Advertisement

ದಾಂಪತ್ಯಗೀತೆಯಲ್ಲಿ ಮಾತು-ಮೌನಗಳ ಜುಗಲ್ಬಂದಿ  

03:50 AM Jul 07, 2017 | |

ಯಾವುದೋ ತರಬೇತಿಗಾಗಿ ಬಂದು ಕೆಲವು ವಾರಗಳ ಮಟ್ಟಿಗೆ ಅಲ್ಲಿದ್ದ ಯುವತಿಯರಲ್ಲಿ ಇಬ್ಬರು ನವವಿವಾಹಿತರು ನಿಜಕ್ಕೂ ವಿರಹದ ಯಾತನೆಯಿಂದಾಗಿ ತರಬೇತಿಯಲ್ಲಿ ಅರೆಮನಸ್ಸಿಂದ ಭಾಗವಹಿಸುತ್ತಿದ್ದರೋ ಏನೋ. ಸಂಜೆಯ ವಿರಾಮದ ವೇಳೆ ಅವಳಲ್ಲಿ ಒಬ್ಬಳಿಗೆ ಗಂಡನ ಫೋನ್‌ ಬಂತು. ಅವಳು ಮಾತು ಆರಂಭಿಸಿ ಅರ್ಧ ಗಂಟೆ ಆದಾಗ ಇನ್ನೊಬ್ಬಳಿಗೂ ಫೋನ್‌ ಬಂತು. ಐದು ನಿಮಿಷದೊಳಗೆ ಮಾತು ಮುಗಿಸಿ ಅವಳು ಫೋನಿಟ್ಟಳು. ಇನ್ನೂ ಮಾತು ಮುಗಿದಿರದ ಮೊದಲಿನವಳು ಬಾಯಿಬಿಟ್ಟು ಆಶ್ಚರ್ಯದಿಂದ ಇವಳನ್ನೇ ನೋಡುತ್ತಿದ್ದಳು. ಆಕೆ ತನ್ನ  ಆ ದಿನದ ದಿನಚರಿಯನ್ನೆಲ್ಲ ಸವಿವರವಾಗಿ ಒಪ್ಪಿಸಿ, ಗೆಳತಿಯರ ಬಗ್ಗೆ ಮಾತಾಡಿ, ಮನೆಯಲ್ಲಿ ಎಲ್ಲರ ಕ್ಷೇಮ ವಿಚಾರಿಸುತ್ತಿದ್ದಳು. ಅವಳ ಗಂಡನೂ ಅದೇ ರೀತಿಯ ಮಾತುಗಾರನಿರಬೇಕು. ಅವಳು ಬಹಳಷ್ಟು ಸಮಯ ಹೂಂಗುಟ್ಟುತ್ತಲೇ ಇರುತ್ತಿದ್ದಳು. ಆ ಇನ್ನೊಬ್ಬಳ ಮಾತು ಕಡಿಮೆಯೋ? ಅಥವಾ ಗಂಡನಿಗೆ ಕೇಳಿಸಿಕೊಳ್ಳುವ ವ್ಯವಧಾನವಿಲ್ಲವೋ, ಅವರ ಸಂಭಾಷಣೆಗಳು ಯಾವತ್ತೂ ನಿಮಿಷಗಳಲ್ಲೇ ಕೊನೆಯಾಗುತ್ತಿದ್ದವು. 

Advertisement

ಕೆಲವು ಗಂಡ-ಹೆಂಡತಿಯರ ಮಧ್ಯೆ ಮಾತಿಗೆ ಬರ ಬಂದಿರುತ್ತದೆ. ನೂರಾರು ಕಿಲೋಮೀಟರ್‌ ಒಟ್ಟಿಗೆ ಸ್ವಂತ ವಾಹನದಲ್ಲಿ ಪ್ರಯಾಣಿಸುವಾಗಲೂ ಮಾತಿನ ಮುತ್ತು ಉದುರೀತೆಂಬ ಭಯದಲ್ಲಿ ತುಟಿ ಅಲುಗಿಸದವರಿದ್ದಾರೆ. ವಾಚಾಳಿ ಹೆಂಡತಿ ಉತ್ಸಾಹದಿಂದ ಏನೇನೋ ಮಾತನಾಡುತ್ತಿದ್ದರೂ ಕನಿಷ್ಟಪಕ್ಷ ಅದನ್ನು ಆಲಿಸುತ್ತಿದ್ದೇನೆಂದು ಹೂಂಗುಟ್ಟಲೂ ಜಿಪುಣತನ ಕೆಲವರಿಗೆ. ಮನೆಯ ಯಾವುದೇ ವ್ಯವಹಾರಗಳ ಬಗ್ಗೆ ಇಂಥವರು ಹೆಂಡತಿಯಲ್ಲಿ ಚರ್ಚಿಸುವುದಿಲ್ಲ. ಎಲ್ಲದರಲ್ಲೂ ಏಕಪಕ್ಷೀಯ ನಿರ್ಧಾರ ಕೈಗೊಂಡುಬಿಡುತ್ತಾರೆ. ಹೆಂಡತಿ ತಾನಾಗಿ ಮನೆ ವಿಚಾರ ತಿಳಿಯಬಯಸಿದರೂ ಮಾತು ಬೆಳೆಸದೇ ಅವಳ ಉತ್ಸಾಹಕ್ಕೆ ತಣ್ಣೀರೆರಚಿಬಿಡುತ್ತಾರೆ. 

ಪ್ರೀತಿಸಿ ಮದುವೆಯಾದವರಲ್ಲಿ ಕೆಲವರು ಮದುವೆಯ ನಂತರ ತಮ್ಮ ಸಂಗಾತಿಗೆ ಅಪರಿಚಿತವಾದ ಬೇರೊಂದು ಸ್ವಭಾವವನ್ನು ಪ್ರದರ್ಶಿಸುತ್ತಾರೆ. ಮದುವೆಗೆ ಮೊದಲು ಹೇಳಿದ್ದಕ್ಕೂ ಈಗಿನ ವರ್ತನೆಗೂ ಅಜಗಜಾಂತರವಿರುತ್ತದೆ. ಏನಾದರೂ ಸಮಸ್ಯೆ ಬಂದಾಗ ನಿನ್ನನ್ನು ಮದುವೆಯಾದುದರಿಂದಲೇ ಹೀಗೆಲ್ಲಾ ಆಯ್ತು ಎಂದು ಸಂಗಾತಿಯ ಮೇಲೆ ತಪ್ಪು ಹೊರಿಸಿ ಬಿಡುತ್ತಾರೆ. ಹೆಂಗಸರೂ ಈ ವರ್ತನೆಗೆ ಹೊರತಲ್ಲ. ಮದುವೆಯಾದ ಹೊಸದರಲ್ಲಿ ಆಗಾಗ ಹೆಂಡತಿ ತನ್ನನ್ನು ಮೂದಲಿಸುವಾಗ ಆತ ನಕ್ಕು ಸುಮ್ಮನಾಗುತ್ತಿದ್ದ. ಆದರೆ ದಿನಗಳೆದಂತೆ ಆಕೆ ಇತರರೆದುರೂ ತನ್ನನ್ನು ಅದೇ ರೀತಿ ಹೀಯಾಳಿಸಲು ಪ್ರಾರಂಭಿಸಿದಾಗ ಆತನ ಆತ್ಮಾಭಿಮಾನಕ್ಕೆ ಪೆಟ್ಟು ಬಿತ್ತು. ಸಂಸಾರದಲ್ಲಿ ಅಪಸ್ವರಗಳು ಏಳಲಾರಂಭಿಸಿದವು. ಡೈವೋರ್ಸ್‌ ಪಡೆದು ಅವರಿಬ್ಬರು ದೂರವಾಗಲು ಆಕೆಯ ವಿವೇಚನಾರಹಿತ ಮಾತುಗಳೇ ಮೂಲಕಾರಣವಾದವು. ನನ್ನ ಹೆಂಡತಿ ಪೆದ್ದು, ವ್ಯವಹಾರ ಜ್ಞಾನವಿಲ್ಲದವಳು… ಈ ರೀತಿ ಗಂಡ, ತನ್ನ ಹೆಂಡತಿಯನ್ನು ಎಲ್ಲರೆದುರು ಹೀಯಾಳಿಸಿದಾಗ ನಿಜವಾದ ಪೆದ್ದು ಹುಡುಗಿಯ ಆತ್ಮಾಭಿಮಾನವೂ ಸೆಟೆದೇಳಬಹುದು. ಗಂಡನ ಮೇಲೆ ಜುಗುಪ್ಸೆ ಭಾವನೆ ಮೂಡಲು ಅವನ ಮಾತುಗಳೇ ಕಾರಣವಾಗಬಹುದು.
 
ಗಂಡನಿಗಿಂತ ಹೆಚ್ಚು ಶ್ರೀಮಂತ ಕುಟುಂಬದಿಂದ ಬಂದುದರಿಂದಲೋ, ಗಂಡನಿಗಿಂತ ಉನ್ನತ ಹುದ್ದೆಯಲ್ಲಿರುವುದರಿಂ ದಲೋ ಅಹಂಕಾರದಿಂದ ವರ್ತಿಸುವ ಹೆಂಗಸರು ಗಂಡನನ್ನು ತಾತ್ಸಾರದಿಂದ ಕಂಡು ಕುಹಕದ ಮಾತುಗಳನ್ನಾಡುತ್ತಾರೆ. ಇದರಿಂದ ಆತನಲ್ಲಿ ಕೀಳರಿಮೆ ಬೆಳೆಯುತ್ತದೆ. ಕೆಲವರಾದರೂ ಈ ಕೀಳರಿಮೆಯಿಂದ ಹೊರಬರಲು, ಹೆಂಡತಿಗೆ ಬುದ್ಧಿ ಕಲಿಸುತ್ತೇನೆಂದು ದುಶ್ಚಟಗಳ ದಾಸರಾಗುತ್ತಾರೆ. ಅಂತಹ ದಾಂಪತ್ಯ ಕೊನೆಗೆ ಛಿದ್ರವಾಗಿ ವಿಚ್ಛೇದನವೊಂದೇ ಪರಿಹಾರ ಎಂಬಲ್ಲಿಗೆ ತಲುಪುತ್ತದೆ. ಕೆಲವು ಹೆಂಗಸರು ಹಾಗೂ ಗಂಡಸರಿಗೆ ಮಕ್ಕಳ ಮುಂದೆ ತಮ್ಮ ಸಂಗಾತಿಯನ್ನು ದೂರುವ ಚಾಳಿಯಿರುತ್ತದೆ. 

ಮಕ್ಕಳನ್ನು ತಮ್ಮೆಡೆಗೆ ಒಲಿಸಿಕೊಳ್ಳುವ ಅವರ ಈ ಪ್ರಯತ್ನ, ದಾಂಪತ್ಯ ವಿರಸದಲ್ಲಿ ಅಂತ್ಯವಾಗುತ್ತದೆ. ಸುರಕ್ಷಿತವಾದ ತಮ್ಮ ಬಾಳಿಗೆ ತಾವೇ ಕೊಳ್ಳಿಯಿಡುವ ಮೂರ್ಖತನವೆಂದಷ್ಟೇ ಇದನ್ನು ಕರೆಯಬಹುದು. ಇವರ ನಡುವೆ ಮಕ್ಕಳಂತೂ ಅಡಕತ್ತರಿಯಲ್ಲಿ ಸಿಕ್ಕಂತೆ ಒದ್ದಾಡುತ್ತಾರೆ. ದಾಂಪತ್ಯ ಜೀವನ ಸುಗಮವಾಗಿ ಮುನ್ನಡೆಯಬೇಕಾದರೆ ಅಲ್ಲಿ ಮಾತೂ ಬೇಕು, ಮೌನವೂ ಬೇಕು. ಆದರೆ ಇವೆರಡನ್ನೂ ಯುಕ್ತವಾದ ಸ್ಥಳದಲ್ಲಿ, ಯುಕ್ತವಾದ ಪ್ರಮಾಣದಲ್ಲಿ, ಯುಕ್ತವಾದ ಸಮಯದಲ್ಲಿ ಬಳಸಬೇಕು. ಮಾತು ಬೇಕಾದೆಡೆ ಮೌನ ವಹಿಸುವುದು ಅಹಂಕಾರವೋ, ಅಸಡ್ಡೆಯೋ ಆಗಿ ಪರಿಗಣಿಸಲ್ಪಡುತ್ತದೆ. ಮೌನ ಬೇಕಾದಲ್ಲಿ ಮಾತನ್ನು ಎಳೆದು ತಂದರೆ ಅದು ಅಧಿಕಪ್ರಸಂಗ ಎನಿಸುತ್ತದೆ. 

ಅನಗತ್ಯ ಜಗಳಕ್ಕೆ ನಾಂದಿಯಾಗುತ್ತದೆ. ದಂಪತಿಗಳ ಮೌನವಾಗಲೀ ಮಾತಾಗಲೀ ದುಃಖಕ್ಕೆ, ಸಂಶಯಕ್ಕೆ, ಅವಮಾನಕ್ಕೆ ಕಾರಣವಾಗಬಾರದು. ಬದಲು ನೆಮ್ಮದಿಗೆ, ಸಂತೋಷದ ಹೆಚ್ಚಳಕ್ಕೆ ಕಾರಣವಾಗಬೇಕು. ಪರಸ್ಪರ ಮರ್ಯಾದೆ ಕೊಟ್ಟು ಮಾತಾಡಿದರೆ ದಂಪತಿಗಳ ಆತ್ಮಗೌರವ ಹಾಗೂ ಸಂಗಾತಿಯ ಮೇಲಿನ ಗೌರವ ಹೆಚ್ಚುತ್ತದೆ. ಅನ್ಯರ ಮುಂದೆ ನೆಗೆಟಿವ್‌ ಕಮೆಂಟ್‌ಗಳನ್ನು ಮಾಡದೇ, ಸಂಗಾತಿಯ ಬಗ್ಗೆ ಅವರಿವರಲ್ಲಿ ದೂರು ಹೇಳದೇ ಸ್ವಲ್ಪ ಕ್ಷಮೆ ರೂಢಿಸಿಕೊಂಡರೆ, ಕೆಲವಾರು ಮಾತುಗಳನ್ನು ಉದ್ದೇಶ ಪೂರ್ವಕವಾಗಿ ನುಂಗಿ ಹಾಕಿದರೆ ದಾಂಪತ್ಯದಲ್ಲಿ ವಿರಸಗಳು ದೂರವಾಗುತ್ತವೆ. ಸಂಗಾತಿಯಲ್ಲಿ  ಉತ್ತಮವಾದ ಅಂಶವನ್ನು ಕಂಡಾಗ, (ಉದಾಹರಣೆಗೆ ರುಚಿಕರವಾದ ಅಡುಗೆ ಮಾಡಿದಾಗ) ಮೌನವಾಗಿರದೇ ಮೆಚ್ಚುಗೆಯ ಮಾತುಗಳನ್ನಾಡಿದರೆ  ಖುಷಿಯಾಗುತ್ತದೆ. ಕೊರತೆಗಳನ್ನೇ ಹುಡುಕಿ ವಿಮರ್ಶಿಸಲು ನಿಂತಾಗ ದಂಪತಿಗಳ ನಡುವೆ ಮಾನಸಿಕ ಅಂತರ ಹೆಚ್ಚುತ್ತ ಹೋಗುತ್ತದೆ. ಯಾರನ್ನಾದರೂ ಹೊಗಳುವಾಗ ಎಲ್ಲರೆದುರು ಹೊಗಳಿ.ವಿಮರ್ಶಿಸುವಾಗ ಏಕಾಂತದಲ್ಲಿ ವಿಮರ್ಶಿಸಿ ಎಂದು ನುಡಿಮುತ್ತೂಂದು ಹೇಳುತ್ತದೆ.
 
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ಎಂಬಂತೆ ನಮ್ಮ ನಡೆ-ನುಡಿಗಳು, ಮಾತು-ಮೌನಗಳು ದೇವರಿಗೂ, ಮನುಷ್ಯರಿಗೂ ಇಷ್ಟವಾಗುವಂತಿರಲಿ. ಮೃದುಮಧುರ ಮಾತುಗಳು ಹಾಗೂ ಅರ್ಥಪೂರ್ಣ ಮೌನದೊಂದಿಗೆ ಬಾಳನ್ನು ಬಂಗಾರವಾಗಿಸಿ.

Advertisement

– ಜೆಸ್ಸಿ ಪಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next