ವಿಜಯಪುರ: ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಶುಕ್ರವಾರ ತಡರಾತ್ರಿ ನಗರದ ಪೊಲೀಸ್ ಠಾಣೆಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆಗೆ ಶುಕ್ರವಾರ ತಡರಾತ್ರಿ 11ರ ಸುಮಾರಿಗೆ ಕಾನೂನು ಸೇವಾ ಪ್ರಾಧಿಕಾರದ ಸಹಾಯಕರಾದ ಅನಿಲ ದಶವಂತ ಅವರೊಂದಿಗೆ ಅನಿರೀಕ್ಷಿತ ಭೇಟಿ ಠಾಣೆಯ ವ್ಯವಸ್ಥೆ ಪರಿಶೀಲಿಸಿದರು. ಅಲ್ಲದೇ ಠಾಣೆಯ ರಾತ್ರಿ ಕರ್ತವ್ಯದಲ್ಲಿದ್ದ ಬಿ.ಎ.ನಿಡೋಣಿ ಅವರಿಂದ ಮಾಹಿತಿ ಪಡೆದರು.
ಇದನ್ನೂ ಓದಿ:ಸಂಚಲನ ಉಂಟು ಮಾಡಿದ ಪಿಎಸ್ಐ ಪರೀಕ್ಷಾ ಅಕ್ರಮ ಕಿಂಗ್ ಪಿನ್ ಆರ್.ಡಿ.ಪಾಟೀಲ್ ವಿಡಿಯೋ!
ಬಳಿಕ ಠಾಣೆಯಲ್ಲಿ ಆರೋಪಿತರ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಕೆ, ಉಚಿತ ಕಾನೂನು ಸಲಹೆ ನೀಡುವ ವಕೀಲರು ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಮಾಡದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಹಕ್ಕುಗಳ ರಕ್ಷಣೆ ಕುರಿತು ಫಲಕ ಅಳವಡಿಸಬೇಕು. ಅಲ್ಲದೇ ಉಚಿತ ಕಾನೂನು ಸೇವೆ ನೀಡುವ ವಕೀಲರಿಗೆ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಿದ, ಮೂಲಭೂತ ಸೌಕರ್ಯ ಸೇರಿದಂತೆ ಕೈಗೊಂಡ ಕ್ರಮಗಳ ಕುರಿತು ತ್ವರಿತವಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.