ಬೆಂಗಳೂರು: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಬಿ ಸುನೀಲ್‌ಗೆ 1 ತಿಂಗಳು ಜೈಲು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಪಿಎಸ್‌ಐ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿತು.
ಆದರೆ, ಆರೋಪಿತ ಅಧಿಕಾರಿ ತೀರ್ಪಿನ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 2 ತಿಂಗಳು ಕಾಲವಕಾಶ ಇರುವುದರಿಂದ, ಜೈಲು ಹಾಗೂ ದಂಡದ ಶಿಕ್ಷೆ ಈ ಅವಧಿಯವರೆಗೆ ಅಮಾನತ್ತಿನಲ್ಲಿರಲಿದೆ.
ಪ್ರಕರಣವೇನು?: ಕೊಲೆಯತ್ನ (ಐಪಿಸಿ ಕಲಂ 307) ಆರೋಪ ಪ್ರಕರಣದ ಆರೋಪಿಯೊಬ್ಬನಿಗೆ ನಗರದ 1ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆಗಸ್ಟ್ 22, 2016ರಂದು ನಿರೀಕ್ಷಣಾ ಜಾಮೀನು ಆದೇಶ ನೀಡಿತ್ತು ಹೀಗಾಗಿ ಆ. 23ರಂದು ನ್ಯಾಯಾಲಯ ವಿಧಿಸಿದ್ದ ಷರತ್ತಿನ ಶ್ಯೂರಿಟಿ ತೆಗೆದುಕೊಂಡು ಆರೋಪಿ ಪರ ವಕೀಲ ರೂಪೇಶ್ ಕಗ್ಗಲೀಪುರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಬಿ ಸುನಿಲ್‌ಗೆ ನೀಡುತ್ತಾರೆ.
ಆದರೆ ಪಿಎಸ್‌ಐ ನ್ಯಾಯಾಲಯದ ಇಂತಹ ಆದೇಶಗಳನ್ನು ಎಷ್ಟು ನೋಡಿಲ್ಲ ಎಂದು ಮೂರು ಬಾರಿ ಜಾಮೀನು ಆದೇಶವನ್ನು ಎಸೆಯುತ್ತಾರೆ. ಮಾರನೇ ದಿನ ಜಾಮೀನು ಅರ್ಜಿ ಸ್ವೀಕರಿಸುತ್ತಾರೆ. ಅಧಿಕಾರಿಯು ನ್ಯಾಯಾಲಯದ ಆದೇಶ ಉಲ್ಲಂ ಸಿದ ಸಂಬಂಧ ರೂಪೇಶ್, ಪುನ: ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ.
ಅಂತಿಮವಾಗಿ ಅಧೀನ ನ್ಯಾಯಾಲಯದ ಆದೇಶದಂತೆ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಸಲ್ಲಿಸುವಂತೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶ ಗೌರವಿಸದ ಪಿಎಸ್‌ಐ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.