ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂ. 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರೈತ ವಿದ್ಯಾನಿಧಿ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮಕ್ಕೆ ಈ ವಿದ್ಯಾರ್ಥಿಗಳನ್ನು ಕರೆತರಲು ಮತ್ತು ವಾಪಸ್ ಕಳುಹಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಮತ್ತಿತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ರವಿವಾರ ಸಭೆ ನಡೆಸಿದ ಸಚಿವರು ಮುಖ್ಯಮಂತ್ರಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಲಹೆ ನೀಡಿದರು.
ಕಾರ್ಯಕ್ರಮ ಸ್ಥಳಕ್ಕೆ ಫಲಾನುಭವಿ ವಿದ್ಯಾರ್ಥಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸಂಬಂಧಿಸಿದ ಕಾಲೇಜುಗಳಲ್ಲಿ ಬಸ್ ಇಲ್ಲದಿದ್ದಲ್ಲಿ ಸ್ಥಳೀಯ ಶಾಸಕರೊಂದಿಗೆ ಅಧಿಕಾರಿಗಳು ಸಮನ್ವಯ ಸಾಧಿಸಿದರೆ ಶಾಸಕರು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವರು. ವಿದ್ಯಾರ್ಥಿಗಳನ್ನು ಕರೆತರುವ, ಕಳುಹಿಸಿಕೊಡುವ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಸಚಿವರು ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅನುಭವಿ ಉಪನ್ಯಾಸಕರಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.
ಸಿದ್ಧತೆಗಳನ್ನು ಪರಿಶೀಲಿಸಲು ಭೇಟಿ ನೀಡುವುದಾಗಿ ತಿಳಿಸಿದ ಸಚಿವರು ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯ ಫಲಾನುಭವಿಗಳಾಗಿ ವಿವಿಧ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲು ಅನುಕೂಲವಾಗುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದರು.
ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆ ತರಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಸಂಬಂಧಿಸಿದ ಅಧಿಕಾರಿಗಳು ಪಟ್ಟಿ ನೀಡುವಂತೆ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಮತ್ತು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್ ತಿಳಿಸಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಶಿಕ್ಷಣ ಇಲಾಖೆ, ಪ.ಪೂ. ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.