ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ, ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವಜಾಗೊಂಡ ಪಿಎಸ್‌ಐ ಚಲ್ಲಘಟ್ಟ ಚಂದ್ರಶೇಖರ್ ಮತ್ತು ಈತನ ಇಬ್ಬರು ಸಹೋದರರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾಜಿ ಎಸ್‌ಐ ಚಂದ್ರಶೇಖರ್ ಅಲಿಯಾಸ್ ಚಲ್ಲಘಟ್ಟ ಚಂದ್ರಶೇಖರ್, ಈತನ ಸಹೋದರರಾದ ಮಂಜುನಾಥ್ ಮತ್ತು ಅಶೋಕ್ ಕುಮಾರ್‌ನನ್ನು ಸುಲಿಗೆ, ಡಕಾಯಿತಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಜೂ.29ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಾಜಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಚಲ್ಲಘಟ್ಟ ಚಂದ್ರಶೇಖರ್ ಕಳೆದ ಮೂರು ದಶಕಗಳಿಂದ ತನ್ನ ಇಬ್ಬರು ಸಹೋದರರ ಜತೆ ಸೇರಿಕೊಂಡು ಬೆಂಗಳೂರು ವ್ಯಾಪ್ತಿಯಲ್ಲಿ ಹೆದ್ದಾರಿ ಡಕಾಯಿತಿ, ಸುಲಿಗೆ ಮಾಡಿಕೊಂಡು ಸುಮಾರು 100 ಕೋಟಿಗೂ ಅಧಿಕ ಆಸ್ತಿ ಗಳಿಸಿ, ತಲೆಮರೆಸಿಕೊಂಡಿದ್ದ.
ಅಲ್ಲದೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸರ್ವಜ್ಞನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ರಾಷ್ಟ್ರೀಯ ಪಕ್ಷವೊಂದರ ಟಿಕೆಟ್ ಪಡೆಯಲು ಸಿದ್ಧತೆ ನಡೆಸಿದ್ದ. ಅಲ್ಲದೇ ನಗರಾದ್ಯಂತ ಸುಮಾರು 10 ಮನೆಗಳು, 100 ನಿವೇಶನಗಳನ್ನು ಚಂದ್ರಶೇಖರ್ ಸಂಪಾದಿಸಿದ್ದು, ಡಾಲರ್ಸ್ ಕಾಲೊನಿಯಲ್ಲಿ 5 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
1987ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಎಎಸ್‌ಐ ಆಗಿ ನೇಮಕಗೊಂಡ ಚಂದ್ರಶೇಖರ್, ನಂತರ ಸಕಾರಣವಿಲ್ಲದೇ ಕರ್ತವ್ಯಕ್ಕೆ ಗೈರಾಗಿದ್ದರಿಂದ 2001ರಲ್ಲಿ ಸೇವೆಯಿಂದ ಇಲಾಖೆ ವಜಾಗೊಳಿಸಿತ್ತು. ಈ ನಡುವೆ ಅನಾರೋಗ್ಯ ನೆಪವೊಡ್ಡಿ ಆಗಾಗ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆರೋಪಿ,
ಸಹೋದರರ ಜತೆ ಸೇರಿಕೊಂಡು ಹೈವೇಗಳಲ್ಲಿ ದರೋಡೆ ಮಾಡುತ್ತಿದ್ದ. ಹೀಗೆ ಎಚ್‌ಎಎಲ್, ಎಲೆಕ್ಟ್ರಾನಿಕ್ ಸಿಟಿ ಠಾಣೆ ಮಾತ್ರವಲ್ಲದೇ, ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದರೋಡೆ, ವಂಚನೆ ಪ್ರಕರಣಗಳು ದಾಖಲಾಗಿದ್ದವು. 2007ರಲ್ಲಿ ಸಿಸಿಬಿಯಲ್ಲಿ ಡಕಾಯಿತಿ ಯತ್ನ ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಚನ್ನಪಟ್ಟಣ ಪೊಲೀಸರ ವಶಕ್ಕೆ?: ಆರೋಪಿ ಚಂದ್ರಶೇಖರ್ ಮತ್ತು ಸಹೋದರರ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ವಂಚನೆ, ಡಕಾಯಿತಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನು ರಾಮನಗರ ಜಿಲ್ಲಾ ಪೊಲೀಸರು ಮೂವರು ಸಹೋದರರನ್ನು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.