Advertisement

ನ್ಯಾಯಮೂರ್ತಿಗಳ ನೇಮಕಾತಿ ವಿವಾದ ಹೊಸ ವ್ಯವಸ್ಥೆ ಅಗತ್ಯ

09:01 AM Apr 30, 2018 | Harsha Rao |

ಉತ್ತರಾಖಂಡ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿಗೊಳಿಸುವ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರಕಾರ ತಿರಸ್ಕರಿಸುವುದರೊಂದಿಗೆ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಮತ್ತೂಂದು ಸುತ್ತಿನ ಸಂಘರ್ಷ ಶುರುವಾಗಿದೆ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯದ ಕುರಿತಾಗಿರುವ ಚರ್ಚೆಗೆ ಈ ಬೆಳವಣಿಗೆ ಕಾರಣವಾಗಿದೆ.

Advertisement

ಆರೋಗ್ಯಕರ ಪ್ರಜಾತಂತ್ರಕ್ಕೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪರಸ್ಪರ ಪೂರಕವಾಗಿ ಕಾರ್ಯವೆಸಗುವುದು ಅಗತ್ಯ. ಅಂತೆಯೇ ಪ್ರತಿಯೊಂದು ಅಂಗವೂ ಸ್ವತಂತ್ರವಾಗಿರಬೇಕು. ಹೀಗಾಗಿ ಈ ಮೂರು ಅಂಗಗಳನ್ನು ಪ್ರಜಾತಂತ್ರದ ಆಧಾರ ಸ್ತಂಭಗಳು ಎನ್ನುತ್ತಾರೆ. ಮೂರೂ ಅಂಗಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೆಂಬ ಆಶಯದಿಂದ ಸಂವಿಧಾನದಲ್ಲಿ ಇವುಗಳಿಗೆ ವ್ಯಾಪ್ತಿ ಮತ್ತು ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆಲವೊಮ್ಮೆ ಒಂದರ ವ್ಯಾಪ್ತಿಯಲ್ಲಿ ಇನ್ನೊಂದು ಹಸ್ತಕ್ಷೇಪ ಮಾಡುವುದರಿಂದ ತಿಕ್ಕಾಟ ಕಾಣಿಸಿಕೊಳ್ಳುತ್ತಿದೆ.

ಅದರಲ್ಲೂ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಈ ರೀತಿಯ ತಿಕ್ಕಾಟಗಳು ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಪ್ರಸ್ತುತ ನ್ಯಾ| ಜೋಸೆಫ್ ಪ್ರಕರಣವನ್ನೇ ತೆಗೆದುಕೊಳ್ಳುವುದಾದರೆ ಅವರ ನೇಮಕಾತಿಯನ್ನು ತಿರಸ್ಕರಿಸಲು ಸರಕಾರ ನೀಡಿರುವ ಕಾರಣಗಳು ಅಷ್ಟೇನೂ ಸದೃಢ ಎಂದೆನಿಸುತ್ತಿಲ್ಲ. ಜೋಸೆಫ್ ಅವರಿಗಿಂತ ಸೇವಾ ಹಿರಿತನ ಹೊಂದಿದವರು ಇದ್ದಾರೆ ಹಾಗೂ ಅವರ ತವರು ರಾಜ್ಯವಾದ ಕೇರಳಕ್ಕೆ ಸುಪ್ರೀಂ ಕೋರ್ಟಿನಲ್ಲಿ ಈಗಾಗಲೇ ಸಾಕಷ್ಟು ಪ್ರಾತಿನಿಧ್ಯವಿದೆ ಎಂದು ಹೇಳಿ ಸರಕಾರ ಕೋಲಿಜಿಯಂ ಶಿಫಾರಸನ್ನು ತಿರಸ್ಕರಿಸಿದೆ. ಈ ಎರಡೂ ಕಾರಣಗಳಿಗೆ ಅಪವಾದವಾಗಿರುವ ನೇಮಕಾತಿಗಳು ಹಿಂದೆ ಆಗಿವೆ. ಹೀಗಿರುವಾಗ ಕೇಂದ್ರ ಹೇಳಿರುವ ಈ ಕಾರಣಗಳಿಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಈ ಮೂಲಕ ಎನ್‌ಡಿಎ ಸರಕಾರ ತನ್ನನ್ನು ಟೀಕಿಸಲು ವಿಪಕ್ಷಗಳಿಗೆ ತಾನೇ ಅಸ್ತ್ರವೊದಗಿಸಿದೆ. 2016ರಲ್ಲಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಕೇಂದ್ರದ ಪ್ರಯತ್ನವನ್ನು ನ್ಯಾ| ಜೋಸೆಫ್ ತೀರ್ಪು ವಿಫ‌ಲಗೊಳಿಸಿತ್ತು.ಇದಕ್ಕೆ ಪ್ರತೀಕಾರವಾಗಿ ಕೇಂದ್ರ ಪ್ರಸ್ತುತ ಜೋಸೆಫ್ ಪದೋನ್ನತಿಗೆ ಅಡ್ಡಗಾಲು ಹಾಕುತ್ತಿದೆ ಎಂಬ ಆರೋಪವೇ ಈಗ ಪ್ರಧಾನವಾಗಿ ಕಾಣುತ್ತಿದೆ.ಬುಧವಾರ ಮತ್ತೂಮ್ಮೆ ಕೊಲಿಜಿಯಂ ಸಭೆ ಸೇರಲಿದ್ದು, ಇದರಲ್ಲಿ ಆಗುವ ನಿರ್ಧಾರದ ಮೇಲೆ ನ್ಯಾ| ಜೋಸೆಫ್ ಭವಿಷ್ಯ ನಿಂತಿದೆ. 

 ಒಂದು ವೇಳೆ ಕೊಲಿಜಿಯಂ ಮತ್ತೂಮ್ಮೆ ನ್ಯಾ| ಜೋಸೆಫ್ ಹೆಸರನ್ನು ಶಿಫಾರಸು ಮಾಡಿದರೆ ಆಗ ಸರಕಾರ ಅಂಗೀಕರಿಸಲೇಬೇಕಾಗುತ್ತದೆ. ನೇಮಕಾತಿಗೆ ಕಾಲಮಿತಿ ಇಲ್ಲದಿ ರುವುದರಿಂದ ಸರಕಾರ ವಿಳಂಬ ಧೋರಣೆ ಅನುಸರಿಸಬಹುದು. ಈಗಾಗಲೇ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ರಾಶಿ ಬಿದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಂಗ ಮತ್ತು ಸರಕಾರ ಹೀಗೆ ಪರಸ್ಪರರ ಕಾಲೆಳೆಯಲು ಪ್ರಯತ್ನಿಸುತ್ತಿರುವುದರಿಂದ ನ್ಯಾಯಾಂಗದ ಮೇಲೆ ಜನರಿಟ್ಟಿರುವ ಭರವಸೆಗೆ ಧಕ್ಕೆಯಾಗುವ ಸಾಧ್ಯತೆಯಿದೆ.

ಹೀಗಾಗಿ ಆದಷ್ಟು ತ್ವರಿತವಾಗಿ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆ.  ಕೊಲಿಜಿಯಂ ವ್ಯವಸ್ಥೆಯೇ ಬಗ್ಗೆಯೇ ಎನ್‌ಡಿಎ ಸರಕಾರಕ್ಕೆ ಆಕ್ಷೇಪಗಳಿವೆ. ಇದಕ್ಕಿಂತ ಉತ್ತಮವಾದ ಸಾಂಸ್ಥಿಕ ವ್ಯವಸ್ಥೆಯೊಂದು ನೇಮಕಾತಿಗೆ ಅಗತ್ಯ ಎಂದು ಎನ್‌ಡಿಎ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ಆದರೆ ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿಗಳನ್ನೊಳಗೊಂಡಿರುವ ಕೊಲಿಜಿಯಂ ವ್ಯವಸ್ಥೆಯೇ ಅತ್ಯುತ್ತಮ ಎಂದು ಹೇಳುತ್ತಿದೆ. ಕೇಂದ್ರ ಮತ್ತು ಸುಪ್ರೀಂ ಕೋರ್ಟಿನ ನಡುವಿನ ತಿಕ್ಕಾಟದ ಮೂಲವೇ ಇದು. ನ್ಯಾಯಮೂರ್ತಿಗಳ ನೇಮಕಾತಿಗಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚನೆಯಾಗಬೇಕೆನ್ನುವುದು ಸರಕಾರದ ಅಪೇಕ್ಷೆಯಾಗಿದೆ. ಇದಕ್ಕಾಗಿ 2014ರಲ್ಲೇ ಸಂವಿಧಾನ ಮತ್ತು ಕರಡು ಕಾಯಿದೆಯನ್ನು ರಚಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಇದನ್ನು ಅಸಂವಿಧಾನಿಕ ಎಂದು ಹೇಳಿ ರದ್ದುಪಡಿಸಿ ಕೊಲಿಜಿಯಂ ವ್ಯವಸ್ಥೆಯನ್ನು ಮುಂದುವರಿಸಿದೆ. 

Advertisement

  ನ್ಯಾಯಮೂರ್ತಿಗಳ ನೇಮಕಾತಿ ಪಾರದರ್ಶಕವೂ ರಾಜಕೀಯ ರಹಿತವೂ ಆಗಿರಬೇಕು. ಪ್ರಸ್ತುತ ಕೊಲಿಜಿಯಂ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಇದೆ. ಈ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗೂ ನೇಮಕಾತಿಯಲ್ಲಿ ಸೀಮಿತ ಅಧಿಕಾರವಷ್ಟೇ ನೀಡಲಾಗಿದೆ. ಹೀಗಾಗಿ ಇದಕ್ಕಿಂತಲೂ ಉತ್ತಮವಾದ ಸಾಂವಿಧಾನಿಕ ವ್ಯವಸ್ಥೆಯೊಂದನ್ನು ತರುವುದು ಅಪೇಕ್ಷಣೀಯ. 

Advertisement

Udayavani is now on Telegram. Click here to join our channel and stay updated with the latest news.

Next