Advertisement

ಹೊರ ರಾಜ್ಯದ 65 ಕಾರ್ಮಿಕರಿಗೆ ನ್ಯಾಯಾಂಗ ಬಂಧನ

11:15 AM Jul 26, 2019 | Team Udayavani |

ಹಾಸನ: ನಗರದ ಹಿಮ್ಮತ್‌ ಸಿಂಗ್‌ ಕಾರ್ಖಾನೆಯಲ್ಲಿ ಬುಧವಾರ ನಡೆದ ಗಲಭೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಕಾರ್ಖಾನೆಯ ಆಡಳಿತ ವಿಭಾಗದ ಮುಖ್ಯಸ್ಥರು, ಪೊಲೀಸ್‌, ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳ ನಡೆಸಿದರು. ಇನ್ನು ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.

Advertisement

ಸಾಮರಸ್ಯ ಕಾಯ್ದುಕೊಳ್ಳಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಸಹಾಯ ಕಾರ್ಮಿಕ ಆಯುಕ್ತರು ಹಾಗೂ ಹಿಮ್ಮತ್‌ ಸಿಂಗ್‌ ಸಂಸ್ಥೆಯ ಪ್ರತಿನಿಧಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅಕ್ರಂ ಪಷಾ ಅವರು, ಸಣ್ಣ ಘಟನೆಯು ದೊಡ್ಡ ಮೊತ್ತದಲ್ಲಿ ಸಂಸ್ಥೆಯ ಹೆಸರನ್ನು, ಶ್ರೇಯಸ್ಸನ್ನು ಹಾಳುಮಾಡುತ್ತದೆ. ಹಾಗಾಗಿ ಕಾರ್ಖಾನೆಯಲ್ಲಿ ಆಂತರಿಕ ಸಾಮರಸ್ಯವನ್ನು ಸದಾ ಕಾಯ್ದುಕೊಳ್ಳಬೇಕು, ಮಾನವ ಸಂಪನ್ಮೂಲ ಸೇವಾ ವ್ಯವಸ್ಥೆಯ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಶಾಂತಿ ಸುವ್ಯವಸ್ಥೆ ಕಾಪಾಡಿ: ಸಂಸ್ಥೆಯ ಆಂತರಿಕ ಅಸಮಾಧಾನಗಳು ಯಾವುದೇ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಿರಬಾರದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಹಾಗೆಯೇ ಸಿಬ್ಬಂದಿಗಳಲ್ಲಿ ಆತ್ಮ ವಿಶ್ವಾಸ ತುಂಬುವ, ಅವರನ್ನು ಸ್ನೇಹಪರವಾಗಿ ನೋಡುವ ವಾತಾವರಣ ಸೃಷ್ಟಿ ಮಾಡಬೇಕು ಸೂಚನೆ ನೀಡಿದರು.

ಇನ್ನು ಮುಂದೆ ಪ್ರತಿ ತಿಂಗಳು ಪೊಲೀಸ್‌, ಕಾರ್ಮಿಕ ಇಲಾಖೆ, ಕೈಗಾರಿಕಾ ಇಲಾಖೆ, ಉದ್ಯೋಗ ವಿನಿಮಯ ಅಧಿಕಾರಿಗಳು ಕಾರ್ಮಿಕ ಮುಖಂಡರ ಸಭೆ ನಡೆಸಿ ನಿರಂತರವಾಗಿ ಕೈಗಾರಿಕೆಯಲ್ಲಿ ಯಾವುದೇ ಅಸಮಾಧಾನ ಇರದಂತೆ, ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿಯವರು ಕಾರ್ಮಿಕ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಖಾನೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ ಅವರು ಮಾಹಿತಿ ನೀಡಿ ಕಾರ್ಖಾನೆಗೆ ನೇಮಿಸಿಕೊಳ್ಳಲಾಗುತ್ತಿರುವ ಸಿಬ್ಬಂದಿ, ಕಾರ್ಮಿಕರ ಹಿನ್ನೆಲೆ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಈ ಬಗ್ಗೆ ಸಂಸ್ಥೆಯು ನಿರಂತರವಾಗಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು. ಅಹಿತಕರ ಘಟನೆಗೆ ಕಾರಣವಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು. ಸಹಾಯಕ ಕಾರ್ಮಿಕ ಆಯುಕ್ತ‌ ವಿವೇಕ್‌ ಮಾತನಾಡಿ, ಕಾರ್ಖಾನೆಯಲ್ಲಿ ಮೊದಲು ಎಲ್ಲರ ವಿಶ್ವಾಸಗಳಿಸುವ ಕೆಲಸ ಮಾಡಿ, ಇದಲ್ಲದೇ ನಿರಂತರ ಪ್ರಕ್ರಿಯೆಯಾಗಬೇಕು. ಸಣ್ಣ ಪುಟ್ಟ ಘಟನೆಗಳಾದಾಗ ತಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ಕರೆಸಿ ಮಾತನಾಡಿ ಬಗೆಹರಿಸಬೇಕು ಅದನ್ನು ದೊಡ್ಡದಾಗಲು ಬಿಡಬಾರದು ಎಂದು ಕಾರ್ಖಾನೆಯ ಪ್ರತಿನಿಧಿಗಳಿಗೆ ಅಕ್ರಂ ಪಾಷಾ ಸೂಚನೆ ನೀಡಿದರು.

Advertisement

ಕಂಪನಿ ಅಧಿಕಾರಿಗಳ ಭರವಸೆ: ಹಿಮ್ಮತ್‌ ಸಿಂಗ್‌ ಸಂಸ್ಥೆಯ ಉಪಾಧ್ಯಕ್ಷ ಸಂಜಯ್‌, ನೇಮಕಾತಿ ವಿಭಾಗದ ಮಹೇಶ್‌ ಅವರು ಮಾತನಾಡಿ ಸಂಸ್ಥೆಯಲ್ಲಿ ಕಳೆದೊಂದು ತಿಂಗಳಿಂದ ಬೇರೆ ಬೇರೆ ಕಾರಣಗಳಿಗೆ ನಡೆದ ಸಣ್ಣ ಪುಟ್ಟ ಘಟನೆಗಳು ಅನಿರೀಕ್ಷಿತವಾಗಿ ಈ ಮಟ್ಟಕ್ಕೆ ನಡೆದಿದೆ. ಹಿಂದೆಂದೂ ಸಂಸ್ಥೆಯಲ್ಲಿ ಈ ರೀತಿಯ ಘಟನೆಗಳು ಆಗಿರಲಿಲ್ಲ ಮುಂದೆದೂ ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಸಂಸ್ಥೆಯಲ್ಲಿ ಜೂನ್‌ ತಿಂಗಳವರೆಗೆ ಎಲ್ಲರಿಗೂ ಸಂಬಳ ನೀಡಲಾಗಿದ್ದು, ಯಾವುದೇ ವೇತನ ಸಮಸ್ಯೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಎಚ್.ಆರ್‌. ವಿಭಾಗವನ್ನೂ ಬಲಪಡಿಸಲಾಗುವುದು ನಿರಂತರ ಸಭೆ, ಸಾಮಥ್ರ್ಯಾಭಿವೃದ್ಧಿಯ ಜೊತೆಗೆ ಸೌಹಾರ್ದ ವಾತಾವರಣ ವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಹಿಮ್ಮತ್‌ ಸಿಂಗ್‌ ಘಟಕಕ್ಕೆ ಜಿಲ್ಲಾಧಿಕಾರಿ ಎಚ್ಚರಿಕೆ:

ನಗರದ ಕೈಗಾರಿಕಾಭಿವೃದ್ಧಿ ಕೇಂದ್ರ ದಲ್ಲಿರುವ ಹಿಮ್ಮತ್‌ ಸಿಂಗ್‌ ಕಾ ಜವಳಿ ಕೈಗಾರಿಕೆ ಘಟಕದ ಬಳಿ ಬುಧವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊರ ರಾಜ್ಯಗಳ 65 ಕಾರ್ಮಿಕರನ್ನು ಬಂಧಿಸಿದ್ದು, ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗಳನ್ನು ಬಂಧನ ಕ್ಕೊಪ್ಪಿಸಿದೆ.

ಕೈಗಾರಿಕಾ ಘಟಕದ ಬಳಿ ಬುಧ ವಾರ ಹಿಂಸಾಚಾರ ನಡೆಯುತ್ತಿದ್ದ ಸಂದರ್ಭ ದಲ್ಲಿ ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಬುಧವಾರ ಮಧ್ಯಾಹ್ನವೇ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದರು. ಕೆಲವು ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದಾಗ ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣ ಹಾಗೂ ವಿವಿಧ ವಸತಿಗೃಹಗಳಲ್ಲಿ ವಾಸವಿದ್ದವರನ್ನು ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದರು. ಆನಂತರ ವಿಚಾರಣೆಗೊಳಪಡಿಸಿ ಗುರುವಾರ ಬೆಳಗ್ಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಪೊಲೀಸರಿಂದ ಸ್ವಯಂ ದೂರು ದಾಖಲು: ಕೈಗಾರಿಕಾ ಘಟಕದ ಬಳಿ ದಾಂಧಲೆ ನಡೆದ ಸಂದರ್ಭದಲ್ಲಿ ಕೈಗಾರಿಕಾ ಘಟಕದ ಭದ್ರತಾ ಕೊಠಡಿಯ ಗಾಜುಗಳು, ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಸುಮಾರು 10ಕಾರುಗಳು, 15ಕ್ಕೂ ಹೆಚ್ಚು ಬೈಕುಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ವ್ಯಾನ್‌ ಜಖಂಗೊಂಡಿದೆ. ಆದರೂ ಈ ಘಟನೆಗೆ ಸಂಬಂಧಿದಂತೆ ಕೈಗಾರಿಕಾ ಘಟಕದ ಆಡಳಿತ ವಿಭಾಗದವರು ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿ ದ್ದಾರೆ. ಕಾರ್ಮಿಕರ ಪುಂಡಾಟಿಕೆಯ ಸಂದರ್ಭ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 9 ಮಂದಿ ಪೊಲೀಸರಿಗೆ ಚಿಕಿತ್ಸೆ ಮುಂದುವರಿದೆ.

ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ: ಕೈಗಾರಿಕಾ ಘಟಕದ ಬಳಿ ಹಿಂಸಾಚಾರ ನಡೆದರೂ ಕಾರ್ಖಾನೆ ಆಡಳಿತ ಮಂಡಳಿಯವರು ದೂರು ನೀಡದೇ ನಿರ್ಲಕ್ಷ್ಯ ತಾಳಿರುವ ಧೋರಣೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ.

ಕೈಗಾರಿಕಾ ಘಟಕದ ಬಳಿ ಇರುವ ಹನುಮಂತಪುರ, ಕೊಕ್ಕನಘಟ್ಟ ಮತ್ತಿತರ ಗ್ರಾಮಗಳಲ್ಲೂ ಹೊರ ರಾಜ್ಯದ ಕಾರ್ಮಿಕರಿಂದ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದ ಕಾರ್ಮಿಕರು ಗುಂಪು, ಗುಂಪಾಗಿ ಸ್ಥಳೀಯರ ಮೇಲೆ ದಾಳಿ ನಡೆಸಿದ ಪ್ರಕರಣಗೂ ಇವೆ. ಆದರೂ ಬಿಗಿ ಬಂದೋಬಸ್ತ್ ಕ್ರಮಗಳನ್ನು ಕೈಗಾರಿಕಾ ಘಟಕದವರು ಕೈಗೊಳ್ಳುತ್ತಿಲ್ಲ ಎಂದೂ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next