ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ದಲಿತರೆಡೆ, ಕಾಂಗ್ರೆಸ್ ಶೋಷಿತರೆಡೆ ಗಮನಹರಿಸಿದರೆ ಜೆಡಿಎಸ್ ಮಹಿಳೆಯರ ಬಗ್ಗೆ ಗಮನ ಕೇಂದ್ರೀಕರಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲು ಕುರಿತು ರೂಪಿಸಿದ್ದ ವಿಧೇಯಕ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಮಟ್ಟದಲ್ಲಿ ಮಹಿಳಾ ಸಮಾವೇಶ ಮತ್ತು ಜಿಲ್ಲಾ ಮಟ್ಟದಲ್ಲಿ ಮಹಿಳಾ ಆಂದೋಲನ ನಡೆಸಲು ತೀರ್ಮಾನಿಸಿದೆ.
ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲು ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಪಕ್ಷದ ಮೂಲಕ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಂಸತ್ ಮತ್ತು ವಿಧಾನಸಭೆಯಲ್ಲೂ ಮಹಿಳಾ ಮೀಸಲು ಜಾರಿಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಜು. 20ರಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಮಹಿಳಾ ಘಟಕದ ಸಮಾವೇಶ ನಡೆಸಲಾಗುವುದು. ಬಳಿಕ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಘಟಕದಿಂದ ಆಂದೋಲನ ಹಮ್ಮಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ತಾವು ಪ್ರಧಾನಿಯಾಗಿದ್ದಾಗ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು ನಿಗದಿಪಡಿಸುವ ವಿಧೇಯಕ ಸಿದ್ಧಪಡಿಸಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, ಅಷ್ಟರಲ್ಲಿ ಅಧಿಕಾರ ಕಳೆದುಕೊಂಡೆ. ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಅದನ್ನು ಜಾರಿಗೆ ತಂದಿಲ್ಲ.2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಮಹಿಳಾ ಮೀಸಲು ಬಗ್ಗೆ ಹೇಳುತ್ತಿದ್ದರು. ಇದೀಗ ಅವರು ಪ್ರಧಾನಿಯಾಗಿ ಮೂರು ವರ್ಷವಾಗಿದ್ದು, ಇನ್ನೂ ಮೀಸಲು ಕಾಯ್ದೆ ರೂಪಿಸಿಲ್ಲ. ಆದ್ದರಿಂದ ಜನಾಂದೋಲದ ಮೂಲಕ ಮಹಿಳಾ ಮೀಸಲು ಜಾರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
2-3 ದಿನಗಳಲ್ಲಿ ಘಟಕ ಪುನಾರಚನೆ ಪಟ್ಟಿ: ಪಕ್ಷದ ಎಲ್ಲಾ ಘಟಕಗಳನ್ನು ಪುನಾರಚನೆ ಮಾಡಲಾಗುತ್ತಿದ್ದು, ನಿಗದಿಯಂತೆ ಜುಲೈ 9ರಂದು ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಭವಿಸಿರುವ ಕೋಮು ಸಂಘರ್ಷದ ವಾತಾವರಣದಿಂದಾಗಿ ಪಕ್ಷದ ಕಾರ್ಯಾಧ್ಯಕ್ಷ ಫಾರೂಕ್ ಅವರು ಅಲ್ಲಿಗೆ ತೆರಲಿದ್ದು, ಸಮಯಾವಕಾಶ ಕೇಳಿದ್ದಾರೆ. ಅವರು ಮಂಗಳೂರಿನಿಂದ ಬಂದ ಬಳಿಕ ಇನ್ನು 2-3 ದಿನಗಳಲ್ಲಿ ಘಟಕಗಳನ್ನು ಪುನಾರಚಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.