ಲಕ್ನೋ : ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದ ನ್ಯಾಯಾಧೀಶ ದಿನೇಶ್ ಚಂದ್ರ ಶುಕ್ಲಾ ಅವರಿಗೆ ಸರಕಾರ ವೈ-ಪ್ಲಸ್ ಭದ್ರತೆಯನ್ನು ಒದಗಿಸಿದೆ.
ಉತ್ತರ ಪ್ರದೇಶ ಪೊಲೀಸ್‌ನ ಉನ್ನತ ಅಧಿಕಾರಿಗಳ ಪ್ರಕಾರ, ಸ್ಥಳೀಯ ಪೊಲೀಸರು ನ್ಯಾಯಾಧೀಶರಿಗೆ ಸೂಕ್ತ ಭದ್ರತೆಯನ್ನು ಒದಗಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, 2006ರಲ್ಲಿ ಉಮೇಶ್ ಪಾಲ್ ಅವರನ್ನು ಅಪಹರಿಸಿದ್ದ ಅತೀಕ್ ಅಹ್ಮದ್ ಮತ್ತು ಇತರ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಸಂಸದ-ಶಾಸಕ ನ್ಯಾಯಾಲಯದ ಆವರಣದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಈ ಕುರಿತು ಸಭೆ ನಡೆಸಲಾಗಿದ್ದು, ನ್ಯಾಯಾಧೀಶರಿಗೆ ವೈ ಪ್ಲಸ್ ಭದ್ರತೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ತಮ್ಮ ಕೆಲಸ ಅಥವಾ ಜನಪ್ರಿಯತೆಯ ಕಾರಣದಿಂದಾಗಿ ಅವರ ಜೀವನವು ಅಪಾಯದಲ್ಲಿದೆ ಎಂದು ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ಭದ್ರತಾ ರಕ್ಷಣೆಯನ್ನು ನೀಡಲಾಗುತ್ತದೆ.
ವೈ-ಪ್ಲಸ್ ಭದ್ರತೆಯು 11-ಸದಸ್ಯ ಸಿಬಂದಿಯನ್ನು ಒಳಗೊಂಡಿರುವ ಭಾರತದ ನಾಲ್ಕನೇ ಭದ್ರತಾ ಹಂತವಾಗಿದೆ, ಇದರಲ್ಲಿ ಒಬ್ಬರು ಅಥವಾ ಇಬ್ಬರು NSG ಕಮಾಂಡೋಗಳು ಮತ್ತು ಪೊಲೀಸ್ ಸಿಬಂದಿ ಸೇರಿರುತ್ತಾರೆ. ವೈ-ಪ್ಲಸ್ ಭದ್ರತೆಯನ್ನು ಪಡೆದ ವ್ಯಕ್ತಿಯೊಂದಿಗೆ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಸಹ ಇರುತ್ತಾರೆ.