ಬೆಂಗಳೂರು: ಐಸಿಸ್ ಪ್ರೇರಿತ ಅಲ್- ಹಿಂದ್ ಹೆಸರಿನ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಕರ್ನಾಟಕ ಕಮಾಂಡರ್ ಮೆಹಬೂಬ್ ಪಾಷಾ ಕೊನೆಗೂ ತನಿಖಾ ತಂಡಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಬುಧವಾರ ತಡರಾತ್ರಿ ಈತನನ್ನು ಬಂಧಿಸಲಾಗಿದೆ.
“ಬೇಸ್ ಮೂವ್‌ಮೆಂಟ್’ ಉಗ್ರ ಸಂಘಟನೆಯ ಸಂಚಿನ ಮಾದರಿಯಲ್ಲಿ ನ್ಯಾಯಾಧೀಶರು, ಭಯೋತ್ಪಾದನ ಪ್ರಕರಣಗಳ ತನಿಖೆ ನಡೆಸುತ್ತಿರುವ ಮತ್ತು ಸಹಕರಿಸುತ್ತಿರುವ ಪೊಲೀಸ್ ಅಧಿಕಾರಿಗಳು ಹಾಗೂ ಹಿಂದೂ ಮುಖಂಡರ ಹತ್ಯೆಯು ಆರೋಪಿ ಹಾಗೂ ತಂಡದ ಮೂಲ ಗುರಿಯಾಗಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನಿಷೇಧಿತ ಸಿಮಿ ಸಂಘಟನೆಯ ಸಾಧಿಕ್ ಸಮೀರ್ ಜತೆ ನೇರ ಸಂಪರ್ಕ ಹೊಂದಿದ್ದ ಮನ್ಸೂರ್ ಖಾನ್ ಬುಧವಾರವಷ್ಟೇ ಬಂಧಿತ ನಾಗಿದ್ದ. ಆತ ಐಸಿಸ್ ಪ್ರೇರಿತ ಜೆಹಾದಿ ಚಟು ವಟಿಕೆಯ ಮಾಸ್ಟರ್ ಮೈಂಡ್. ಖಾನ್‌ನ ಸಂಬಂಧಿಯೂ ಆಗಿರುವ ಮೆಹಬೂಬ್ ಪಾಷಾ ಇತ್ತೀಚೆಗಷ್ಟೇ ದಿಲ್ಲಿಯಲ್ಲಿ ಬಂಧನಕ್ಕೊಳಗಾಗಿ ರುವ ಐಸಿಸ್ ಸಂಘಟನೆ ಸದಸ್ಯ ಖ್ವಾಜಾ ಮೊಯ್ದಿನ್ ಸಲಹೆ ಯಂತೆ ಕೆಲವು ತಿಂಗಳ ಹಿಂದಷ್ಟೇ ದುಬಾೖ ಯಲ್ಲಿರುವ ಐಸಿಸ್ ಮುಖಂಡರ ಜತೆ ಮೊಬೈಲ್ ಮೂಲಕ ಕರ್ನಾಟಕದಲ್ಲಿ ಸಂಘಟನೆ ಮಾಡುವ ಕುರಿತು ಚರ್ಚಿಸಿದ್ದ. ಉಗ್ರ ಸಂಘಟನೆಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡುವುದಾಗಿಯೂ ಐಸಿಸ್ ಭರವಸೆಯಿತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಷಾ ಸಾಮಾಜಿಕ ಚಟುವಟಿಕೆಯ ನೆಪದಲ್ಲಿ ಸಮುದಾಯದ ಕೆಲವು ಯುವಕರನ್ನು ಜೆಹಾದಿ ಹೆಸರಿನಲ್ಲಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ. ಅಲ್ಲದೆ, ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಬೇಸ್ ಮೂವ್‌ಮೆಂಟ್ ಮಾದರಿ
ತಮಿಳುನಾಡು ಮತ್ತು ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಖ್ವಾಜಾ ಮೊಯ್ದಿನ್, ಮೆಹಬೂಬ್ ಪಾಷಾ ಮತ್ತು ಮನ್ಸೂರ್ ಖಾನ್ ಸಭೆ ನಡೆಸಿ, ಕೇರಳ ಮೂಲದ “ಬೇಸ್ ಮೂವ್‌ಮೆಂಟ್’ ಸಂಘಟನೆಯ ಮಾದರಿಯನ್ನು ಅಳವಡಿಸಿಕೊಂಡು ಕರ್ನಾಟಕ ಮತ್ತು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು.
ಸಾಮಾನ್ಯವಾಗಿ ಬೇಸ್ ಮೂವ್‌ಮೆಂಟ್ ಸಂಘಟನೆ ನ್ಯಾಯಾಧೀಶರು, ಕೋರ್ಟ್, ಪೊಲೀಸ್ ಅಧಿಕಾರಿಗಳು ಹಾಗೂ ಹಿಂದೂ ಮುಖಂಡರ ಹತ್ಯೆಗೈಯಲು ಪ್ರಯತ್ನಿ ಸುತ್ತಿತ್ತು. ಮೈಸೂರಿನಲ್ಲಿ ನಡೆದ ಸ್ಫೋಟ ಆ ಸಂಚಿನ ಭಾಗವಾಗಿತ್ತು. ಅದೇ ಮಾದರಿಯಲ್ಲಿ ತಮ್ಮ ಸಂಘಟನೆಯನ್ನು ವಿಸ್ತರಿಸಬೇಕು ಎಂಬ ಮೂಲ ಉದ್ದೇಶದಿಂದಲೇ ಮೂವರು ಆರೋಪಿಗಳು ಸಭೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿಯೇ ತಮಿಳುನಾಡಿನಲ್ಲಿ ಪಿಎಸ್‌ಐ ವಿಲ್ಸನ್ ಅವರ ಹತ್ಯೆ ನಡೆಸಲಾಗಿತ್ತು.
ಅಪಾಯಕಾರಿ ಖ್ವಾಜಾ ಮೊಯ್ದಿನ್
ಮೂವರ ಪೈಕಿ ಖ್ವಾಜಾ ಮೊಯ್ದಿನ್ ಅತ್ಯಂತ ಅಪಾಯಕಾರಿ ಉಗ್ರನಾಗಿದ್ದು, ಐಸಿಸ್ ಮುಖಂಡರ ಸೂಚನೆ ಮೇರೆಗೆ ಸಂಘಟನೆ ಹಾಗೂ ವಿಧ್ವಂಸಕ ಕೃತ್ಯ ಎಸಗುತ್ತಿದ್ದ. ಕೆಲವು ವರ್ಷಗಳ ಹಿಂದೆ ಸಿರಿಯಾದಲ್ಲಿ ಐಸಿಸ್ ಸಂಘಟನೆ ಸೇರಿದ್ದ ಹಜ್ ಫಕ್ರುದ್ದೀನ್ ಎಂಬಾತನ ಸೂಚನೆ ಮೇರೆಗೆ ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಘಟನೆ ಮಾಡುತ್ತಿದ್ದ. ಅಲ್ಲದೆ, ತಮಿಳುನಾಡಿನಲ್ಲಿ ಆತ್ಮಾಹತ್ಯಾ
ಬಾಂಬರ್‌ಗಳನ್ನಾಗಿ ಸಮುದಾಯವೊಂದರ ಅಂಗವಿಕಲ ಯುವಕರಿಗೆ ಜೆಹಾದಿ ಬಗ್ಗೆ ಪ್ರವಚನ ಮಾಡಿ, ವಿಧ್ವಂಸಕ ಕೃತ್ಯ ಎಸಗುತ್ತಿದ್ದ ಎಂದು ಮೂಲಗಳು ತಿಳಿಸಿವೆ.
-ಮೋಹನ್ ಭದ್ರಾವತಿ