Advertisement

ಹಿಂಡಲಗಾ ಜೈಲಿಗೆ ನ್ಯಾಯಾಧೀಶರ ಭೇಟಿ

02:36 PM May 20, 2022 | Team Udayavani |

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ರಾಜ್ಯಾಧ್ಯಕ್ಷ ಬಿ. ವೀರಪ್ಪ ಅವರು ಗುರುವಾರ ಭೇಟಿ ನೀಡಿ ಜೈಲಿನೊಳಗೆ ಸುತ್ತು ಹಾಕಿ ಪರಿಶೀಲನೆ ನಡೆಸಿದರು.

Advertisement

ಕೈದಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳನ್ನು ಸರಿಯಾಗಿ ಸಂಗ್ರಹಿಸಿ ಇಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರಾದ ಬಿ. ವೀರಪ್ಪ ಅವರು, ಕೈದಿಗಳಿಗೆ ನೀಡುವ ಆಹಾರ ಪದಾರ್ಥಗಳ ಬಗ್ಗೆ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.

ಕೈದಿಗಳಿಗೆ ನೀಡುವ ಊಟವನ್ನು ಸವಿದು, ಊಟದ ಗುಣಮಟ್ಟ ಪರೀಕ್ಷಿಸಿದರು. ಜೈಲಿನ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ವ್ಯವಸ್ಥೆ ಬಗ್ಗೆ ತಿಳಿದುಕೊಂಡರು. ನಂತರ ಕೈದಿಗಳೊಂದಿಗೆ ಸಂವಾದ ನಡೆಸಿದ ಅವರು, ಕೋರ್ಟ್‌ ರಜೆ ಹಿನ್ನೆಲೆಯಲ್ಲಿ ನಿಮ್ಮನ್ನು ನೋಡಬೇಕು ಎಂದು ಸಂತೋಷದಿಂದ ಬಂದಿದ್ದೇನೆ. ಊಟದ ಕೊಠಡಿ ಸ್ವಚ್ಛತೆ ಇಲ್ಲ. ಈ ಊಟದ ಕೊಠಡಿ ಶತಮಾನ ಕಂಡ ಕಟ್ಟಡ. ಕಟ್ಟಡದ ನವೀಕರಣಕ್ಕೆ ಅನುದಾನ ಬಂದಿರುವ ಬಗ್ಗೆ ಜೈಲು ಅಧೀಕ್ಷಕ ಕೃಷ್ಣಕುಮಾರ ತಿಳಿಸಿದ್ದಾರೆ. ಒಂದು ತಿಂಗಳು ನಂತರ ಮತ್ತೂಮ್ಮೆ ಭೇಟಿ ಕೊಡುತ್ತೇನೆ. ಆಗ ಏನು ಬದಲಾವಣೆ ಆಗುತ್ತದೋ ನೋಡುತ್ತೇನೆ ಎಂದರು.

ಕೆಟ್ಟ ಘಳಿಗೆಯಲ್ಲಿ ಮಾಡಿದ ತಪ್ಪು ತಿದ್ದಿಕೊಂಡು ಮುನ್ನಡೆಯಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿಮಗೆ ಉಚಿತವಾಗಿ ಕಾನೂನು ಸಲಹೆಗಳನ್ನು ನೀಡುತ್ತದೆ. ಕಾನೂನಾತ್ಮಕವಾಗಿ ಹೋರಾಟ ನಡೆಸಲು ಪೂರಕವಾಗಿ ಸ್ಥಳೀಯ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ ವಕೀಲರನ್ನು ನೇಮಿಸುತ್ತದೆ. ಈ ಸೇವೆಗಳ ಸದುಪಯೋಗ ಪಡೆಯಬೇಕು ಎಂದರು.

Advertisement

ಮಾಡಿದ ಕೃತ್ಯಗಳಿಂದ ಬದಲಾಗಿ ಹೊಸ ಮಾನವರಾಗಿ ಸಮಾಜಕ್ಕೆ ಮಾದರಿಯಾಗಿ ಬಾಳಬೇಕು. ಆಗ ನೀವು ಬಿಡುಗಡೆ ಆಗಿದ್ದಕ್ಕೂ ಸಾರ್ಥಕವಾಗುತ್ತದೆ. ಜೈಲಿನಿಂದ ಬಿಡುಗಡೆ ಆದ ನಂತರ ಹೊಸ ಮನುಷ್ಯರಾಗಿ ಬಾಳಬೇಕು ಎಂದರು.

ಅನೇಕ ಕೈದಿಗಳು ಜಾಮೀನು ಮತ್ತು ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು.

ಆಸ್ಪತ್ರೆಗೆ ಭೇಟಿ: ನಂತರ ಅವರು ಇಲ್ಲಿನ ಜಿಲ್ಲಾಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು ಆಸನ ಇಲ್ಲದಿರುವುದು ಹಾಗೂ ಶೌಚಗೃಹ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಜನರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಜಿಲ್ಲಾ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ಭೇಟಿ ಮಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶರಾದ ಎ.ಬಿ. ಶ್ರೀನಾಥ, ಮಂಜುನಾಥ ಭಟ್‌, ಕಾರಾಗೃಹ ಅಧೀಕ್ಷಕ ಕೃಷ್ಣಕುಮಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next