Advertisement

ನ್ಯಾಯಾಂಗಕ್ಕೆ ಬೇಕಲ್ಲವೇ ತಂತ್ರಜ್ಞಾನ ಸ್ಪರ್ಶ?  

02:26 AM Nov 15, 2018 | |

ನ್ಯಾಯ ಶಾಸ್ತ್ರದಲ್ಲಿ ಸತ್ಯ ಮತ್ತು ನ್ಯಾಯದ ನಡುವಿನ ಸಂಬಂಧ ತುಂಬಾ ವಿಶಿಷ್ಟವಾದದು. ಸತ್ಯ ಶೋಧನೆಯೇ ನ್ಯಾಯಿಕ ವಿಚಾರಣೆಯ ಪ್ರಮುಖ ಧ್ಯೇಯಗಳಲ್ಲೊಂದು. ಸತ್ಯ ಸೋತರೆ ನ್ಯಾಯವೂ ಸೋಲುತ್ತದೆಯೆಂಬುದು ಬಲವಾದ ನಂಬಿಕೆ. ಈ ತತ್ವದಡಿಯಲ್ಲಿಯೇ ನ್ಯಾಯದ ತೊರೆಯು ಈವರೆಗೆ ಪರಿಶುದ್ಧವಾಗಿ ಹರಿದು ಬಂದಿದೆ. ಆದರೆ, ಇಂದಿನ ಸೋಲು- ಗೆಲುವಿನಾಟದಲ್ಲಿ ಸತ್ಯವನ್ನು ಮುಚ್ಚಿಡುವ ಪ್ರಯತ್ನಗಳು ಕೆಲವರಿಂದ ನಿರ್ಲಜ್ಜೆಯಿಂದ ನಡೆದುಕೊಂಡು ಬರುತ್ತಿರುವುದು ಸತ್ಯ. 

Advertisement

ನ್ಯಾಯ ನಿರ್ಣಯದಲ್ಲಿ ಸಾಕ್ಷ್ಯದ ಮಹತ್ವ
ನಮ್ಮ ನ್ಯಾಯ ನಿರ್ಣಯ ವ್ಯವಸ್ಥೆ ಹೆಚ್ಚು ಕಡಿಮೆ ಸಾಕ್ಷ್ಯಾಧಾರಿತ, ಸಾಕ್ಷ್ಯ ಕೇಂದ್ರಿತ. ಅಪರಾಧ ಪ್ರಕರಣಗಳಲ್ಲಿ ಸಂಶಯಾತೀತವಾಗಿ ಆರೋಪಗಳನ್ನು ಸಾಬೀತುಪಡಿಸುವ ಹೊಣೆಗಾರಿಕೆ ಅಭಿಯೋಜಕರ ಮೇಲಿದ್ದರೆ ಸಿವಿಲ್‌ ವ್ಯಾಜ್ಯಗಳಲ್ಲಿ ತನ್ನ ಹಕ್ಕಿನ ಆಧಾರ ದಲ್ಲಿಯೇ ವಾಸ್ತವಾಂಶಗಳನ್ನು ಬರವಣಿಗೆಗಿಳಿಸಿ ಪೂರಕ ಸಾಕ್ಷ್ಯಾಧಾರ ಒದಗಿಸಿ ಸಾಬೀತು ಪಡಿಸಬೇಕು. ಯಾವ ಕಾರಣಕ್ಕೂ ಪ್ರತಿವಾದಿಯ ಅಸಹಾಯಕತೆಯನ್ನು ಬಳಸಿಕೊಂಡು ವಾದಿಯು ಕೇಸು ಗೆಲ್ಲುವಂತಿಲ್ಲ. ನ್ಯಾಯಾಂಗ ಹೋರಾಟವೇನಿದ್ದರೂ ಅರ್ಹತೆಯ ಆಧಾರದಲ್ಲೇ ನಡೆಯಬೇಕು. ಈ ಕುರಿತ ಸಮಗ್ರ ನಿಯಮಗಳನ್ನು ಒಂದು ಶತಮಾನದಿಂದಲೂ ಜಾರಿಯಲ್ಲಿರುವ ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ವಿಷದವಾಗಿ ಹೇಳಲಾಗಿದೆ. 

ಕಟಕಟೆ ಮತ್ತು ಪಾಟೀ ಸವಾಲು 
ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಯುವ ವಿಚಾರಣಾ ಪ್ರಕ್ರಿಯೆಯಲ್ಲಿ ಪ್ರಮುಖ ಹಾಗೂ ನಿರ್ಣಾಯಕ ಘಟ್ಟವೆಂದರೆ ಸಾಕ್ಷಿಯು ಮೌಖೀಕ ಸಾಕ್ಷ್ಯ ನುಡಿಯುವುದು. ಇವುಗಳನ್ನು ಜನಪ್ರಿಯವಾಗಿ “ಪಾಟೀ ಸವಾಲು’ ಎನ್ನುತ್ತಾರೆ. ಸಿನೆಮಾಗಳಲ್ಲಿ ಕಾಣಸಿಗುವ “ಪಾಟೀ ಸವಾಲಿ’ನ ದೃಶ್ಯವನ್ನು ಅತಿ ರಂಜಿತವಾಗಿ ಬಿಂಬಿಸಲಾಗುತ್ತದೆ. ಕೋರ್ಟಿನಲ್ಲೂ  “ಪಾಟೀ ಸವಾಲು’ ಕೆಲವೊಮ್ಮೆ ರೋಮಾಂಚನಕಾರಿಯಾಗಿರುತ್ತದೆ. ನೆರೆದ ವರನ್ನು ಮಂತ್ರಮುಗ್ಧ ಗೊಳಿ ಸುತ್ತದೆ. ಹೊರಬೀಳುವ ಸತ್ಯಗಳು ನ್ಯಾಯಾಧೀಶರ ಅಂತಃಸಾಕ್ಷಿಯನ್ನೇ ಬಡಿದೆಬ್ಬಿಸುತ್ತದೆ.

ಕಟಕಟೆಯಲ್ಲಿ ನಿಂತು “ಪಾಟೀ ಸವಾಲು’ “ಮರು ವಿಚಾರಣೆ’ ಎದುರಿಸುವಾಗ ಸಾಕ್ಷಿದಾರರು ನೀಡುವ ಉತ್ತರವನ್ನು ನ್ಯಾಯಾ ಧೀಶರು ತಕ್ಷಣವೇ ದಾಖಲಿಸಿಕೊಳ್ಳುತ್ತಾರೆ. ಇವು ಕೆಲವೊಮ್ಮೆ ಪ್ರಕರಣದ ಅಂತಿಮ ತೀರ್ಪಿಗೆ ತಳಹದಿ ಆಗುತ್ತವೆ. ಪಾಟೀ ಸವಾಲಿನಲ್ಲಿ ವಕೀಲರ ಪ್ರಶ್ನೆಗಳಿಗೆ ಉತ್ತರವಾಗಿ ಸಾಕ್ಷಿದಾರರು ನುಡಿವ ಹೇಳಿಕೆಗಳನ್ನು ಸೂಕ್ತ ವಾಕ್ಯ ರಚನೆ ಮಾಡಿ ನ್ಯಾಯಾಧೀಶರು ಸಿಬ್ಬಂದಿಯ ನೆರವಿನಿಂದ ಸ್ಥಳದಲ್ಲೇ ದಾಖಲಿ ಸಿಕೊಳ್ಳುತ್ತಾರೆ. ಕೊನೆಯಲ್ಲಿ ಸಹಿ ಪಡೆದುಕೊಳ್ಳುತ್ತಾರೆ. ಆದರೆ ಎತ್ತರದ ಮೇಜಿನ ಮೇಲೆ ಕುಳಿತುಕೊಳ್ಳುವ ಬೆರಳಚ್ಚುಗಾರ್ತಿ ತನ್ನ ಕಂಪ್ಯೂಟರ್‌ನಲ್ಲಿ ಯಾವ ರೀತಿಯಲ್ಲಿ ಹೇಳಿಕೆಯನ್ನು ದಾಖಲಿಸಿ ಕೊಂಡಿದ್ದಾರೆಂದು ಮಾತ್ರ ಸಾಕ್ಷಿದಾರರಿಗೆ ಆ ಸಂದರ್ಭದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಕೆಲವೊಮ್ಮೆ ಇಂತಹ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಾಗ ತಪ್ಪಾಗಿದ್ದರೂ ಅದು ತಕ್ಷಣ ಸಾಕ್ಷಿದಾರರ ಗಮನಕ್ಕೆ ಬಾರದಿರುವುದರಿಂದ, ಅವುಗಳನ್ನು ಸರಿಪಡಿಸದಿದ್ದಲ್ಲಿ ಅಂತಹ ಹೇಳಿಕೆಗಳು ಮುಂದೆ ಎಡವಟ್ಟಿಗೆ ಕಾರಣ ಆಗುವು ದುಂಟು. ಕೆಲವು ಕ್ಲಿಷ್ಟ ಪ್ರಕರಣಗಳಲ್ಲಿ “ಪಾಟೀ ಸವಾಲಿ’ನಲ್ಲಿ ನೀಡುವ ಉತ್ತರಗಳಂತೂ ಪ್ರಕರಣದ ದಿಕ್ಕನ್ನೇ ಬದಲಿಸಬಲ್ಲದು. ಸಾಕ್ಷಿಗಳು ನೀಡುವ ಹೇಳಿಕೆಗಳನ್ನು ಮುಂದೆ ವಾದ ಮಂಡಿಸುವ ಸಮಯದಲ್ಲಿ ಉಭಯ ಪಕ್ಷಗಳ ವಕೀಲರುಗಳು ಅವುಗಳ ಹಿನ್ನೆಲೆ, ಮಹತ್ವ, ಭಾವಾರ್ಥವನ್ನು ¾ ಕಕ್ಷಿಗಾರರ ಕೇಸಿಗೆ ಪೂರಕವೆಂಬಂತೆ ವ್ಯಾಖ್ಯಾನಿಸುತ್ತಾರೆ. ಸಾಕ್ಷಿದಾರನ ಹೇಳಿಕೆಯನ್ನು ಆತನ‌ ಕೇಸಿನ ವಿರುದ್ಧ ಬಳಸುವ/ ಅಪಾರ್ಥ ಮಾಡಿಕೊಳ್ಳುವ ಅಪಾಯವೂ ಇದೆೆ. ಅಲ್ಲದೆ, ಸುಳ್ಳು ಸಾಕ್ಷಿ ನೀಡುವುದು ಕಾನೂನಿನನ್ವಯ ದಂಡನಾರ್ಹ ಅಪರಾಧ‌.  ಆದುದರಿಂದ,  ಸಾಕ್ಷ್ಯ ದಾಖಲಿಸುವ ವಿಧಾನದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸರಳ ಸುಧಾರಣಾ ಕ್ರಮವನ್ನು ಜಾರಿಗೊಳಿಸಲು ಚಿಂತನೆ ನಡೆಸಬೇಕಿದೆ. ಈ ಕೆಳಗಿನ ಅಂಶಗಳನ್ನು ನ್ಯಾಯಾಂಗದ ವರಿಷ್ಠರು ಪರಿಗಣಿಸಬಹುದು.

1. ಸಾಕ್ಷಿಗಳ ಹೇಳಿಕೆಗಳನ್ನು ಟೈಪ್‌ ಮಾಡುವಾಗ ವಿಶಾಲವಾದ ಮಾನಿಟರ್‌ ಪರದೆಯ ಮೇಲೆ ಸಾಕ್ಷಿದಾರನಿಗೆ, ಉಭಯ ಪಕ್ಷಗಾರರಿಗೆ ಕಾಣುವಂತೆ ವ್ಯವಸ್ಥೆ ಮಾಡಬೇಕು. ಹೇಳಿಕೆಯನ್ನು ನ್ಯಾಯಾಧೀಶರು ಹೇಗೆ ದಾಖಲಿಸಿಕೊಂಡಿದ್ದಾರೆಂದು ಕೂಡಲೇ ತಿಳಿದುಕೊಳ್ಳುವ ಹಕ್ಕನ್ನು ಪ್ರತಿಯೋರ್ವ ಸಾಕ್ಷಿದಾರ ಹೊಂದಿದ್ದಾನೆ.

Advertisement

2.ಸಾಕ್ಷ್ಯ ದಾಖಲಿಸಿದ ಕೂಡಲೇ ಹೇಳಿಕೆ ಪ್ರತಿಯನ್ನು ಸಾಕ್ಷಿದಾರನಿಗೆ ಉಚಿತವಾಗಿ ನೀಡಬೇಕು. ಪ್ರಿಂಟರ್‌ನಂತಹ ‌ ವ್ಯವಸ್ಥೆಯಿರುವ ಈ ಕಾಲದಲ್ಲಿ ಸಾಕ್ಷಿಯ ಹೇಳಿಕೆಯನ್ನು ಕ್ಷರ್ಣಾ ರ್ಧದಲ್ಲೇ ನೀಡಬಹುದು. ಹಾಗಿರುವಾಗ ಯಾಕೆ ಟೈಪ್‌ರೈಟರ್‌ ಕಾಲದ ಮನೋಭಾವ?

3. ಸಾಕ್ಷಿದಾರರ ಹೇಳಿಕೆಯನ್ನು ಎಲ್ಲಾ ಪ್ರಕರಣಗಳಲ್ಲಿಯೂ ನ್ಯಾಯಾಧೀಶರೇ ದಾಖಲಿಸುವ ಬದಲು ನ್ಯಾಯಾಲಯವು ನೇಮಕಮಾಡುವ “ವಕೀಲ-ಆಯುಕ್ತ’ರ ಮೂಲಕ ಸಹ ದಾಖಲಿಸಿಕೊಳ್ಳಬಹುದು. ಈ ರೀತಿ ಸಾಕ್ಷ್ಯ ದಾಖಲಿಸಲು ಸಿವಿಲ್‌ ಪ್ರಕ್ರಿಯೆ ಸಂಹಿತೆಗೆ ಹತ್ತು ವರ್ಷಗಳ ಹಿಂದೆಯೇ ತಿದ್ದುಪಡಿ ಮಾಡಲಾಗಿತ್ತು. ಈ ಸುಧಾರಣಾ ಕ್ರಮವನ್ನು ಜಾರಿಗೊಳಿಸಿದ್ದರೆ ಈಗಾಗಲೇ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಬೇಕಿತ್ತು. ಆದರೆ, ಬೆರಳೆಣಿಕೆಯ ವಿಶೇಷ ಪ್ರಕರಣದಲ್ಲಿ ಹೊರತುಪಡಿಸಿ “ವಕೀಲ-ಆಯುಕ್ತ’ರ ಮೂಲಕ ಸಾಕ್ಷ$ದಾಖಲಿಸುವ ವ್ಯವಸ್ಥೆ ಜಾರಿಗೆ ಬರಲೇ ಇಲ್ಲ. ಕೆಲವು ವಿಶಿಷ್ಟ, ಸಂಕೀರ್ಣ ಪ್ರಕರಣಗಳ ಹೊರತಾಗಿ ಇತರ ಸಾಮಾನ್ಯ ವ್ಯಾಜ್ಯಗಳಲ್ಲಿ ಸಾಕ್ಷಿದಾರರ ಸಾಕ್ಷ್ಯವನ್ನು ನ್ಯಾಯಾಲಯವು ನೇಮಿಸುವ “ವಕೀಲ ಆಯುಕ್ತ’ರ ಮೂಲಕ ದಾಖಲಿಸುವುದರಿಂದ ನ್ಯಾಯಾಧೀಶರ ಸಮಯ ಉಳಿತಾಯವಾಗಿ ತ್ವರಿತ ನ್ಯಾಯಾದಾನಕ್ಕೂ ಸಹಕಾರಿಯಾಗಲಿದೆ.

4. ಸಾಕ್ಷಿದಾರರನ್ನು ಗಂಟೆಗಟ್ಟಲೆ ಕಟಕಟೆಯಲ್ಲಿ ನಿಲ್ಲಿಸಿಯೇ “ಪಾಟೀ ಸವಾಲಿ’ನ ಬಾಣ ಬೀಸುವ ಪದ್ಧತಿ ನಿಲ್ಲಬೇಕು. ಸಾಕ್ಷಿದಾರರಿಗೆ ಕುಳಿತು ಸಾಕ್ಷಿ ನುಡಿಯುವ ಶಾಸನಾತ್ಮಕ ಹಕ್ಕನ್ನು ನೀಡಬೇಕು. ಅನಾರೋಗ್ಯದಿಂದ ಬಳಲುವ ಸಾಕ್ಷಿದಾರರು ತಮ್ಮ ಆರೋಗ್ಯ ಸಮಸ್ಯೆಯನ್ನು ತೆರೆದ ನ್ಯಾಯಾಲಯದಲ್ಲಿ ಅರಿಕೆ ಮಾಡಲು ಮುಜುಗರ ಪಡುತ್ತಾರೆ. ಕೆಲವು ಸಾಕ್ಷಿದಾರರಂತೂ ಪಾಟೀ ಸವಾಲಿನ ಒತ್ತಡ ಎದುರಿಸಲಾಗದೆ ತಲೆ ತಿರುಗಿಬಿದ್ದ ನಿದರ್ಶನಗಳಿವೆ. ಹಾಗಾಗಿ, ಕುಳಿತೇ ಪಾಟೀ ಸವಾಲನ್ನೆ ದುರಿಸುವುದು ಪ್ರತಿಯೊಬ್ಬ ಸಾಕ್ಷಿದಾರನ ಹಕ್ಕಾಗಬೇಕು. ನಿಲ್ಲುವುದು ಸಾಕ್ಷಿದಾರನ ಆಯ್ಕೆಯಾಗಬೇಕು.

5. ಗಂಟೆಗಟ್ಟಲೆ ನಿಂತು ಸಾಕ್ಷ್ಯ ನುಡಿಯುವಾಗ, ನೀರು ಕುಡಿಯಲು, ಕೆಲ ನಿಮಿಷಗಳ ಕಾಲ ವಿಶ್ರಾಂತಿ ಪಡೆಯಲು ಮತ್ತು ಅಗತ್ಯವಿದ್ದಲ್ಲಿ ಶೌಚಾಲಯಕ್ಕೆ ಹೋಗಲು ಸಹ ಸಾಕ್ಷಿದಾರನಿಗೆ ಅವಕಾಶ ನೀಡ‌ಬೇಕು. ಸಾಕ್ಷಿ ವಿಚಾರಣೆಯೆಂದರೆ ದೈಹಿಕ ಹಾಗೂ ಮಾನಸಿಕ ಒತ್ತಡದ ಸನ್ನಿವೇಶದಲ್ಲಿ ಹೇಳಿಕೆಯನ್ನು ಪಡೆಯುವಂತೆ ಆಗಬಾರದು. ಸಾಕ್ಷಿದಾರನ ಪ್ರತಿಯೊಂದು ಹೇಳಿಕೆ ಒತ್ತಡ ರಹಿತ ವಾತಾವರಣದಲ್ಲಿ ಮುಕ್ತ ಹಾಗೂ ಸ್ವಯಂ ಪ್ರೇರಿತವಾಗಿರಬೇಕು. ಇದು ಸಾಕ್ಷಿದಾರನ ಪಾಲಿನ ಅಮೂಲ್ಯ ಮಾನವ ಹಕ್ಕು. “ಸಾಕ್ಷಿ ನುಡಿಯಲು ಕೋರ್ಟಿಗೆಳೆಯಬೇಡಿ’ರೆಂಬ ಮಾತಿನಲ್ಲೇ ಅಸಹನೆಯ ಮರ್ಮ ಅಡಗಿದೆ. ಸ್ವಯಂ ಪ್ರೇರಣೆಯಿಂದ ಸಾಕ್ಷಿ ನುಡಿಯಲು ಬರುವಂತಾಗಬೇಕು. ಆತನನ್ನು ಮಾನಸಿಕವಾಗಿಯೂ “ಕೋರ್ಟಿಗೆಳೆದು’ ತಂದಂತೆ ಅನಿಸಬಾರದು.

6. ವಕೀಲರ ಪ್ರತಿಯೊಂದು ಪ್ರಶ್ನೆಯನ್ನು ಮೊದಲು ಲಿಖೀತವಾಗಿ ದಾಖಲಿಸಿ ನಂತರ, ಪ್ರತಿ ಪ್ರಶ್ನೆಯ ಉತ್ತರವನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಬೇಕು. ಇದರಿಂದ, ಬಾಣದಂತೆ ಎರಗುವ ಪ್ರಶ್ನೆಗಳ ಗೂಡಾರ್ಥ ಅರ್ಥ ಮಾಡಿಕೊಂಡು ಯೋಚಿಸಿ ಸರಿಯಾದ ಉತ್ತರ ನೀಡಲು ಸಾಕ್ಷಿದಾರನಿಗೆ ಸಾಧ್ಯವಾಗುತ್ತದೆ. ಪಾಟೀ ಸವಾಲು “ಕ್ವಿಜ್‌ ಸ್ಪರ್ಧೆ’ಯಾಗಬಾರದು. ನ್ಯಾಯ ನಿರ್ಣಯ ಸತ್ಯ ಶೋಧನೆಯ ಪ್ರಯತ್ನವಾಗಬೇಕೇ ಹೊರತು ಸತ್ವ ಪರೀಕ್ಷೆ ಆಗಬಾರದು. ಒಟ್ಟಾರೆ ನ್ಯಾಯಿಕ ಕಲಾಪಗಳು ಸಾಕ್ಷಿ ಸ್ನೇಹಿಗಳಾಗ‌ಬೇಕು.

 7. ಕೆಲವು ವಾಕ್ಚತುರ ಸಾಕ್ಷಿದಾರರು ಅತಿಶಯೋಕ್ತಿಯ ಹೇಳಿಕೆ ನೀಡದಂತೆ, ವಿಷಯಾಂತರ ಮಾಡಬಾರದೆಂದು ಅವರ ಉತ್ತರಗಳಿಗೆ ಕೆಲವೊಮ್ಮೆ ನಿರ್ಬಂಧ ವಿಧಿಸಲಾಗುತ್ತದೆ. ಕೆಲವು ವಾಚಾಳಿ ಸಾಕ್ಷಿಗಳು ಪ್ರಶ್ನೆಗಳಿಗೆ‌ ಸರಳವಾಗಿ ಉತ್ತರಿಸುವ ಬದಲು ವಕೀಲರಿಗೇ ಮರು ಸವಾಲೆಸೆಯುತ್ತಾರೆ. ಆದುದರಿಂದ, ಪಾಟೀ ಸವಾಲಿಗೆ “ಹೌದು’ ಅಥವಾ “ಅಲ್ಲ’ವೆಂದು ಮಾತ್ರ ಉತ್ತರಿಸುವಂತೆ ನ್ಯಾಯಾಧೀಶರು ತಾಕೀತು ಮಾಡುತ್ತಾರೆ. ಇದು ಕೆಲವೊಮ್ಮೆ ಅಸಂಬದ್ಧಕ್ಕೆಡೆ ಮಾಡಿಕೊಡುತ್ತದೆ. ಉದಾಹರಣೆಗೆ “ನೀನು ನಿನ್ನ ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ್ದಿಯಾ?’ ಎಂಬ ಪ್ರಶ್ನೆಗೆ ಹೌದೆಂದರೂ ತಪ್ಪು ಇಲ್ಲವೆಂದರೂ ತಪ್ಪು!.  ಹಾಗಾಗಿ, ಪಾಟೀ ಸವಾಲಿನ ಅಂತ್ಯದಲ್ಲಿ, ಸಾಕ್ಷಿಯು ಸ್ಪಷ್ಟೀಕರಣ ನೀಡುವ ಸಲುವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಲು ಒಂದೆರಡು ನಿಮಿಷ ಅವಕಾಶ‌ ನೀಡುವುದು ಅಪೇಕ್ಷಣೀಯ. ಸ್ವಯಂಪ್ರೇರಿತ ಹೇಳಿಕೆಗೆ ಅವಕಾಶ ನೀಡಿದಲ್ಲಿ “ಮರು ವಿಚಾರಣೆ’ಗೆ ಅವಕಾಶ ನೀಡಬೇಕಾಗಿಲ್ಲ.

ಸಾಕ್ಷಿದಾರರ “ಮುಖ್ಯ ವಿಚಾರಣೆ’ಯನ್ನು ಸಹ ನ್ಯಾಯಾಧೀಶರು ಸ್ವತಃ ತಾವೇ ದಾಖಲಿಸಿಕೊಳ್ಳುವ ಪದ್ಧತಿ ಈ ಹಿಂದೆ ಜಾರಿಯಲ್ಲಿತ್ತು. ಆದರೆ, 2005ರಲ್ಲಿ ಸಿವಿಲ್‌ ಪ್ರಕ್ರಿಯಾ ಸಂಹಿತೆಗೆ ಸೂಕ್ತ ತಿದ್ದುಪಡಿಯನ್ನು ಮಾಡಿ ಸಾಕ್ಷಿದಾರರು ನೀಡುವ “”ಮುಖ್ಯ ವಿಚಾರಣೆ”ಯ ಹೇಳಿಕೆಯನ್ನು ಪ್ರಮಾಣ ಪತ್ರ (ಅಫಿದಾವಿತ್‌) ಮೂಲಕ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸುವ ಕ್ರಮವನ್ನು ಪರಿಚಯಿಸಲಾಯಿತು. ತನ್ಮೂಲಕ ಒಂದು ಸಣ್ಣ ಬದಲಾವಣೆಗೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ನ್ಯಾಯಾಲಯದ ಅಮೂಲ್ಯ ಸಮಯದಲ್ಲಿ ಭಾರೀ ಉಳಿತಾಯವಾಯಿತು.

ಆದರೆ, “ಪಾಟೀ ಸವಾಲು’ ಪ್ರಕ್ರಿಯೆಯಲ್ಲಿ ಮಾತ್ರ ಯಾವುದೇ ಸುಧಾರಣೆಯಾದಂತಿಲ್ಲ. ಸಾಮಾನ್ಯ ಪ್ರಕರಣಗಳಲ್ಲಿಯೂ ಸಹ ನ್ಯಾಯಾಧೀಶರೇ ಸಾಕ್ಷಿದಾರರ “ಪಾಟೀ ಸವಾಲಿ’ನ ಹೇಳಿಕೆ‌ಗಳನ್ನು ದಾಖಲಿಸುವ ಕೆಲಸವನ್ನು ಮಾಡುವುದರಿಂದ, ವಕೀಲರ ಸುದೀರ್ಘ‌ ವಾದ ಮಂಡನೆ ಆಲಿಸಲು ಹಾಗೂ ಇನ್ನಿತರ ನ್ಯಾಯಿಕ ಹಾಗೂ ಆಡಳಿತಾತ್ಮಕ ಕಾರ್ಯಕಲಾಪಗಳನ್ನು ನಿರ್ವಹಿಸಲು ನ್ಯಾಯಾಧೀಶರಿಗೆ ಸಾಕಷ್ಟು ಸಮಯಾವಕಾಶ ಲಭಿಸುತ್ತಿಲ್ಲ. ಪರಿಣಾಮವಾಗಿ ನ್ಯಾಯಾಧೀಶರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಮೂರು ಕೋಟಿ ಪ್ರಕರಣಗಳು ದೇಶಾದ್ಯಂತ ಬಾಕಿಯಿರುವ ಈ ಸಮಯದಲ್ಲಿ ನ್ಯಾಯಾಧೀಶರ ಅಮೂಲ್ಯ ಸಮಯವನ್ನು ಉಳಿಸಲು ಎಲ್ಲರೂ ಸಹಕರಿಸಬೇಕು. ತಂತ್ರಜ್ಞಾನದ ನೆರವು ಒದಗಿ ಸಬೇಕು. ನ್ಯಾಯಾಧೀಶರು ಗುಣಮಟ್ಟದ ನ್ಯಾಯದಾನ ಮಾಡಲು ಅನುಕೂಲಕರವಾದ ವ್ಯವಸ್ಥೆಯನ್ನು ಕಲ್ಪಿಸುವುದು ಆಡಳಿತರೂಢರ ಸಾಂವಿಧಾನಿಕ ಕರ್ತವ್ಯ. ಮೂಲ ಸೌಕರ್ಯಗಳ ಇತಿಮಿತಿಯನ್ನು ಮೀರಿ ನ್ಯಾಯದಾನ ಸೇವೆ ಮಾಡುತ್ತಿರುವ ಅಧೀನ ನ್ಯಾಯಾಧೀಶರುಗಳು ನಿಜಕ್ಕೂ ಅಭಿನಂದನಾರ್ಹರು.  

ವೀಡಿಯೋ ಚಿತ್ರೀಕರಣ
 ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸಾಕ್ಷಿದಾರರ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿ,  ಕೇಸಿನ ನಿರ್ಣಾಯಕ ಹಂತದಲ್ಲಿ ವಕೀಲರುಗಳು ಮತ್ತು ನ್ಯಾಯಾಧೀಶರು ಜೊತೆಯಾಗಿ ವೀಕ್ಷಿಸುವ ಮೂಲಕ ಹೆಚ್ಚು ದಕ್ಷತೆಯಿಂದ ನ್ಯಾಯ ನಿರ್ಣಯ ಮಾಡಬಹುದೆನ್ನಿಸುತ್ತದೆ. ಇದರಿಂದ ನ್ಯಾಯಾಲಯದ ಸಮಯದ ಉಳಿತಾಯ ಆಗುವುದಲ್ಲದೆೆ, ಸಾಕ್ಷಿದಾರನ ಆಂಗಿಕ ಭಾಷೆ, ಹಾವಭಾವ, ಪ್ರತಿಕ್ರಿಯಿಸುವ ರೀತಿ ಮತ್ತು ಸತ್ಯಸಂಧತೆಯ ಮನೋಭಾವದ ಕುರಿತು ಅರಿಯಲು ಸಹಾಯಕವಾಗುತ್ತದೆ. ಸಾಕ್ಷಿದಾರನ ವ್ಯಕ್ತಿತ್ವ ಮತ್ತು ಆತ ನೀಡುವ ಸಾಕ್ಷ್ಯದ ಒಂದು ಚಿತ್ರಣ ಲಭಿಸುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಸಾಕ್ಷ್ಯವನ್ನು ದಾಖಲಿಸಿದ ನ್ಯಾಯಾಧೀಶರು ತೀರ್ಪು ನೀಡುವಾಗ ನ್ಯಾಯಾಲಯದಲ್ಲಿ ಸೇವೆಯಲ್ಲಿರುವುದಿಲ್ಲ. ಸಾಕ್ಷ್ಯ ದಾಖಲಿಸುವ ನ್ಯಾಯಾಧೀಶರು ಒಬ್ಬರಾದರೆ ತೀರ್ಪು ನೀಡುವ ನ್ಯಾಯಾಧೀಶರು ಇನ್ನೊಬ್ಬರಾಗಿರುವ ಸಾಧ್ಯತೆಗಳಿವೆ. ಹಾಗಾಗಿ, ಹೊಸದಾಗಿ ವರ್ಗವಾಗಿ ಬಂದ ನ್ಯಾಯಾಧೀಶರಿಗೆ ಚಿತ್ರೀಕರಣದ ಮೂಲಕ ದಾಖಲಿಸಿದ ಸಾಕ್ಷ್ಯ ಖಂಡಿತಕ್ಕೂ ನೆರ‌ವಾಗಲಿದೆ.

ಮಾದರಿ
ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾದ ಜಸ್ಟಿಸ್‌ ವಿ. ಆರ್‌. ರವೀಂದ್ರನ್‌ರವರು ನಡೆಸುವ ಮಧ್ಯಸ್ಥಿಕೆಯ ವಿಚಾರಣಾ ಪ್ರಕ್ರಿಯೆಯಲ್ಲಿ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವಾಗ ಮೇಲಿನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿಯೂ ಸುಧಾರಣೆಯನ್ನು ಸುಲಭವಾಗಿ ಜಾರಿಗೊಳಿಸಲು ಸಾಧ್ಯವೆನ್ನುವುದಕ್ಕೆ ಇದೊಂದು ನಿದರ್ಶನ. ಇಂತಹ ವ್ಯವಸ್ಥೆ ಅಧೀನ ನ್ಯಾಯಾಲಯಗಳಲ್ಲಿ ಹಂತ ಹಂತವಾಗಿಯಾದರೂ ಜಾರಿಗೆ ಬರಬೇಕು. ನ್ಯಾಯಾಲಯದ ಕಲಾಪಕ್ಕೂ ಮಧ್ಯಸ್ಥಿಕೆದಾರಿಕೆಯ ಕಲಾಪಕ್ಕೂ ವ್ಯತ್ಯಾಸವಿದೆಯೆಂದು ಕೆಲವರು ವಾದಿಸಬಹುದು.    ನ್ಯಾಯಾಲಯದಲ್ಲಿ ಕಕ್ಷಿಗಾರರಿಗೆ ಕಾನೂನಿನ ಭಯದ ವಾತಾವರಣವಿರಬೇಕೆನ‌ು°ವುದು ಕೆಲವರ ವಾದ. ಆದರೆ, ಕೇವಲ ಭಯದ ಭಾವಕ್ಕಿಂತ ನ್ಯಾಯಾಂಗಣದಲ್ಲಿ ನಂಬಿಕೆ ಮತ್ತು ಗೌರವದ ವಾತಾವರಣವಿರುವುದು ಹೆಚ್ಚು ಸರಿಯೆನಿಸುತ್ತದೆ.

ನ್ಯಾಯಾಲಯದ ಎಲ್ಲಾ ಹೆಜ್ಜೆಗಳು ಸತ್ಯಾನ್ವೇಷಣೆಯನ್ನು ಸಾಧಿಸುವ ಪಥದತ್ತ ಸಾಗಬೇಕು. ನ್ಯಾಯಾಧೀಶರು ಪ್ರಶ್ನೆ ಮತ್ತು ಉತ್ತರವನ್ನು ದಾಖಲಿಸುವ ಯಂತ್ರವಾಗದೇ ಪ್ರಕರಣದ ಸತ್ಯಾ ಸತ್ಯತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನ್ಯಾಯಾಲಯದ ಕಲಾಪಕ್ಕೆ ನ್ಯಾಯಾಧೀಶರು ಜೀವ ತುಂಬಬೇಕು. ನ್ಯಾಯಾಲಯದ ಕ್ಷಮತೆ ಮತ್ತು ಕಾರ್ಯದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೇಲಿನ ಚಿಂತನೆಗಳು ಖಂಡಿತಕ್ಕೂ ಪೂರಕವಾಗಲಿವೆ.

ನ್ಯಾಯಾಂಗವು ತಂತ್ರಜ್ಞಾನದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು. ತಂತ್ರಜ್ಞಾನ ಬಳಸಿ ವೈದ್ಯಕೀಯ ಕ್ಷೇತ್ರ ಸಾಧಿಸಿರುವ ಅದ್ಭುತ ಪ್ರಗತಿಯನ್ನು ಮಾದರಿಯಾಗಿಟ್ಟು ನ್ಯಾಯಾಂಗವೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕೃತಕ ಬುದ್ಧಿªಮತ್ತೆ, ಯಂತ್ರ ಕಲಿಕೆ ಮತ್ತಿತರ ಹೊಸ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮಾಹಿತಿ ತಂತ್ರ ಜ್ಞಾನವನ್ನು ಬಳಸಲು ನ್ಯಾಯಾಂಗವು ತನ್ನನ್ನು ತಾನು ತೆರೆದಿಟ್ಟು ಕೊಳ್ಳಬೇಕು. ತಂತ್ರಜ್ಞಾನ ಹಾಗೂ ಕಾನೂನು (ಟೆಕ್ನೋ ಲೀಗಲ್‌) ಸಂಶೋಧನೆ ನಡೆಸಿ, ನ್ಯಾಯಾಂಗ ವ್ಯವಸ್ಥೆಯ ದಕ್ಷತೆ ಹಾಗೂ ಗುಣಮಟ್ಟವನ್ನು ಸಮರೋಪಾದಿಯಲ್ಲಿ ಹೆಚ್ಚಿಸಬೇಕು. ಇದು ನ್ಯಾಯಾಂಗದ ಉಳಿವಿಗೆ ಅಗತ್ಯ ಮತ್ತು ಅನಿವಾರ್ಯ.

ವಿವೇಕಾನಂದ ಪನಿಯಾಲ, ವಕೀಲರು

Advertisement

Udayavani is now on Telegram. Click here to join our channel and stay updated with the latest news.

Next