Advertisement

ಜೂ.10: ತೊಕ್ಕೊಟ್ಟು ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

08:42 PM Jun 06, 2019 | Sriram |

ಉಳ್ಳಾಲ: ಎಂಟು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆಯ ಕಾಮಗಾರಿ ಶೇ. 98 ಪೂರ್ಣಗೊಂಡಿದೆ. ಕೊನೆಯ ಹಂತದ ಫಿನಿಶಿಂಗ್‌ ಕಾಮಗಾರಿ ಬಾಕಿ ಉಳಿದಿದ್ದು ಎರಡು ದಿನಗಳಲ್ಲಿ ಪೂರ್ಣಗೊಂಡು ಜೂ. 10 ರಂದು ಸಂಚಾರಕ್ಕೆ ಮುಕ್ತವಾಗಲಿದೆ.

Advertisement

ರಾಜಕೀಯ ಕೆಸರೆರಚಾಟದೊಂದಿಗೆ ಹೆದ್ದಾರಿಯ ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಎರಡು ವರ್ಷಗಳಿಂದ ಪ್ರಸಿದ್ಧಿ ಪಡೆದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾ ರದ ವಸ್ತುವಾಗಿತ್ತು. ಮೇಲ್ಸೇತುವೆ ಸಂಚಾರಕ್ಕೆ ಮುಕ್ತ ಮಾಡುವ ವಿಚಾರದಲ್ಲಿ ಆರು ತಿಂಗಳಿಂದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಹಲವಾರು ನಿಗದಿಯಾದ ದಿನಾಂಕಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದವು. ಖಾಸಗಿ ಸಹಭಾಗಿತ್ವದಲ್ಲಿ ನವಯುಗ್‌ ಸಂಸ್ಥೆ ಆರ್ಥಿಕ ಅಡಚಣೆಯಿಂದ ಕಾಮಗಾರಿ ವಿಳಂಬವಾಗಿತ್ತು.

ಕೇಂದ್ರ ಸರಕಾರ ಹಣಕಾಸಿನ ನೆರವು ನೀಡಿದ ಅನಂತರ ಕಾಮಗಾರಿ ವೇಗಪಡೆದು ಈಗ ಅಂತಿಮಗೊಳ್ಳುತ್ತಿದೆ. ಜೂ. 8ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು,ಜೂ. 10ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ.

ಸಸ್ಪೆನ್ಶನ್‌ ಜಾಯಿಂಟ್‌ ಕಾಮಗಾರಿ ಪೂರ್ಣ
ಮೇಲ್ಸೇತುವೆ ಜಂಕ್ಷನ್‌ನ ಅಂಡರ್‌ಪಾಸ್‌ ಬಳಿ ಪಿಲ್ಲರ್‌ಗಳ ಮೇಲಿನ ಕಾಂಕ್ರೀಟ್‌ ಭಾಗದಲ್ಲಿ ಸಸ್ಪೆನ್ಶನ್‌ ಜಾಯಿಂಟ್‌ ಕಾಮಗಾರಿ ಭರದಿಂದ ಸಾಗುತ್ತಿದ್ದು ಎಂಟನೇಯ ಸಸ್ಪೆನ್ಶನ್‌ ಜಾಯಿಂಟ್‌ ಕಾಮಗಾರಿ ಗುರುವಾರ ಪೂರ್ಣಗೊಡಿಂದೆ. ಇದರೊಂದಿಗೆ ಉಳಿದಿರುವ ತಡೆಗೋಡೆ ನಿರ್ಮಾಣ ಕಾರ್ಯ ಅಂತಿಮವಾಗಲಿದ್ದು, ಶುಕ್ರವಾರ, ಶನಿವಾರ ಸಸ್ಪೆನ್ಶನ್‌ ಜಾಯಿಂಟ್‌ ಬಳಿ ಬಾಕಿ ಉಳಿದಿರುವ ಡಾಮರು ಕಾಮಗಾರಿ ಪೂರ್ಣಗೊಳ್ಳಲಿದೆ.

ಉಳ್ಳಾಲ ಕ್ರಾಸ್‌ ಅಂಬಿಕಾರಸ್ತೆ ಬಳಿ ಸೂಕ್ತ
ಮೇಲ್ಸೇತುವೆ ಉಳ್ಳಾಲ ಕ್ರಾಸ್‌ ಬಳಿ ಡೆಡ್‌ ಎಂಡ್‌ ನೀಡಿದ್ದರಿಂದ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲ ಕ್ರಾಸ್‌ ಬದಲು ಹೆದ್ದಾರಿಯಲ್ಲಿ ಸುಮಾರು 200ಮೀ. ದೂರದ ಕಾಪಿಕಾಡ್‌ ಬಳಿ ಉಳ್ಳಾಲ ಕ್ರಾಸ್‌ ರಸ್ತೆ ನಿರ್ಮಾಣ ಕಾರ್ಯ ಜೂ. 10ರೊಳಗೆ ನಡೆಯಲಿದೆ.

Advertisement

ಕ್ರಾಸ್‌ ರಸ್ತೆಯಾಗುವ ಕಾಪಿಕಾಡು ಹೆದ್ದಾರಿ ಇಳಿಜಾರಾಗಿದ್ದು, ಇನ್ನೊಂದು ಬದಿಯ ಹೆದ್ದಾರಿ ಬದಿ ಅಳವಾಗಿದ್ದು ಇದರ ಬದಲು ಅಂಬಿಕಾರಸ್ತೆ ಬಳಿ ಉಳ್ಳಾಲ ಕ್ರಾಸ್‌ ರಸ್ತೆಯನ್ನಾಗಿ ಬದಲಾವಣೆ ಮಾಡಿದರೆ, ಅಪಘಾತವನ್ನು ತಡೆಯಲು ಸಾಧ್ಯವಿದೆ. ಇದರಿಂದ ಕಾಪಿಕಾಡ್‌ ಅಂಬಿಕಾರಸ್ತೆ ಮತ್ತು ಕುಂಪಲ ಬೈಪಾಸ್‌ ಪ್ರಯಾಣಿಕರಿಗೂ ಸಹಕಾರಿಯಾಗಲಿದೆ.

ಮೇಲ್ಸೇತುವೆ 24 ಗಂಟೆ ಕಾಮಗಾರಿ
ಮೂರು ವರ್ಷಗಳಲ್ಲಿ ಮೇಲ್ಸೇತುವೆ ಕಾಮಗಾರಿ 6ರಿಂದ 8 ಮಂದಿ ಭಾರೀ ಕಷ್ಟದಲ್ಲಿ ನಿರ್ವಹಿಸುತ್ತಿದ್ದರು. ಹೆಚ್ಚುವರಿ ಹಣ ಬಿಡುಗಡೆಯಾದ ಬಳಿಕ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ದಿನದ 24 ಗಂಟೆಗಳ ಕಾಲ ನಿರಂತರ ಕಾಮಗಾರಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಮಳೆಯೂ ತಡವಾಗಿದ್ದರಿಂದ ಕಾಮಗಾರಿಗೆ ಯಾವುದೇ ಅಡೆತಡೆ ಬಂದಿಲ್ಲ.

ಜಂಕ್ಷನ್‌ ಕೆಳರಸ್ತೆ ಸರ್ವಿಸ್‌ ರಸ್ತೆಯಾಗಿ ಬದಲು
ಮೇಲ್ಸೇತುವೆ ಸಂಚಾರ ಮುಕ್ತವಾಗುತ್ತಿದ್ದಂತೆ ತೊಕ್ಕೊಟ್ಟು ಜಂಕ್ಷನ್‌ನ ಎರಡೂ ರಸ್ತೆಗಳು ಸರ್ವಿಸ್‌ ರಸ್ತೆಗಳಾಗಿ ಬದಲಾಗಲಿದ್ದು, ದ್ವಿಪಥದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಪ್ರಸ್ತುತ ಏಕಪಥದಲ್ಲಿ ಸಂಚಾರಕ್ಕೆ ಅವಕಾಶವಿದ್ದು, 100 ಮೀ. ಸಂಚರಿಸುವವರೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಬೇಕಾದರೆ ಸುಮಾರು 1.5 ಕಿ.ಮೀ. ಸಂಚರಿಸುವ ಸಮಸ್ಯೆಯಿತ್ತು. ಜಂಕ್ಷನ್‌ನ ಅಂಡರ್‌ಪಾಸ್‌ನಲ್ಲೂ ದ್ವಿಪಥ ಸಂಚಾರಕ್ಕೆ ಮುಕ್ತವಾಗಲಿದೆ.

 ದ್ವಿಪಥ ರಸ್ತೆ ಸಂಚಾರ
ಆರಂಭವಾಗಲಿ
ಎಂಟು ವರ್ಷಗಳ ಹಿಂದೆ ಕಾಮಗಾರಿ ಆರಂಭವಾದರೂ ಮೂರು ವರ್ಷಗಳಿಂದ ತೊಕ್ಕೊಟ್ಟು ಜಂಕ್ಷನ್‌ ಸಮಸ್ಯೆ ಹೆಚ್ಚಾಗಿತ್ತು. ಮಲ್ಸೇತುವೆ ಕಾಮಗಾರಿಯನ್ನು ಬಾಕ್ಸ್‌ ಮಾದರಿಯಲ್ಲಿ ನಿರ್ಮಾಣ ಮಾಡಿದ್ದರಿಂದ ತೊಕ್ಕೊಟ್ಟಿನ ಒಂದು ಬದಿಯಿಂದ ಇನ್ನೊಂದು ಬದಿ ದಾಟಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ವಿಸ್‌ ರಸ್ತೆಯಲ್ಲಿ ದ್ವಿಫಥ ಸಂಚಾರ ಆರಂಭವಾದರೆ ದೊಡ್ಡ ಸಮಸ್ಯೆ ನಿವಾರಣೆಯಾದಂತಾಗುತ್ತದೆ.
– ನವೀನ್‌, ಸ್ಥಳೀಯ ವ್ಯಾಪಾರ

 ರವಿವಾರದೊಳಗೆ ಕಾಮಗಾರಿ ಪೂರ್ಣ
ಸಂಸ್ಥೆಯ ಕಾರ್ಮಿಕರು ನಿರಂತರವಾಗಿ ಮೇಲ್ಸೇತುವೆ ಕಾಮಗಾರಿ ನಡೆಸಿದ್ದರಿಂದ ಡೆಡ್‌ಲೈನ್‌ ಮುಟ್ಟಲು ಸಾಧ್ಯವಾಗಿದ್ದು, ರವಿವಾರದೊಳಗೆ ಕಾಮಗಾರಿ ಪೂರ್ಣಗೊಂಡು ಜೂ. 10ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ಇದರೊಂದಿಗೆ ಸರ್ವಿಸ್‌ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ನಡೆಸಲಾಗುವುದು
– ಶಂಕರ್‌,ಯೋಜನ ಅಧಿಕಾರಿ,ನವಯುಗ್‌ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next