮೇಯಿಂದ ಮದ್ಯ ಮಾರಾಟಕ್ಕೆ ಸರಕಾರ ಅವಕಾಶ ನೀಡಿ ಕೋವಿಡ್‌ ನೆರವಿಗಾಗಿ ಆಯ್ದ ಮದ್ಯಗಳ ಮೇಲೆ ಶೇ. 17ರಿಂದ 25ರ ವರೆಗೆ
ಅಬಕಾರಿ ಸುಂಕ ಏರಿಸಿತ್ತು. ಅಬಕಾರಿ ಸುಂಕ ಹೆಚ್ಚಳ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ಆದಾಯ ಹೆಚ್ಚಳ ವಾಗಿಲ್ಲ.

ಜೂನ್‌ನಲ್ಲಿ ಚೇತರಿಕೆ
ಮೋಟಾರು ವಾಹನ ತೆರಿಗೆ ಆದಾಯ ಜೂನ್‌ನಲ್ಲಷ್ಟೇ ಚೇತರಿಸಿದೆ. ಎಪ್ರಿಲ್‌ನಲ್ಲಿ 33 ಕೋಟಿ ರೂ., ಮೇಯಲ್ಲಿ 185 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ ಜೂನ್‌ನಲ್ಲಿ 353 ಕೋಟಿ ರೂ. ತೆರಿಗೆ ಸಂಗ್ರಹವಾಗುವ ಮೂಲಕ ಮೋಟಾರು ವಾಹನ ತೆರಿಗೆಯಿಂದ ಮೊದಲ ತ್ತೈಮಾಸಿಕದಲ್ಲಿ 571 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next