ಮುಂಬೈ:ನಿಸರ್ಗದ ನಿಯಮ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿ ಮುಂಬೈ ಜುಹೂ ಬೀಚ್ ನಲ್ಲಿ ರಾಶಿ, ರಾಶಿಯಾಗಿ ಬಂದು ಬಿದ್ದ ಕಸ! ಏಟಿಗೆ ಎದಿರೇಟು ಎಂಬಂತೆ ಸಮುದ್ರಕ್ಕೆ ಎಸೆದ ಪ್ಲಾಸ್ಟಿಕ್, ಕಸ, ಕಡ್ಡಿಗಳೆನ್ನೆಲ್ಲಾ ದಡಕ್ಕೆ ತಂದು ಎಸೆದಿದೆ. ಇದರಿಂದಾಗಿ ಜುಹೂ ಬೀಚ್ ಡಂಪಿಂಗ್ ಯಾರ್ಡ್ನಂತೆ ಕಾಣಿಸುತ್ತಿತ್ತಲ್ಲದೇ, ಕೆಟ್ಟ ವಾಸನೆ ಬೀಸುತ್ತಿತ್ತು!
ಕಳೆದ ಒಂದು ವಾರದಿಂದ ಬೃಹತ್ ಪ್ರಮಾಣದಲ್ಲಿ ಅಲೆಗಳು ರಾಶಿ, ರಾಶಿ ಕಸವನ್ನು ತಂದು ದಡದಲ್ಲಿ ಚೆಲ್ಲಿವೆ. ಸ್ಥಳೀಯರು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಾಕುವ ಮೂಲಕ ಬಿಎಂಸಿಯ ಗಮನ ಸೆಳೆದಿದ್ದರು.
ಕೂಡಲೇ ಕಾರ್ಯಪ್ರವೃತ್ತವಾದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಹಗಲು ರಾತ್ರಿ ಜುಹೂ ಬೀಚ್ ನಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಚಗೊಳಿಸಿದ್ದರು. ಸಿಬ್ಬಂದಿಗಳು, ಮೆಷಿನ್ ಗಳ ಮೂಲಕ ಬರೋಬ್ಬರಿ 450 ಟನ್ ಕಸವನ್ನು ಬಿಎಂಸಿ ಸಾಗಿಸಿತ್ತು ಎಂದು ವರದಿ ತಿಳಿಸಿದೆ.
ಮುಂಬೈನ ಜುಹೂ ಬೀಚ್ ನಲ್ಲಿ ಭಾರೀ ಪ್ರಮಾಣದಲ್ಲಿ ಕಸದ ರಾಶಿ ಬಿದ್ದಿರುವುದು ಇದೇ ಮೊದಲ ಬಾರಿಯದ್ದಾಗಿಲ್ಲ. 2018ರ ಜುಲೈನಲ್ಲಿ ಅರೇಬಿಯನ್ ಸಮುದ್ರ ಟನ್ ಗಟ್ಟಲೇ ಕಸವನ್ನು ದಡಕ್ಕೆ ತಂದು ಸೇರಿಸಿತ್ತು. ಇದರಲ್ಲಿ ಬಹುತೇಕ ಪ್ಲಾಸ್ಟಿಕ್ ಸೇರಿಕೊಂಡಿದ್ದರಿಂದ ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿತ್ತು.
ಪರಿಸರದ ಕಾಳಜಿಯುಳ್ಳ ನೂರಾರು ಜನರು, ಎನ್ ಜಿಓಗಳು ಮುಂಬೈ ಬೀಚ್ ಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಸಮುದ್ರದ ದಂಡೆ ಮೇಲೆ ಕಸ, ಪ್ಲಾಸ್ಟಿಕ್ ಅನ್ನು ಎಸೆಯಬೇಡಿ ಎಂಬುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಸ ಎಸೆಯುವ ಪ್ರವೃತ್ತಿ ಹಾಗೆಯೇ ಮುಂದುವರಿದಿದೆ ಎಂದು ಎನ್ ಜಿಓ ಅಸಮಾಧಾನ ವ್ಯಕ್ತಪಡಿಸಿದೆ.