Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದ್ದು, ಚುನಾವಣೆ ಎದುರಿಸಲು ತಯಾರಿ ನಡೆಸುತ್ತಿದ್ದೇವೆ. ಅದರ ಅಂಗವಾಗಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದೇನೆ ಎಂದರು.
Related Articles
Advertisement
ಒಂದು ಕಾಲದಲ್ಲಿ ಬಸವನಗುಡಿ, ರಾಜಾಜಿನಗರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಎಸ್.ಎಂ. ಕೃಷ್ಣ ಅವರ ಸರ್ಕಾರದ ನಂತರ ನಮ್ಮ ಪಕ್ಷದವರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ನಂತರ ಶಾಸಕರಾದ ಇತಿಹಾಸ ಇದೆ ಎಂದರು.
ನಾವು ಮಹಿಳೆಯರಿಗೆ ಮೀಸಲಾತಿ ವಿರೋಧಿಸುವುದಿಲ್ಲ. ಅವರಿಗೆ ರಾಜಕೀಯ ಶಕ್ತಿ ನೀಡಬೇಕೆಂಬುದು ನಮ್ಮ ಉದ್ದೇಶ. ಆದರೆ ಅವಕಾಶವನ್ನು ಸಮಾನವಾಗಿ ಹಂಚಬೇಕು. ಆದರೆ ಮೀಸಲಾತಿಯನ್ನು ಒಂದು ಕಡೆಗೆ ಕೇಂದ್ರೀಕರಿಸಿರುವುದು ಬಹಳ ಅನ್ಯಾಯ. ಈ ಬಗ್ಗೆ ಹೋರಾಟ ಮುಂದುವರಿಸಿ, ಅಕ್ಷೇಪ ಸಲ್ಲಿಸಿ ಎಂದು ನಾವು ತಿಳಿಸಿದ್ದೇವೆ. ಮತದಾರರ ಪಟ್ಟಿಯಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಮತದಾರರನ್ನು ತೆಗೆದುಹಾಕಲಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಪಟ್ಟಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಪ್ರತ್ಯೇಕ ಸಭೆ ಮಾಡುತ್ತೇವೆ ಎಂದರು.
75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ನಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಆ. 15 ರಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ.ಸಂಜೆ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದು ರಾಜಕೀಯೇತರ ಕಾರ್ಯಕ್ರಮ. ಇದರಲ್ಲಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ನೌಕರರು, ಕಲಾವಿದರು, ಬೇರೆ ಬೇರೆ ಕ್ಷೇತ್ರಗಳ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.
ಈಗಾಗಲೇ ಸುಮಾರು 29,000 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ರೈಲ್ವೇ ಸೇವೆ ಹಾಗೂ ಮೆಟ್ರೋ ಮಾರ್ಗಗಳನ್ನು ಬಳಸಿಕೊಳ್ಳಬೇಕು. ಆದಷ್ಟು ವಾಹನ ಬಳಕೆ ಕಡಿಮೆ ಮಾಡಬೇಕು.ಆಗಸ್ಟ್ 15 ರಂದು ಮೆಟ್ರೋ ಪ್ರಯಾಣಿಕರಿಗೆ ಶೇ.50ರಷ್ಟು ವಿನಾಯಿತಿ ನೀಡಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.
ಇದು ಈ ದೇಶದ ಸ್ವಾತಂತ್ರ್ಯದ ಹಬ್ಬವಾಗಿದೆ. ಇದನ್ನು ಸಂಭ್ರಮದಿಂದ ಆಚರಿಸಬೇಕು. ಈ ಅವಕಾಶ ನಿಮಗೆ ಮತ್ತೆ ಸಿಗುವುದಿಲ್ಲ ಎಂದರು. ಬಿಜೆಪಿ ಸ್ನೇಹಿತರು ಮನೆಮನೆಗೂ ರಾಷ್ಟ್ರಧ್ವಜವನ್ನು 25 ರೂಪಾಯಿ ನಿಗದಿ ಮಾಡಿದ್ದಾರೆ. ಸರ್ಕಾರ ಉಚಿತವಾಗಿ ರಾಷ್ಟ್ರಧ್ವಜ ನೀಡಬಹುದಿತ್ತು. ನೋಂದಣಿ ಮಾಡಿಕೊಂಡವರಿಗೆ ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಉಚಿತವಾಗಿ ನೀಡುತ್ತೇವೆ. ಅನೇಕರು ಸ್ತಬ್ಧ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಕಲಾವಿದರೂ ತಮ್ಮ ಪ್ರತಿಭೆ ಪ್ರದರ್ಶಿಸಬಹುದು. ಇದರಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು.
ಈ ಕಾರ್ಯಕ್ರಮ ಮಾಡಲು ಅನುಮತಿ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ಕಾರ್ಯಕ್ರಮ ಮಾಡುವಂತೆ ಎಐಸಿಸಿ ನಾಯಕರೇ ಸೂಚಿಸಿದ್ದು, ಅವರಿಗೆ ಆಹ್ವಾನ ನೀಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಕಾರ್ಯಕ್ರಮ ನಡೆಯಲಿದ್ದು, ಯಾರು ಬರಬೇಕು ಎಂದು ಅವರೇ ತೀರ್ಮಾನ ಮಾಡುತ್ತಾರೆ. ನಮ್ಮ ರಾಜ್ಯಕ್ಕೆ ಯಾರು ಬರುತ್ತಾರೆ ಎಂದು ನಾನು ಈಗಲೇ ಹೇಳುವುದಿಲ್ಲ ಎಂದರು. ಬಿಬಿಎಂಪಿ ವಾರ್ಡ್ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಲಿ ಎಂಬ ಬಿಜೆಪಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಅದರಲ್ಲಿ ಒಂದು ಆಕ್ಷೇಪಣೆಗೂ ಸರ್ಕಾರ ಸ್ಪಂದಿಸಿಲ್ಲ. ಯಾರ ಅಭಿಪ್ರಾಯವನ್ನೂ ಆಲಿಸದೆ ಸರ್ಕಾರ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿದೆ. ಬಿಜೆಪಿ ಶಾಸಕರು, ಸಂಸದರು ಸಂಘ ಪರಿವಾರದ ಕಚೇರಿಗಳಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಇದು ಅನ್ಯಾಯ ಅಲ್ಲವೇ? ಆಕ್ಷೇಪಗಳನ್ನು ಕೇಳುವ ಸೌಜನ್ಯ ಬೇಡವೇ?’ ಎಂದು ಪ್ರಶ್ನಿಸಿದರು. ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ ಅವರು ಏನಾದರೂ ಮಾಡಿಕೊಳ್ಳಲಿ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಿದ್ದರೆ ತಕ್ಷಣವೇ ಚುನಾವಣೆ ನಡೆಸುತ್ತಿದ್ದರು. ಈಗ ಕಾಲಹರಣ ಮಾಡಿದ್ದಾರೆ. ಚುನಾವಣೆ ನಡೆಸಲು ಅವರಿಗೆ ಸೋಲಿನ ಭಯ ಇದೆ. ನಮ್ಮ ಸಮೀಕ್ಷೆ ಪ್ರಕಾರ ಜನ ನಮ್ಮ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ ‘ ಎಂದು ತಿಳಿಸಿದರು. ಕಾಂಗ್ರೆಸ್ ಕಾಲದಲ್ಲಿ ಮಾಡಿದ ಮೀಸಲಾತಿ ವಿಚಾರ ಬಿಚ್ಚಿಡಬೇಕೆ ಎಂಬ ಬಿಜೆಪಿ ನಾಯಕರ ಸವಾಲಿನ ಕುರಿತು ಕೇಳಿದಾಗ, ‘ ಅವರು ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ,, ಬಹಳ ಸಂತೋಷ’ ಎಂದರು. ಮತದಾರರ ಪಟ್ಟಿಯಿಂದ ಎಷ್ಟು ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ಪ್ರಶ್ನೆಗೆ, ‘ ಇಡೀ ರಾಜ್ಯಾದ್ಯಂತ ಎಷ್ಟು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂಬ ಅಧಿಕೃತ ದಾಖಲೆ ನಮ್ಮ ಬಳಿ ಇವೆ. ನಾವದನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ‘ ಎಂದು ತಿಳಿಸಿದರು. ಮುಖ್ಯಮಂತ್ರಿ ಹಾಗೂ ಸಚಿವರ ಬದಲಾವಣೆ ವಿಚಾರ ಚರ್ಚೆ ಬಗ್ಗೆ ಕೇಳಿದಾಗ, ‘ ಇದಕ್ಕೂ ನಮಗೂ ಸಂಬಂಧವಿಲ್ಲ. ಅವರು ಯಾರನ್ನಾದರೂ ಮುಖ್ಯಮಂತ್ರಿ, ಮಂತ್ರಿ ಮಾಡಿಕೊಳ್ಳಲಿ. ಅದು ಅವರಿಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಭ್ರಷ್ಟಾಚಾರ ಹೆಚ್ಚಾಗಿದೆ. ಉತ್ತಮ ಆಡಳಿತ ನೀಡಿ ಜನರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಗುರಿ ‘ ಎಂದರು.