Advertisement

ಮೆಡಿಕಲ್‌ ಟೂರಿಸಂ ಪ್ರದೇಶವಾಗಿ ಮಂಗಳೂರು

06:35 AM Mar 04, 2018 | Team Udayavani |

ಬೆಂಗಳೂರು: “ಆರೋಗ್ಯಕ್ಕೆ ಗಡಿರೇಖೆ ಇಲ್ಲ’ ಎಂಬ ಕಲ್ಪನೆಯಲ್ಲಿ ನಗರದಲ್ಲಿ ಆರಂಭವಾಗಿದ್ದ ಎರಡು ದಿನಗಳ ಇಂಟರ್‌ ನ್ಯಾಷನಲ್‌ ಮೆಡಿಕಲ್‌ ಟೂರಿಸಂ ಕುರಿತ ಸಮ್ಮೇಳನಕ್ಕೆ ಶನಿವಾರ ತೆರೆಬಿತ್ತು. ಕಡಲ ನಗರಿ ಮಂಗಳೂರನ್ನು ಮೆಡಿಕಲ್‌ ಟೂರಿಸಂ ಪ್ರದೇಶವನ್ನಾಗಿ ಅಭಿವೃದ್ದಿ ಪಡಿಸುವುದು ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

Advertisement

ಮೆಡಿಕಲ್‌ ಟೂರಿಸಂ ಕುರಿತ 3ನೇ ಸಮ್ಮೇಳನ ಇದಾಗಿದ್ದು ಕೆನಡಾ, ಕೀನ್ಯಾ, ಸೋಮಾಲಿಯಾ, ಜಿಂಬಾಬ್ವೆ, ಘಾನ, ವಿಯೆಟ್ನಾಂ, ಐವರಿ ಕೋಸ್ಟ್‌, ಮೊಜಾಂಬಿಕ್‌ ಸೇರಿದಂತೆ ಸುಮಾರು 20 ದೇಶಗಳ 400 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ನಗರದ ಖಾಸಗಿ ಹೋಟೆಲ್‌ನಲ್ಲಿ  ಶುಕ್ರವಾರ ಆರಂಭವಾಗಿದ್ದ ಈ ಆರೋಗ್ಯ ಸಮ್ಮೇಳನದಲ್ಲಿ ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಚಾರಗೋಷ್ಠಿಗಳು ನಡೆದವು. ಅಲ್ಲದೆ ಕರ್ನಾಟಕದಲ್ಲಿ ಸುಲಭವಾಗಿ ದೊರೆಯುತ್ತಿರುವ ವಿವಿಧ ಶಸ್ತ್ರ ಚಿಕಿತ್ಸೆಗಳ ಬಗ್ಗೆ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಾಯಿತು. ಆಯುರ್ವೇದ ಚಿಕಿತ್ಸೆಯ ಬಗ್ಗೆ ವಿಚಾರ ಗೋಷ್ಠಿ ನಡೆಯಿತು.

ಟೆಲಿಮೆಡಿಸಿನ್‌ ಬಗ್ಗೆ ಮಾತನಾಡಿದ ಹೈದ್ರಾಬಾದ್‌ನ ಡೆಕನ್‌ ಆಸ್ಪತ್ರೆಯ ವೈದ್ಯ ಡಾ.ಕೆ.ಎಸ್‌.ನಾಯಕ್‌, ಅಂತರ್ಜಾಲ ತಾಣದ ಬಳಕೆ ಮತ್ತು ಅದರ ಅಪಾಯಗಳ ಬಗ್ಗೆ ತಿಳಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಬಂಧಿಸಿದ ದತ್ತಾಂಶಗಳು ಕೂಡ ಕಾಣೆಯಾಗುತ್ತಿವೆ ಭಷ್ಯತ್ತಿನ ದೃಷ್ಟಿಯಿಂದ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಆರೋಗ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಎಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ವೈಫೈ ಬಳಕೆ ಮಾಡದಂತೆ ಮತ್ತು ಆರೋಗ್ಯ ಸಂಬಂಧಿಸಿದ ದತ್ತಾಂಶಗಳನ್ನು ಹಂಚಿಕೊಳ್ಳುವಾಗ ಇತರರ ಮೊಬೈಲ್‌ ಬಳಕೆ ಮಾಡಿ ಹಂಚಿಕೊಳ್ಳದಂತೆ ಮನವಿ ಮಾಡಿದರು.

Advertisement

ಮಂಗಳೂರಿನ ಎನೆಪೊಯಾ ಆಸ್ಪತ್ರೆಯ ವೈದ್ಯ ಶಕ್ತಿವೇಲು ಕುಮಾರೇಸನ್‌ ಮಾತನಾಡಿ, ಕಡಲ ಕಿನಾರೆ ಮಂಗಳೂರು ದಕ್ಷಿಣ ಭಾರತದ ದುಬೈ ನಗರಿ ಎಂದು ಬಣ್ಣಿಸಿಕೊಂಡಿದೆ. ಕ್ಲೀನ್‌ ಸಿಟಿ ಎಂಬ ಹಿರಿಮೆಯು ಕೂಡ ಇದರದ್ದಾಗಿದ್ದು ಆರೋಗ್ಯಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಹೆಸರಾಂತ ಆಸ್ಪತ್ರೆಗಳು ಇಲ್ಲಿದ್ದು ಕಡಿಮೆ ವೆಚ್ಚದಲ್ಲಿ ಹಲವು ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿದೆ. ಎನೆಪೊಯ ಆಸ್ಪತ್ರೆ, ಬೈಪಾಸ್‌ ಸರ್ಜರಿ ಸೇರಿದಂತೆ ಹಲವು ಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿ ನೀಡುತ್ತಾ ಆರೋಗ್ಯ ಸೇವೆ ಮಾಡುತ್ತಿದೆ ಎಂದರು.

ಮಂಗಳೂರಿನ ಯೇನಪೊಯ ಆಸ್ಪತ್ರೆಯ  ಡಾ| ಮೊಹಮ್ಮದ್‌ ತಹೀರ್‌ ಸಹಿತ ಹಲವು ವೈದ್ಯರು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಮಂಗಳೂರು ಎಲ್ಲ ರೀತಿಯಲ್ಲೂ ಬೆಳವಣಿಗೆಗೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರನ್ನು ಮೆಡಿಕಲ್‌ ಟೂರಿಸಂ ಪ್ರದೇಶವನ್ನಾಗಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.  ಸಮ್ಮೇಳನದಲ್ಲಿ ಪಾಲ್ಗೊಂಡಿರುವ ನಿಯೋಗ ರವಿವಾರ ಮಂಗಳೂರಿಗೆ ಭೇಟಿ ನೀಡಲಿದೆ ಎಂದು ಕಾರ್ಯಕ್ರಮದ ಸಂಯೋಜಕಿ ಮತ್ತು ಸಿಐಎ ಗ್ಲೋಬಲ್‌  ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ನಿರಂಜನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next