Advertisement

June 5: ಇಂದು ಪರಿಸರ ದಿನ ಏನಿದರ ಮಹತ್ವ?

11:35 PM Jun 04, 2023 | Team Udayavani |

ಸೋಮವಾರ ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಕೈಗಾರಿಕ ಕ್ರಾಂತಿ, ನಗರೀಕರಣದ ಪ್ರಭಾವ, ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಪರಿಸರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯೇ ಜೂ.5ರಂದು ಪರಿಸರ ದಿನ ಆಚರಿಸಲಾಗುತ್ತಿದೆ. ಅಲ್ಲದೆ ಪ್ರತೀ ವರ್ಷವೂ ಒಂದೊಂದು ದೇಶ ಈ ದಿನದ ಆತಿಥ್ಯ ವಹಿಸಲಿದೆ. ಈ ವರ್ಷ ಪಶ್ಚಿಮ ಆಫ್ರಿಕಾದ ದೇಶ ಐವರಿ ಕೋಸ್ಟ್‌, ನೆದರ್ಲೆಂಡ್‌ ಸಹಭಾಗಿತ್ವದಲ್ಲಿ ಆತಿಥ್ಯ ವಹಿಸಿಕೊಂಡಿದೆ. ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟುವುದು ಈ ಬಾರಿಯ ಥೀಮ್‌.

Advertisement

ಶುರುವಾಗಿದ್ದು ಹೇಗೆ?

1972ರಲ್ಲಿ ಪರಿಸರ ವಿಚಾರವನ್ನೇ ಪ್ರಮುಖ ಅಜೆಂಡಾವಾಗಿ ಇರಿಸಿಕೊಂಡು ಸ್ಟಾಕ್‌ಹೋಮ್‌ನಲ್ಲಿ ವಿಶ್ವಸಂಸ್ಥೆಯ ಮೊದಲ ಸಮ್ಮೇಳನ ನಡೆಯಿತು. ಆಗ ಜೀವಿಸುವ ಹಕ್ಕನ್ನು ಗುರುತಿಸಲಾಗಿದ್ದು, ಮಾನವನ ಬದುಕಿಗೆ ಆರೋಗ್ಯಕರ ವಾತಾವರಣ ಮುಖ್ಯ ಎಂಬುದನ್ನು ಮನಗಾಣಲಾಯಿತು. ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದು, ಇದರಲ್ಲೇ ಜಾಗತಿಕವಾಗಿ ಪರಿಸರ ಉಳಿಸುವಿಕೆಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೆ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವನ್ನೂ ರೂಪಿಸಲಾಯಿತು. ಹೀಗಾಗಿಯೇ ಜೂ.5ರಂದು ವಿಶ್ವ ಪರಿಸರ ದಿನವೆಂದು ಆಚರಣೆ ಮಾಡಲು ನಿರ್ಧರಿಸಲಾಯಿತು.

ಮೊದಲ ಬಾರಿ ಆಚರಿಸಿದ್ದು ಯಾವಾಗ?

1973ರಲ್ಲಿ ಮೊದಲ ಪರಿಸರ ದಿನ ಆಚರಣೆ ಮಾಡಲಾಯಿತು. ಆಗ “ಇರುವುದು ಒಂದೇ ಭೂಮಿ’ ಎಂಬ ಥೀಮ್‌ನಲ್ಲಿ ಆಚರಣೆ ಮಾಡಲಾಯಿತು. ಇದಾದ ಬಳಿಕ 1979ರಲ್ಲಿ ನಮ್ಮ ಮಕ್ಕಳಿಗಾಗಿ ಒಂದು ಭವಿಷ್ಯ, 1986ರಲ್ಲಿ ಶಾಂತಿಗಾಗಿ ಒಂದು ಮರ, 1998ರಲ್ಲಿ ಭೂಮಿಯಲ್ಲಿ ಜೀವಿತಕ್ಕಾಗಿ-ನಮ್ಮ ಸಮುದ್ರ ರಕ್ಷಿಸಿ, 2001ರಲ್ಲಿ ಕನೆಕ್ಟ್ ವಿತ್‌ ದಿ ವರ್ಲ್x ವೈಬ್‌ ವೆಬ್‌ ಆಫ್ ಲೈಫ್ ಎಂಬ ಥೀಮ್‌ನೊಂದಿಗೆ ಪರಿಸರ ದಿನ ಆಚರಣೆ ಮಾಡಲಾಯಿತು.

Advertisement

ಪ್ಲಾಸ್ಟಿಕ್‌  ಎಂಬ ಮಹಾಮಾರಿ!

ಆಧುನಿಕ ಶತಮಾನದ ಬಹುದೊಡ್ಡ ಪೆಡಂಭೂತ ಪ್ಲಾಸ್ಟಿಕ್‌. ಪ್ಲಾಸ್ಟಿಕ್‌ ಮತ್ತದರ ಉತ್ಪನ್ನಗಳು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. 1933ರಲ್ಲಿ ಇಂಗ್ಲೆಂಡಿನ ಬಹುದೊಡ್ಡ ಕೈಗಾರಿಕ ದೈತ್ಯ ಇಂಪೀರಿಯನ್‌ ರಾಸಾಯನಿಕ ಕಾರ್ಖಾನೆಯ ರೇಜಿನಾಲ್ಡ್‌ ಗಿಬ್ಸನ್‌ ಮತ್ತು ಎರಿಕ್‌ ಫಾಸೆಟ್‌ ಎಂಬ ಇಬ್ಬರು ವ್ಯಕ್ತಿಗಳು ಕಂಡುಹಿಡಿದ ಪಾಲಿ ಎಥಿಲೀನ್‌ ಅಥವಾ ಪಾಲಿಥೀನ್‌ ಈಗ ಪ್ಲಾಸ್ಟಿಕ್‌ ಅಸುರನಾಗಿ ಬೆಳೆದು ನಿಂತಿದೆ. ಸದ್ಯ ಮಾನವ ಪ್ರತಿನಿತ್ಯ ಬಳಸುವ ವಸ್ತುಗಳು ಪ್ಲಾಸ್ಟಿಕ್‌ನದ್ದಾಗಿದ್ದು ಒಂದು ಬಾರಿ ಉಪಯೋಗಿಸಿ ಎಸೆಯುವಂತದ್ದೇ ಆಗಿದೆ. ಅಂಕಿಅಂಶಗಳ ಪ್ರಕಾರ ವಿಶ್ವದಾದ್ಯಂತ ಸರಾಸರಿ ಪ್ರತೀದಿನ 12 ಕೋಟಿ ಟನ್‌ ಪ್ಲಾಸ್ಟಿಕ್‌ ಬಳಕೆಯಾದರೆ ಭಾರತದಾದ್ಯಂತ ಇದು 22 ಲಕ್ಷ ಟನ್‌ಗಳಷ್ಟಾಗಿದೆ. ಇದರರ್ಥ ಒಂದು ವರ್ಷಕ್ಕೆ ಸರಾಸರಿ 555 ಬಿಲಿಯನ್‌ನಿಂದ ಒಂದು ಟ್ರಿಲಿಯನ್‌ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ.

ಪ್ಲಾಸ್ಟಿಕ್‌ನಲ್ಲಿರುವ ಡೈಯಾಕ್ಸಿನ್‌ ಎಂಬ ರಾಸಾಯನಿಕ ಕ್ಯಾನ್ಸರ್‌ನಂಥ ಮಾರಕ ರೋಗಕ್ಕೆ ಕಾರಣವಾಗಬಹುದು. ಪ್ಲಾಸ್ಟಿಕ್‌ನ ತ್ಯಾಜ್ಯ ನಿರ್ವಹಣೆ ಬಹಳ ಕಷ್ಟಸಾಧ್ಯ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಹಾಕಿದಾಗ ಅದರಲ್ಲಿನ ಪ್ಲಾಸ್ಟಿನೈಸರ್‌ ಎಂಬ ಕೆಮಿಕಲ್‌ ಕರಗಿ ನಮ್ಮ ರಕ್ತನಾಳಕ್ಕೆ ಸುಲಭವಾಗಿ ಸೇರಿಕೊಳ್ಳಬಹುದು ಮತ್ತು ಕಣ್ಣು ಕುರುಡಾಗುವ ಅಪಾಯ ಇದೆ. ಪ್ಲಾಸ್ಟಿಕ್‌ ಮಣ್ಣಿನಲ್ಲಾಗಲೀ, ನೀರಿನಲ್ಲಾಗಲೀ ಸುಲಭವಾಗಿ ಕರಗುವುದಿಲ್ಲ. ಹೀಗಾಗಿ ಇವು ಭೂಮಿಯ ಮೇಲಣ ಜೀವಜಂತುಗಳ ಮೇಲೆ ಪರೋಕ್ಷವಾಗಿ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇನ್ನು ಪ್ಲಾಸ್ಟಿಕ್‌ನ್ನು ಸುಟ್ಟರಂತೂ ಅದು ಹೊರಸೂಸುವ ಹೊಗೆಯು ಮಾಲಿನ್ಯಕಾರಕವಾಗಿದ್ದು ಮಾನವನ ಮಾತ್ರವಲ್ಲದೆ ಪರಿಸರದ ಆರೋಗ್ಯಕ್ಕೂ ಹಾನಿಕಾರಕವಾದುದಾಗಿದೆ. ಈ ಎಲ್ಲ ಕಾರಣಗಳಿಗಾಗಿ ಪ್ಲಾಸ್ಟಿಕ್‌ ಅನ್ನು “ಆಧುನಿಕ ಶತಮಾನದ ಹೆಮ್ಮಾರಿ’ ಎಂದೇ ಕರೆಯಲಾಗುತ್ತದೆ.

ಪ್ಲಾಸ್ಟಿಕ್‌ ಮತ್ತು ಪರಿಸರ

– 5 ಟ್ರಿಲಿಯನ್‌ಗೂ ಅಧಿಕ ಪ್ಲಾಸ್ಟಿಕ್‌ ತುಂಡುಗಳು ಸಾಗರದಲ್ಲಿ ತೇಲುತ್ತಿವೆ.

– ಶೇ. 73-ಜಾಗತಿಕವಾಗಿ ಸಮುದ್ರ ತೀರದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಲ್ಲಿ ಸೇರಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳು. ಇದರಲ್ಲಿ ಸಿಗರೇಟ್‌ ಬಟ್ಸ್‌ನ ಫಿಲ್ಟರ್‌ಗಳು, ಬಾಟಲಿಗಳು, ಬಾಟಲಿ ಮುಚ್ಚಳಗಳು, ಆಹಾರದ ಪೊಟ್ಟಣಗಳು, ಪ್ಲಾಸ್ಟಿಕ್‌ ಬ್ಯಾಗ್‌ಗಳು ಮತ್ತು ಕ್ಯಾನ್‌ಗಳು.

– ವಿಶ್ವದಲ್ಲಿ ಪ್ಲಾಸ್ಟಿಕ್‌ ಉತ್ಪಾದನೆಯ ಪ್ರಮಾಣವು 1950ರಲ್ಲಿ 2.1ಮಿಲಿಯನ್‌ ಟನ್‌ಗಳಷ್ಟಾಗಿ ದ್ದರೆ 1993ರ ವೇಳೆಗೆ ಇದು 147 ಮಿಲಿಯನ್‌ ಟನ್‌ಗಳಿಗೆ ಏರಿಕೆಯಾಗಿದೆ. 2015ರಲ್ಲಿ ಇದು 406 ಮಿಲಿಯನ್‌ ಟನ್‌ಗಳನ್ನು ತಲುಪಿತು.

–  2050ರ ವೇಳೆಗೆ ಭೂಮಿಯಲ್ಲಿರುವ ಸೀಬರ್ಡ್‌ ಪ್ರಭೇದದ ಪ್ರತಿಯೊಂದು ಪಕ್ಷಿಯೂ ಪ್ಲಾಸ್ಟಿಕ್‌ನ್ನು ಸೇವಿಸಲಿವೆ.

– ಅಂಕಿಅಂಶದ ಪ್ರಕಾರ ಶೇ. 12ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸುಡಲಾಗುತ್ತಿದೆ. ಇನ್ನು ಶೇ.79 ರಷ್ಟು ತ್ಯಾಜ್ಯ ಭೂಗರ್ಭಕ್ಕೆ ಸೇರಲ್ಪಡುತ್ತಿವೆ ಇಲ್ಲವೇ ಪರಿಸರದಲ್ಲಿ ಎಲ್ಲೆಂದರಲ್ಲಿ ರಾಶಿ ಬೀಳುತ್ತಿವೆ.

–  ಪ್ಲಾಸ್ಟಿಕ್‌ನ್ನು ಪ್ಯಾಕೇಜಿಂಗ್‌ಗಾಗಿ ಭಾರೀ ಪ್ರಮಾಣ ದಲ್ಲಿ ಬಳಸಲಾಗುತ್ತಿದೆ. ಈ ಪೈಕಿ ಬಹುತೇಕ ಏಕಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳಾಗಿವೆ.

–  ಶೇ. 40ಕ್ಕೂ ಅಧಿಕ ಪ್ಲಾಸ್ಟಿಕ್‌ ವಸ್ತುಗಳು ಏಕಬಳಕೆಯ ಬಳಿಕ ಪರಿಸರವನ್ನು ಸೇರುತ್ತಿವೆ.

–  ಏಕಬಳಕೆಯ ಪ್ಲಾಸ್ಟಿಕ್‌ ವಸ್ತುಗಳಿಗೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ನಿಷೇಧ ಹೇರಲಾಗಿದ್ದು ಇದರಲ್ಲಿಭಾರತವೂ ಸೇರಿದೆ.

– ಪ್ರತೀ ನಿಮಿಷಕ್ಕೆ ಒಂದು ಟ್ರಕ್‌ ಲೋಡ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸಾಗರವನ್ನು ಸೇರುತ್ತಿದೆ.

–  ಜಾಗತಿಕವಾಗಿ ಕಡಲತೀರದಲ್ಲಿರುವ ಒಟ್ಟಾರೆ ತ್ಯಾಜ್ಯದಲ್ಲಿ ಶೇ. 73ರಷ್ಟು ಪ್ಲಾಸ್ಟಿಕ್‌ನದ್ದಾಗಿದೆ.

– 2050ರ ವೇಳೆಗೆ ಸಾಗರದಲ್ಲಿ ಮೀನಿಗಿಂತ ಪ್ಲಾಸ್ಟಿಕ್‌ನ ಪ್ರಮಾಣವೇ ಹೆಚ್ಚಾಗಿರಲಿದೆ.

–  ಪ್ರತೀವರ್ಷ ಮನುಷ್ಯನೊಬ್ಬ ಸರಾಸರಿ 70,000 ಮೈಕ್ರೋಪ್ಲಾಸ್ಟಿಕ್‌ ಕಣಗಳನ್ನು ಸೇವಿಸುತ್ತಾನೆ.

– 50ವರ್ಷಗಳ ಅವಧಿಯಲ್ಲಿ ಜಾಗತಿಕವಾಗಿ ಪ್ಲಾಸ್ಟಿಕ್‌ ಉತ್ಪಾದನೆಯ ಪ್ರಮಾಣ ದುಪ್ಪಟ್ಟಾಗಿದೆ.

- ತೈಲ ಸೋರಿಕೆ ಪರಿಸರದ ಮೇಲೆ ತೀವ್ರ ತೆರನಾದ ಹಾನಿಯ ನ್ನುಂಟು ಮಾಡುತ್ತದೆ. ಇದರಿಂದ ನೆಲ, ಜಲ, ವಾಯು ಈ ಮೂರೂ ಮಾಲಿನ್ಯಕ್ಕೀಡಾಗಿ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳ ಮತ್ತು ಸಮುದ್ರ ಮಾಲಿನ್ಯದಲ್ಲೂ ಇದರ ಪಾತ್ರ ಅತ್ಯಂತ ಹೆಚ್ಚಿನದಾಗಿದೆ. ತೈಲ ಸೋರಿಕೆಗೆ ಕಡಿವಾಣ ಹಾಕಲು ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

– ಕೃಷಿ, ಗಣಿಗಾರಿಕೆ, ಕಾಗದಗಳ ಉತ್ಪಾದನೆಯಾದಿಯಾಗಿಕೈಗಾರಿಕೆಗಾಗಿ ಅರಣ್ಯ ನಾಶ ನಿರಂತರವಾಗಿ ಸಾಗು ತ್ತಿದೆ. ಇದರಿಂದ ವನ್ಯ ಜೀವಿ ಮತ್ತು ಜೀವವೈವಿ ಧ್ಯತೆಯ ಮೇಲೆ ಗಂಭೀರ ಪರಿಣಾಮ ಗಳುಂಟಾಗುತ್ತಿವೆ. ಹಾಲಿ ಇರುವ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸುವ ಜತೆಯಲ್ಲಿ ವಿಸ್ತರಣೆಯ ನಿಟ್ಟಿನಲ್ಲಿ ಸಮರೋಪಾದಿ ಯಲ್ಲಿ ಕಾರ್ಯನಿರ್ವಹಿಸುವ ತುರ್ತು ಅಗತ್ಯವಿದೆ.

-ಪರಿಸರ ಹಾನಿ ಎಂದಾಕ್ಷಣ ನೆನಪಿಗೆ ಬರುವುದು ಪ್ಲಾಸ್ಟಿಕ್‌. ಹಲವಾರು ದಶಕಗಳಿಂದ ಈ ಬಗ್ಗೆ  ತಜ್ಞರು, ಸರಕಾರ ಆದಿಯಾಗಿ ಎಲ್ಲರೂ ಮಾತನಾಡುತ್ತಲೇ ಬಂದಿದ್ದರೂ ಪ್ಲಾಸ್ಟಿಕ್‌ಗೆ ಸಮರ್ಪಕವಾದ ಪರ್ಯಾಯವನ್ನು ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇಷ್ಟು ಮಾತ್ರವಲ್ಲದೆ ಪ್ಲಾಸ್ಟಿಕ್‌ ತ್ಯಾಜ್ಯಗಳ ಸಮರ್ಪಕ ವಿಲೇವಾರಿಯೂ ಇನ್ನೂ ಬಾಯಿಮಾತಿನಲ್ಲಿಯೇ ಉಳಿದಿದೆ. ಇದು ಇಡೀ ವಿಶ್ವ ಎದುರಿಸುತ್ತಿರುವ ಸಮಸ್ಯೆಯಾಗಿರುವುದರಿಂದ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಮುಕ್ತಿ ಕೊಡಿಸಲೇಬೇಕಾದ ಅನಿವಾರ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next