ಕುಷ್ಟಗಿಯ ಭಾಗದಲ್ಲಿ ಕಾಲಕಾಲಕ್ಕೆ ಮಳೆಯಾಗದೇ ಇರುವುದು ಒಂದು ಸಮಸ್ಯೆ. ಅಂತರ್ಜಲ ಕೊರತೆಯಿಂದ ಬೆಳೆ ಕೈಗೆ ಬಾರದೇ ಇರುವುದು ಮತ್ತೂಂದು ಸಮಸ್ಯೆ. ಈ ಕಾರಣಕ್ಕಾಗಿ, ರೈತರು ವಾಣಿಜ್ಯ ಬೆಳೆಯನ್ನು ಬೆಳೆಯಲು ಹಿಂಜರಿಯುವ ಈ ಸಮಯದಲ್ಲಿ, ಇಲ್ಲೊಬ್ಬ ರೈತ ಶುಗರ್‌ಲೆಸ್ ಬಾರೆಹಣ್ಣು ಬೆಳೆದು ಒಂದು ವರ್ಷದ ಬೆಳೆಯಲ್ಲಿ 7- 8 ಲಕ್ಷ ರೂ. ಗೂ ಅಧಿಕ ಲಾಭ ಗಳಿಸಿದ್ದಾರೆ.
ಹನಮೇಶ ಉಡಮಕಲ್ ಎಂಬುವವರೇ ಆ ರೈತರು. ಅವರು ತಮ್ಮ 6 ಎಕರೆ ಜಮೀನಲ್ಲಿ 2,400 ಬಾರೆಹಣ್ಣಿನ ಸಸಿಗಳನ್ನು ನಾಟಿ ಮಾಡಿದ ನಂತರ ಕೀಟ ಬಾಧೆ, ಗಿಡ ರಕ್ಷಣೆಗೆ ಖರ್ಚು ಸಹ ಹೆಚ್ಚು.
ಮೂರು ವರ್ಷದ ಹಿಂದೆ ನಾಟಿ : ಅವರು, ಮೂರು ವರ್ಷಗಳ ಹಿಂದೆ, ಸಸಿಗಳನ್ನು ನಾಟಿ ಮಾಡಿದರು. ಮೊದಲು ಮಳೆಯ ಕೊರತೆ ಕಂಡರೂ ನಂತರದ ದಿನಗಳಲ್ಲಿ ಚೆನ್ನಾಗಿ ಮಳೆಯಾಯಿತು. ಪ್ರತಿದಿನ ಗಿಡದ ಸುತ್ತಲಿನ ಕಸ ತೆಗೆಯಲು ಕೂಲಿ ಕೊಡಬೇಕಾಗುತ್ತದೆ. ಬೆಳೆಯ ಪೋಷಣೆ ಹಾಗೂ ಸಂರಕ್ಷಣೆಗೆ ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡಲಾಗಿದೆ.
ಎರಡು ಮೂರು ತಿಂಗಳ ಫಸಲು : 2400 ಗಿಡಗಳಲ್ಲಿ ಕಟಾವಿಗೆ ಬಂದಿರುವ ಬಾರೆ ಹಣ್ಣಿನಿಂದ ಈ ವರ್ಷದ ದರ 2- 5 ಲಕ್ಷ ರೂ.ಗಳ ಹಣ್ಣನ್ನು ಮಾರಾಟ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 40 ರೂ. ಇದೆಯಾದರೂ, ನೇರವಾಗಿ ಜಮೀನಿನಲ್ಲಿ ಖರೀದಿಸಿದರೆ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ 2- 3 ತಿಂಗಳ ಕಾಲ ಹಣ್ಣಿನ ಫಸಲು ಇರುವ ನಿರೀಕ್ಷೆ ಇದ್ದು. 7-8 ಲಕ್ಷ ರೂಗಳ ಆದಾಯ ಬರುವ ಸಾಧ್ಯತೆ ಇದೆ. ಪ್ರತಿದಿನ ಎರಡರಿಂದ ಎರಡೂವರೆ ಟನ್‌ಫಸಲು ಬರುತ್ತದೆ. ಅವುಗಳನ್ನು ಪ್ರತಿದಿನ 25- 30 ಜನರು ಕಟಾವು ಮಾಡುತ್ತಾರೆ. ನಂತರ ಅವುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಹೈದರಾಬಾದ್, ಮುಂಬಯಿ, ಮಂಗಳೂರು, ಬೆಂಗಳೂರು ಸೇರಿದಂತೆ ಸಮೀಪದ ಕುಷ್ಟಗಿ, ತಾವರಗೇರಾ,ಕನಕಗಿರಿ, ಕಾರಟಗಿ, ಗಂಗಾವತಿಯ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಕೆಲ ಗುತ್ತಿಗೆದಾರರು ಜಮೀನಿಗೇ ನೇರವಾಗಿ ಬಂದು ಟನ್‌ಗಳ ಲೆಕ್ಕದಲ್ಲಿ ಖರೀದಿಸಿಕೊಂಡು ಹೋಗುತ್ತಾರೆ.
-ಎನ್. ಶಾಮೀದ್ ತಾವರಗೇರಾ