Advertisement
ಎಸ್‌ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪರಶುರಾಮ್ ವಾಗ್ಮೋರೆಯನ್ನು ಸೋಮವಾರ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ತನಿಖಾಧಿಕಾರಿಗಳು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾ.ಪ್ರಕಾಶ್, ಎರಡು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದರು.
Related Articles
Advertisement
ಮತ್ತೆ ಎಸ್‌ಐಟಿ ವಶಕ್ಕೆ?: ಜೂ.27ರಂದು ಪ್ರಕರಣದ ಇತರೆ ನಾಲ್ಕು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ಅದೇ ದಿನ ವಾಗ್ಮೋರೆ ಸೇರಿ ಎಲ್ಲ ಆರೋಪಿಗಳನ್ನು ಮತ್ತೂಮ್ಮೆ ಎಸ್‌ಐಟಿ ವಶಕ್ಕೆ ಪಡೆಯಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೂ ವಾಗ್ಮೋರೆ ಹಾಗೂ ಇತರೆ ನಾಲ್ವರು ಆರೋಪಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿಲ್ಲ. ಹೀಗಾಗಿ ಐವರು ಆರೋಪಿಗಳನ್ನು ಒಟ್ಟಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಚಿಂತನೆ ನಡೆಸಿದೆ ಎಂದು ವಿಶ್ವಾಸನೀಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಅಮೋಲ್ ಕಾಳೆ ಸಿಐಡಿ ವಶಕ್ಕೆ?: ಗೌರಿ ಲಂಕೇಶ್ ಹತ್ಯೆಗೆ ರೂಪುರೇಷೆ ಸಿದ್ಧಪಡಿಸಿದ್ದಾನೆ ಎನ್ನಲಾದ ಆರೋಪಿ, ಮಹಾರಾಷ್ಟ್ರದ ಅಮೋಲ್ ಕಾಳೆಗೂ ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೂ ಸಂಬಂಧ ಇರುವ ಬಗ್ಗೆ ಸಿಐಡಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಬಾಡಿ ವಾರೆಂಟ್ ಪಡೆದು ಅಮೋಲ್ ಕಾಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪರಶುರಾಮ್ ವಾಗ್ಮೋರೆಯನ್ನು ನ್ಯಾಯಾಲಯ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದೆ. ಜಾಮೀನು ಅರ್ಜಿ ಸಲ್ಲಿಸುವ ಕುರಿತು ಜೂ.27ರ ವಿಚಾರಣೆ ಬಳಿಕ ತೀರ್ಮಾನಿಸಲಾಗುವುದು.ಹರ್ಷ ಮುತಾಲಿಕ್, ವಾಗ್ಮೋರೆ ಪರ ವಕೀಲರು