ಕಲಬುರಗಿ: ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರ ಮೂರು ಕಾರಣಗಳಿಂದ ಗಮನ ಸೆಳೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅಭ್ಯರ್ಥಿಯಾಗಿರುವುದು, ರಾಜ್ಯ ಸರಕಾರ ವಿರುದ್ಧ ಪ್ರಖರವಾದ ಹೇಳಿಕೆಗಳಿಂದ ಟೀಕೆ ಮಾಡುತ್ತಿರುವುದು ಹಾಗೂ ಬಿಜೆಪಿ ಅಭ್ಯರ್ಥಿ ರೌಡಿ ಶೀಟರ್ ಎಂಬ ಕಾರಣಕ್ಕೆ ಚುನಾವಣೆಗೆ ಏಲ್ಲಿಲ್ಲದ ಮೆರುಗು ಬಂದಿದೆ.
ಕ್ಷೇತ್ರ ಕೈ ಬಿಟ್ಟು ಹೋಗಬಾರದು ಎಂದು ಕಾಂಗ್ರೆಸ್ ಚುನಾವಣೆ ಯನ್ನು ಒಂದು ಯುದ್ಧದ ರೀತಿಯಲ್ಲಿ ಪರಿಗಣಿಸಿದೆ. ಚುನಾ ವಣೆಯ ಎಲ್ಲ ಬೆಳವಣಿಗೆ ಹಾಗೂ ಸಂಘಟನಾತ್ಮಾಕ ಕ್ರಮಗಳ ಮೇಲೆ ಬಿಜೆಪಿ ವರಿಷ್ಠ ಮಂಡಳಿ ಅದರಲ್ಲೂ ಸ್ವಯಂ ಸೇವಕ ಸಂಘಟನೆಯವರು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬಿಜೆಪಿ ರೌಡಿಶೀಟರ್‌ಗೆ ಟಿಕೆಟ್ ಕೊಟ್ಟಿರುವುದನ್ನು ಕಾಂಗ್ರೆಸ್ ವ್ಯಾಪಕಗೊಳಿಸಿರುವ ಜತೆಗೆ ಮತದಾರರಲ್ಲಿ ರೌಡಿಶೀಟರ್‌ಗೆ ಟಿಕೆಟ್ ಕೊಟ್ಟಿರುವುದು ಎಷ್ಟು ಸಮಂಜಸ ಎಂಬುದಾಗಿ ಪ್ರಶ್ನಿಸು ತ್ತಿರುವುದನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ.
ಈಗಾಗಲೇ ಎರಡು ಸಲ ಗೆದ್ದಿರುವ ಪ್ರಿಯಾಂಕ್ 3ನೇ ಗೆಲುವಿಗಾಗಿ ಈಗ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇಯಾದ ಶೈಲಿಯಲ್ಲಿ ಪ್ರಚಾರ ದಲ್ಲಿ ಮಾಡುತ್ತಿದ್ದು, ಬಿಜೆಪಿ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ. ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಟಾಳ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರವಿಂದ ಚವ್ಹಾಣ, ಮುಖಂಡರಾದ ಶರಣಪ್ಪ, ಭೀಮಣ್ಣ ಸೀಬಾ, ಸಾಬಣ್ಣ ಡಿಗ್ಗಿ ಸಹಿತ ಇತರರು ಕಾಂಗ್ರೆಸ್ ಸೇರಿ ದ್ದರಿಂದ ಕಾಂಗ್ರೆಸ್‌ಗೆ ನೈತಿಕ ಬಲ ಹೆಚ್ಚಾಗಿದೆ. ಅರವಿಂದ ಚವ್ಹಾಣ ಕ್ಷೇತ್ರದಲ್ಲಿ ಕಳೆದೆರಡು ವರ್ಷ ದಿಂದ ಪಕ್ಷದ ಸಂಘಟನೆ ಮಾಡುತ್ತಾ ಬಂದಿದ್ದರು. ಆದರೆ ಅರವಿಂದ ಚವ್ಹಾಣ ಬದಲು ಮಣಿಕಂಠಗೆ ಟಿಕೆಟ್ ನೀಡಿದ್ದರಿಂದ ಸಹಜವಾಗಿ ಮುನಿಸಿಕೊಂಡು ಚವ್ಹಾಣ ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿಯ ಮಣಿಕಂಠ ಸಹ ಕಳೆದ ಒಂದು ವರ್ಷದಿಂದ ಬೇರುಮಟ್ಟದಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಾ ಬಂದಿರುವುದು, ಭಂಡ ಧೈರ್ಯ ಹೊಂದಿರುವುದೇ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ. ಬಿಜೆಪಿಯ ಕೆಲವು ಮುಖಂಡರು ಪಕ್ಷ ತ್ಯಜಿಸಿರಬಹುದು. ಆದರೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೈ ಬಿಟ್ಟಿಲ್ಲ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಒಟ್ಟಾರೆ 20-20 ಮ್ಯಾಚ್ ಎನ್ನುವ ರೀತಿಯಲ್ಲಿ ಚುನಾವಣ ಏರಿಳಿತ ಕಂಡು ಬರುತ್ತಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ಸುಭಾಷ ಚಂದ್ರ ರಾಠೊಡ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಸರಳ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಲಿಂಗಾಯತ ಹಾಗೂ ಕೋಲಿ ಸಮಾಜ ದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ ಮತಗಳು ಸಹ ಗಮ ನಾರ್ಹವಾಗಿದೆ. ಬಿಜೆಪಿ-ಕಾಂಗ್ರೆಸ್‌ನ ಸಮಬಲ ಹೋರಾಟ ನಡೆದಿದೆ.
~ ಹಣಮಂತರಾವ ಭೈರಾಮಡಗಿ