ಮೈಸೂರು: ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳ ಅಭಿವೃದ್ಧಿಯ ಉದ್ದೇಶದಿಂದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಪಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಮೈಸೂರಿನ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಎಎಚ್‌ಇಆರ್) ಮತ್ತು ಪಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥರು ಪರಸ್ಪರ ಮಾಸ್ಟರ್ ರಿಸರ್ಚ್ ಅಗ್ರಿಮೆಂಟ್‌ಗೆ ಸಹಿ ಹಾಕಿದರು.
ಇದೇ ವೇಳೆ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ. ಸುರೇಶ್ ಮಾತನಾಡಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು, ಆರೋಗ್ಯ ಮತ್ತು ಸಂಶೋಧನೆ ಕ್ಷೇತ್ರಕ್ಕೆ ಸಂಬಂಧಿಸಿದ 63 ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಅಂಗ ಸಂಸ್ಥೆಗಳನ್ನು ಒಳಗೊಂಡಿದೆ.
ಇವುಗಳ ಶೈಕ್ಷಣಿಕ ಮತ್ತು ಸಂಶೋಧನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಪಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪನಿಯೊಂದಿಗೆ ಮಾಸ್ಟರ್ ರಿಸರ್ಚ್ ಅಗ್ರಿಮೆಂಟ್‌ಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದರು. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ನಾನಾ ಸಂಸ್ಥೆಗಳನ್ನು ಒಳಗೊಂಡ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಈ ಒಪ್ಪಂದಕ್ಕೆ ಒಳಪಟ್ಟಿದೆ.
ಜೆಎಸ್‌ಎಸ್ ಎಎಚ್‌ಇಆರ್ ಸಂಸ್ಥೆಯು ಪಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್‌ನೊಂದಿಗೆ 2014 ರಿಂದಲೇ 1.2 ಕೋಟಿ ರೂ.ಗಳ 12 ವಿಷಯಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಪ್ಪಂದಗಳಿಂದ ಉಭಯ ಸಂಸ್ಥೆಗಳ ವೈವಿದ್ಯಮಯ ಕ್ಷೇತ್ರಗಳ ಸಾಮರ್ಥ್ಯ ಹೆಚ್ಚಾಗುತ್ತದೆ. ಹೊಸ ಒಪ್ಪಂದವು ಎರಡೂ ಸಂಸ್ಥೆಗಳಲ್ಲಿನ ಎಲ್ಲಾ ಸಹ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ. ಮಂಜುನಾಥ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಪಿಲಿಪ್ಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್‌ನ ಡಾ. ಕುಮಾರ ಸಂಜಯ, ಜಗದೀಶ್ ಪದ್ಮಾವತಿ, ಶ್ರುತಿನ್ ಉಲ್ಮಾನ್, ಜೆ. ವಿಜಯಾನಂದ, ಕುನಾಲ್ ಇತರರಿದ್ದರು.