ವಾಷಿಂಗ್ಟನ್: ಪಾನಿಪೂರಿ ಯಾರಿಗೆ ಇಷ್ಟ ಇಲ್ಲ ಹೇಳಿ. ಭಾರತದ ಅತ್ಯಂತ ನೆಚ್ಚಿನ ಚಾಟ್ಸ್‌ಗಳಾದ ಪಾನಿ ಪೂರಿ, ಗೋಲ್ ಗಪ್ಪ, ಪುಚ್ಕಾಸ್ ಇಂದು ಮತ್ತೊಮ್ಮೆ ಜಗತ್ತಿಗೆ ತೆರೆದುಕೊಂಡಿದೆ. ನೀವೇನಾದ್ರೂ ಇಂದು ಗೂಗಲ್ ಡೂಡಲ್ ನೋಡಿದ್ದೀರಾ ಅಂತಾದರೆ ಖಂಡಿತಾ ನಿಮ್ಮ ಬಾಯಲ್ಲಿ ನೀರೂರದೇ ಇರದು.
ಜುಲೈ 12 ನ್ನು ಜಗತ್ತಿನ ದೈತ್ಯ ಸರ್ಚ್ ಇಂಜಿನ್ ಗೂಗಲ್ ತನ್ನ ಇಂಟರಾಕ್ಟೀವ್ ಗೇಮ್ ಡೂಡಲ್ ಮೂಲಕ ಭಾರತದ ಅತ್ಯಂತ ನೆಚ್ಚಿನ ಸ್ಟ್ರೀಟ್‌ಫುಡ್‌ಗಳಾದ ಪಾನಿ ಪೂರಿ, ಗೋಲ್ ಗಪ್ಪ ಮೂಲಕ ಸಂಭ್ರಮಿಸಿದೆ.
ಜುಲೈ 12 ಕ್ಕೂ ಪಾನಿಪೂರಿಗೂ ವಿಶೇಷ ಸಂಬಂಧವಿದೆ. ಆ ಕಾರಣಕ್ಕಾಗಿಯೇ ಈ ದಿನ ಗೂಗಲ್ ತನ್ನ ಡೂಡಲ್ ಮೂಲಕ ಪಾನಿಪೂರಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದೆ.
2015 ರ ಜುಲೈ 12 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿನ ಇಂದೋರಿ ಝೈಕಾ ಮತ್ತು ದೈನಿಕ್ ಭಾಸ್ಕರ್ ಎನ್ನುವ ರೆಸ್ಟೋರೆಂಟ್‌ಗಳು ಮಾಸ್ಟರ್ ಚೆಫ್ ನೇಹಾ ಶಾ ಅವರ ಮಾರ್ಗದರ್ಶನದಲ್ಲಿ 51 ಫ್ಲೇವರ್‌ಗಳ ಮೂಲಕ ಪಾನಿಪೂರಿಯನ್ನು ತಯಾರಿಸಿ ವಿಶ್ವ ದಾಖಲೆ ಬರೆದಿತ್ತು. ಈ ದಾಖಲೆ ಬರೆದ ಸುಮಾರು 8 ವರ್ಷಗಳ ಬಳಿಕ ಇದೇ ದಿನ ಗೂಗಲ್, ಪಾನಿಪೂರಿಯ ತನ್ನ ಡೂಡಲ್ ಗೇಮ್ಸ್‌ನ್ನು ಬಿಡುಗಡೆ ಮಾಡಿ ಪಾನಿಪೂರಿಗೆ ವಿಶೇಷ ಗೌರವ ಸಲ್ಲಿಸಿದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಪಾನಿಪೂರಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ಕೇವಲ ಹೆಸರಷ್ಟೇ ಅಲ್ಲ, ಪಾನಿಪೂರಿ ತಯಾರಿಕೆಯಲ್ಲಿನ ವಿಧಾನ, ರುಚಿ, ಬಳಸುವ ಸಾಮಗ್ರಿಗಳಲ್ಲೂ ವ್ಯತ್ಯಾಸಗಳಿವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಸೇರಿ ದಕ್ಷಿಣ ಭಾರತದ ಭಾಗಗಳಲ್ಲಿ ಬಟಾಣಿ, ಮಸಾಲೆ ಪಾನಿಯ ಮಿಶ್ರಣವನ್ನು ಹಾಕಿದ ಪೂರಿಯೊಂದಿಗೆ ಸವಿಯಲು ನೀಡಲಾಗುತ್ತದೆ.
ಪಂಜಾಬ್, ಜಮ್ಮು-ಕಾಶ್ಮೀರ, ನವದೆಹಲಿಯಲ್ಲಿ ಬೇಯಿಸಿದ ಆಲೂಗಡ್ಡೆ, ಕಡಲೆ, ಜಲ್ಜೀರಾ ಫ್ಲೇವರ್‌ನ ಪಾನಿಯನ್ನು ಸಣ್ಣ ಪೂರಿಯ ಒಳಗೆ ಹಾಕಿ ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ʻಗೋಲ್ ಗಪ್ಪʼ ಎಂದು ಕರೆಯಲಾಗುತ್ತದೆ.
ಇನ್ನು ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಹುಣಸೆ ಹಣ್ಣಿನ ತಿರುಳನ್ನು ಬಳಸಿ ಪಾನಿಪೂರಿಯನ್ನು ತಯಾರಿಸುತ್ತಾರೆ. ಇದನ್ನು ಪುಚ್ಕಾಸ್ ಅಥವಾ ಫುಚ್ಕಾಸ್ ಎಂದು ಅಲ್ಲಿನ ಜನ ಕರೆಯುತ್ತಾರೆ.
ಒಟ್ಟಾರೆಯಾಗಿ ತನ್ನ ಇಂದಿನ ಡೂಡಲ್ ಗೇಮ್ ಬಗ್ಗೆ ಬರೆದುಕೊಂಡಿರುವ ಗೂಗಲ್ ಪಾನಿಪೂರಿಯನ್ನು, ʻಆಲೂಗಡ್ಡೆ, ಕಡಲೆ, ಮೆಣಸಿನಕಾಯಿ, ಮಸಾಲೆಗಳು ಮತ್ತು ಸುವಾಸನೆಯುಕ್ತ ನೀರಿನ್ನು ತುಂಬಿರುವ ಗರಿಗರಿಯಾದ ಚಿಪ್ಪಿನಿಂದ ಕೂಡಿದ ದಕ್ಷಿಣ ಏಷ್ಯಾದ ಜನಪ್ರಿಯ ಆಹಾರʼ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: Explainer;ವಿವೇಕಾನಂದರ ಬಗ್ಗೆ ಅವಹೇಳನ…ಅಮೋಘ ದಾಸ್ ಗೆ ಇಸ್ಕಾನ್ ನಿಷೇಧ..ಏನಿದು ವಿವಾದ