Advertisement

ಜಾಯ್‌ ಆಫ್ ಗಿವಿಂಗ್‌

06:00 AM Jul 03, 2018 | |

ಆಗೆಲ್ಲ ಸರ್ಕಾರಿ ಶಾಲೆಗೆ ಸೇರೋದಂದ್ರೆ ಮಕ್ಕಳ ಜಾತ್ರೆಯಲ್ಲಿ ನೀವೂ ಒಂದಾದ್ಹಂಗೆ. ಈಗಿನ ಚಿತ್ರಣ ಹಾಗಿಲ್ಲ. ಸರ್ಕಾರಿ ಶಾಲೆಗಳು ಭಣಗುಟ್ಟುತ್ತಿವೆ. ಎಷ್ಟೋ ಕಡೆಗಳಲ್ಲಿ ಬಾಗಿಲುಗಳನ್ನು ಮುಚ್ಚಿವೆ. ಇರುವ ಅಲ್ಪಸ್ವಲ್ಪ ಬಡ ಹುಡುಗರಿಗೆ ಪಾಠ ಮಾಡಲು ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿವೆ. ಒಂದು ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತು, ಬೇರೆ ಬೇರೆ ಉದ್ಯೋಗ ಹಿಡಿದವರಿಗೆ ಈ ದೃಶ್ಯಗಳು ಹೃದಯವನ್ನು ಆದ್ರìವಾಗುವಂತೆ ಮಾಡಿವೆ. ಹೇಗಾದರೂ ಮಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಕೆಲವರ ಛಲವೀಗ ಅಭಿಯಾನದಂತೆ ತೋರುತ್ತಿದೆ…    
ಬರೀಗಾಲ ಆಟಗಾರರ ಬರಗಾಲ ನೀಗಿತು…
ನೆರವು: ಆಟದ ಸಾಮಗ್ರಿ 


ಉತ್ತರ ಕರ್ನಾಟಕ ಭಾಗದ ಕುಗ್ರಾಮವೊಂದರ ಶಾಲೆಯಲ್ಲಿ ಮಕ್ಕಳು ರಾಜ್ಯಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆಯಾಗಿದ್ದರು. ಆ ಮಕ್ಕಳು ಬರಿಗಾಲಲ್ಲೇ ಓಡುತ್ತಿದ್ದರು. ನ್ಪೋರ್ಟ್ಸ್ಗೆಂದು ಪ್ರತ್ಯೇಕ ದಿರಿಸು ಇರಲಿಲ್ಲ. ಶಾಲಾ ಸಮವಸ್ತ್ರದಲ್ಲೇ ಓಡುತ್ತಿದ್ದರು. ಅದು ಹೋಗಲಿ, ಅವರಿಗೆ ಕ್ರೀಡಾಪಟುಗಳು ಆಡುವಾಗ ತೊಡುವ ದಿರಿಸಿಗೆ ಜೆರ್ಸಿ ಎಂದು ಕರೆಯುತ್ತಾರೆ ಅಂತಲೂ ಗೊತ್ತಿರಲಿಲ್ಲ. ಹೆಣ್ಮಕ್ಕಳು ಫ್ರಾಕು ತೊಟ್ಟು ಆಟದಲ್ಲಿ ಪಾಲ್ಗೊಳ್ಳುತ್ತಿದ್ದರು. ನನಗೋ ಗಾಬರಿ, ಫ್ರಾಕ್‌ನಲ್ಲಿ ಆಡುವಾಗ ಬಿದ್ದರೇನು ಗತಿ ಅಂತ. ಕಡೆಗೆ ನಾವೊಂದಷ್ಟು ಮಂದಿ ಸೇರಿ ಅಷ್ಟೂ ಮಕ್ಕಳಿಗೆ ಜೆರ್ಸಿ, ಶೂ ಮುಂತಾದ ಸಾಮಗ್ರಿಯನ್ನು ಕಳಿಸಿಕೊಟ್ಟೆವು.

Advertisement

   ಇವೆಲ್ಲಾ  ಶುರುವಾಗಿದ್ದು ಫೇಸ್‌ಬುಕ್‌ನಿಂದ. ಒಮ್ಮೆ ಶಿಕ್ಷಕಿಯೊಬ್ಬರು ಅವರ ಶಾಲೆಯ ಚಟುವಟಿಕೆಯೊಂದರ ವಿಡಿಯೋ ಪೋಸ್ಟ್‌ ಮಾಡಿದ್ದರು. ಅವರೊಂದಿಗೆ ಮಾತಾಡಿದಾಗ ಅವರ ಶಾಲೆಯಲ್ಲಿ ಆಟದ ಸಾಮಗ್ರಿ ಇಲ್ಲ ಎನ್ನುವ ಸಂಗತಿ ತಿಳಿಯಿತು. ತುಂಬಾ ಬೇಜಾರಾಯಿತು. ನನಗೆ ಆಟವಾಡುವ ಮಕ್ಕಳನ್ನು ಕಂಡರೆ ಏನೋ ಖುಷಿ. ಕೂಡಲೇ ಅವರ ಶಾಲೆಗೆ ಒಂದಷ್ಟು ಆಟದ ಸಾಮಗ್ರಿಯನ್ನು ಕಳಿಸಿಕೊಟ್ಟೆ. ಆ ಶಿಕ್ಷಕಿಗೆ ತುಂಬಾ ಖುಷಿಯಾಯಿತು. ಅವರಿಗೇ ಅಷ್ಟು ಖುಷಿಯಾಗಿರಬೇಕಾದರೆ ಇನ್ನು ಆಟವಾಡಿದ ಮಕ್ಕಳಿಗೆ ಇನ್ನೆಷ್ಟು ಖುಷಿಯಾಗಿರಬೇಡ? ಅದನ್ನು ನೆನೆದು ನನ್ನ ಮನಸ್ಸು ಸಂತಸದಿಂದ ತೇಲಾಡಿತ್ತು.

   ನನಗೆ ಗೊತ್ತಿದ್ದ ಹಾಗೆ ಅನೇಕರು, “ಸಹಾಯ ಮಾಡುವುದಿದ್ದರೆ ದೊಡ್ಡ ಮೊತ್ತ ಬೇಕು, ಒಂದು ತಂಡ ಇರಬೇಕು’ ಎಂದೆಲ್ಲಾ ತಿಳಿದು ಹಿಂದೇಟು ಹಾಕುತ್ತಾರೆ. ನಾವು ಮಾಡುತ್ತಿರುವ ಸಹಾಯ ಚಿಕ್ಕದಿರಲಿ, ದೊಡ್ಡದೇ ಇರಲಿ, ಸಹಾಯ ಮಾಡುವ ಮನಸ್ಸು ಎಲ್ಲಕ್ಕಿಂತ ದೊಡ್ಡದು. ಯಾವುದೇ ಸಹಾಯವೂ ಚಿಕ್ಕದಲ್ಲ. ನೂರರಲ್ಲಿ ಹತ್ತು ಮಕ್ಕಳಾದರೂ ಆಟವಾಡಬಹುದೆಂಬ ಆಸೆಯಿಂದ ಶಾಲೆಗೆ ಬಂದರೆ ನನ್ನ ಉದ್ದೇಶ ಸಾರ್ಥಕ. ಮಕ್ಕಳ ಹಾಜರಾತಿ ಹೆಚ್ಚಿಸಲು ಸರ್ಕಾರ ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಮಕ್ಕಳನ್ನು ಅವರ ಮನೆಗೆ ಹೋಗಿ ಬಲವಂತವಾಗಿ ಕರೆದುಕೊಂಡು ಬರುವುದರಿಂದ ತಾತ್ಕಾಲಿಕವಾಗಿ ಹಾಜರಾತಿ ಸಮಸ್ಯೆ ಸರಿ ಹೋಗಬಹುದು. ಆದರೆ, ಮಕ್ಕಳು ಶಾಲೆಗೆ ಬರುವಂತೆ ಮಾಡಲು ಆಟಕ್ಕಿಂತ ಉತ್ತಮ ವಿಧಾನ ಯಾವುದಿದೆ ಹೇಳಿ? ಕೆಲವೇ ಶಾಲೆಗಳಿಂದ ಶುರುವಾದ ನಮ್ಮ ಪಯಣ ಈಗಲೂ ಮುಂದುವರಿಯುತ್ತಿದೆ. ಅನೇಕರು ನನ್ನೊಂದಿಗೆ ಕೈಜೋಡಿಸಿದ್ದಾರೆ. ನಾವೊಂದಷ್ಟು ಮಂದಿ ಸಾಫ್ಟ್ವೇರ್‌ ಉದ್ಯೋಗಿಗಳು ಸೇರಿಕೊಂಡು “ಬಿಯಾಂಡ್‌ ಬಿಸಿನೆಸ್‌’ ಎಂಬ ತಂಡವೊಂದನ್ನು ಕಟ್ಟಿಕೊಂಡಿದ್ದೇವೆ. ಆಟಿಕೆಗಳ ಹೊರತಾಗಿಯೂ ಅನೇಕ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ನೆರವು ನೀಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಶಿಕ್ಷಕರೊಬ್ಬರು ಫೋನ್‌ ಮಾಡಿದ್ದರು: ಅವರ ಶಾಲೆಯಿಂದ ಖಾಸಗಿ ಶಾಲೆಗಳಿಗೆ ಹೋದ ವಿದ್ಯಾರ್ಥಿಗಳೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಅಂತ. ಸರ್ಕಾರಿ ಶಾಲೆಗಳನ್ನು ಪ್ರೈವೇಟ್‌ ಸ್ಕೂಲುಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಕೊಂಡೊಯ್ಯಬೇಕೆನ್ನುವುದು ನಮ್ಮಾಸೆ.
– ರಾಘವೇಂದ್ರ ಜೋಶಿ

ವಿದೇಶ ತೊರೆಯಲು ಟೋಪಿಯೇ “ಪ್ರೇರಣೆ’
ನೆರವು: ಶಾಲೆಗಳಿಗೆ ತರಬೇತುಗೊಂಡ ಶಿಕ್ಷಕರನ್ನು ಒದಗಿಸುವುದು.


ಫಾರಿನ್ನಿನಿಂದ ವರ್ಷಕ್ಕೊಮ್ಮೆ ಮನೆಗೆ ಬರುತ್ತಿದ್ದೆ. ಹಾಗೆ ಒಂದು ಸಲ ಬರುವಾಗ ಬೆಂಗಳೂರಿನಿಂದ ನಮ್ಮೂರಿಗೆ ಬಸ್‌ ಹಿಡಿದೆ. ಮಾರ್ಗ ಮಧ್ಯ ಡ್ರೈವರ್‌ ತಿಂಡಿಗೆ ಅಂತ ಬಸ್‌ ನಿಲ್ಲಿಸಿದ. ಅಲ್ಲೊಬ್ಬ ಹುಡುಗ ಟೋಪಿ ಮಾರುತ್ತಿದ್ದ. ಬೆಳಗ್ಗಿನಿಂದ ಸಂಜೆವರೆಗೆ ಬಿಸಿಲಿನಲ್ಲಿ ನಿಂತರೂ ಆತನ ಕೈಗೆ ಸಿಗುತ್ತಿದ್ದ ಲಾಭ 5 ರೂ. “ಶಾಲೆಗೆ ಹೋಗುತ್ತಿದ್ದೀಯಾ ತಾನೇ?’ ಅಂತ ಕೇಳಿದೆ. “ಹೂnಂ, ರಜಾ ದಿನಗಳಲ್ಲಿ ಮಾತ್ರ ಟೋಪಿ ಮಾರಿ¤àನಿ’ ಅಂದ. “ಸರ್ಕಾರಿ ಶಾಲೇನಾ?’ ಅಂತ ಕೇಳಿದೆ. “ಇಲ್ಲಾ ಸರ್‌, ಖಾಸಗಿ ಶಾಲೆ’ ಅಂದ. ಆ ಹುಡುಗನ ವೇಷಭೂಷಣ ನೋಡಿ ಅವನನ್ನು ಸರ್ಕಾರಿ ಶಾಲೆಯವ ಎಂದುಕೊಂಡ ನನ್ನ ಸಂಕುಚಿತ ಮನಃಸ್ಥಿತಿ ಕಂಡು ನನಗೇ ಬೇಜಾರಾಯ್ತು. ಆಮೇಲೆ ವಿಚಾರ ಮಾಡಿದೆ. ಅವನ ಕುಟುಂಬ ಕಷ್ಟಪಟ್ಟು, ದುಡಿದದ್ದನ್ನೆಲ್ಲಾ ಒಟ್ಟು ಸೇರಿಸಿ ಒಳ್ಳೆಯ ಶಾಲೆ ಅಂತ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಒಳ್ಳೆಯ ಶಿಕ್ಷಣ ದೊರೆಯುತ್ತೆ ಅಂತ ಏನು ಗ್ಯಾರೆಂಟಿ? ಸರ್ಕಾರಿ ಶಾಲೆಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕು, ಎಲ್ಲಾ ವರ್ಗದವರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಹೆಮ್ಮೆ ಪಡಬೇಕು. ಅಂಥಾ ವಾತಾವರಣ ನಿರ್ಮಿಸಬೇಕೆಂಬ ವಿಚಾರ ಆಗಲೇ ಮೊಳಕೆಯೊಡೆದಿದ್ದು. 

   ಇದು ನಡೆದಿದ್ದು ದಶಕಗಳ ಹಿಂದೆ. ನಾನೀಗ ವಿದೇಶದಲ್ಲಿಲ್ಲ. “ಶಿಕ್ಷಣ’ ಎಂಬ ಎನ್‌ಜಿಒ ನಡೆಸುತ್ತಿದ್ದೇನೆ. ನಮ್ಮ ಕೆಲಸದ ರೂಪುರೇಷೆಯನ್ನು ಆಗಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಗೆ ಕಳಿಸಿಕೊಟ್ಟಿದ್ದೆವು. ಅವರು, ಸಿಟಿಯಲ್ಲಿರೋ ಶಾಲೆಗಳಿಗೇ ಯಾಕೆ ಒತ್ತು ಕೊಡುತ್ತೀರಿ, ಹಳ್ಳಿಗಳ ಕಡೆ ನಡೆಯಿರಿ ಎಂದು ಮಾರ್ಗದರ್ಶನ ಮಾಡಿದ್ದರು. ಈಗ ಧಾರವಾಡ ಜಿಲ್ಲೆಯೊಂದರಲ್ಲೇ ಸುಮಾರು 650 ಶಾಲೆಗಳನ್ನು ದತ್ತು ಪಡೆದಿದ್ದೇವೆ. ಅಲ್ಲಿ ಅನೇಕ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಅಗತ್ಯ ಸೌಕರ್ಯಗಳತ್ತ ಗಮನ ಹರಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್‌ ಆಗಿಸುವ ಉದ್ದೇಶದಿಂದ “ಪ್ರೇರಣಾ’ ಎನ್ನುವ ಸ್ಮಾರ್ಟ್‌ಫೋನ್‌ ಆ್ಯಪ್‌ ಅನ್ನೂ ತಯಾರಿಸಿಕೊಟ್ಟಿದ್ದೇವೆ. ಈಗ ಆ ಪ್ರಾಜೆಕ್ಟ್ ಅನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನಮ್ಮ ತಂಡ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಸುಮಾರು 48,000ಕ್ಕೂ ಹೆಚ್ಚು ಕನ್ನಡ ಶಾಲೆಗಳಲ್ಲಿ “ಪ್ರೇರಣಾ’ ಆ್ಯಪ್‌ ಕಾರ್ಯ ನಿರ್ವಹಿಸುತ್ತಿದೆ.
– ಪ್ರಸನ್ನ, ಸ್ಥಾಪಕ ಸದಸ್ಯ, “ಶಿಕ್ಷಣ’ ಎನ್‌.ಜಿ.ಓ
ಜಾಲತಾಣ - sikshana.org

Advertisement

ಸರ್ಕಾರಿ ಶಾಲೆ ಏಳ್ಗೆಗೆ  “ಅವಿರತ’ ಪ್ರಯತ್ನ
ನೆರವು: ನೋಟ್‌ಬುಕ್‌ ವಿತರಣೆ


ನಾನೂ ಸರ್ಕಾರಿ ಶಾಲೆಯಲ್ಲಿಯೇ ಓದಿದವನಾಗಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಯಾವ್ಯಾವ ಸಮಸ್ಯೆಗಳಿಂದ ತೊಂದರೆಗೀಡಾಗುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ, ಪ್ರತ್ಯೇಕ ಅಧ್ಯಯನದ ಅಗತ್ಯ ಬೀಳಲಿಲ್ಲ. ಸರ್ಕಾರಿ ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕಗಳಂಥ ತುಂಬಾ ಬೇಸಿಕ್‌ ಅಗತ್ಯಗಳನ್ನು ಪೂರೈಸಿದರೂ ಸಾಕು. ಆ ಮಕ್ಕಳ ಹೆತ್ತವರಿಗೆ ದೊಡ್ಡ ಹೊರೆ ಕಮ್ಮಿಯಾಗುತ್ತೆ. ಅದರ ಹೊರತಾಗಿ ಲ್ಯಾಬ್‌, ಗ್ರಂಥಾಲಯ ಮುಂತಾದ ಸಹಾಯವನ್ನೂ ಅವಿರತ ಮಾಡುತ್ತಿದೆ. 

  “ಅವಿರತ’ದ ಕಾರ್ಯವ್ಯಾಪ್ತಿ ಹೆಚ್ಚುತ್ತಿದ್ದಂತೆ ಎಲ್ಲಾ ಕಡೆಗಳಿಗೂ ಸಹಾಯಹಸ್ತ ಚಾಚುವುದು ಕಷ್ಟವಾಗುತ್ತಾ ಹೋಯಿತು. ಆ ಸಂದರ್ಭದಲ್ಲೇ ಹುಟ್ಟಿದ್ದು “ನಮ್ಮ ಶಾಲೆ ನಮ್ಮ ಹೆಮ್ಮೆ’ ಎಂಬ ಹೊಸ ಪ್ಲಾನ್‌. ಯಾವುದೇ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಮುಂದೆ ಬಂದರೆ ಅವಿರತದಿಂದ ಅಗತ್ಯ ನೆರವನ್ನು ನೀಡುತ್ತೇವೆ. ಅದನ್ನು ಕಾರ್ಯರೂಪಕ್ಕೆ ತರುವ ಗುರುತರ ಜವಾಬ್ದಾರಿ ಆ ಹಳೇ ವಿದ್ಯಾರ್ಥಿಗಳ ಮೇಲೆಯೇ ಇರುತ್ತೆ. ಎಷ್ಟೋ ಸಲ ಹೇಗೋ ಅತ್ಯುತ್ಸಾಹದಲ್ಲಿ ಶುರುಮಾಡಿಬಿಡುತ್ತಾರೆ. ಆದರೆ, ಅರ್ಧಕ್ಕೇ ನಿಲ್ಲಿಸಿ ಕೈತೊಳೆದುಕೊಂಡುಬಿಡುತ್ತಾರೆ. ಹೀಗಾಗಿ ಕನಿಷ್ಠ 5 ವರ್ಷ ಈ ಕೆಲಸದಲ್ಲಿ ತೊಡಗಿಕೊಳ್ಳುವವರಿಗೆ ಮಾತ್ರವೇ ನಾವು ನೆರವು ನೀಡುತ್ತಿದ್ದೇವೆ.

   “ಅವಿರತ’ದ ಸಹಾಯ ಪಡೆದು ಓದಿದವರಲ್ಲಿ ಅನೇಕರು ಎಂಜಿನಿಯರಿಂಗ್‌, ಮೆಡಿಕಲ್‌ ಓದುತ್ತಿದ್ದಾರೆ, ರ್‍ಯಾಂಕ್‌ ಪಡೆದುಕೊಂಡವರಿದ್ದಾರೆ. ಒಬ್ಬ ಬಡ ವಿದ್ಯಾರ್ಥಿ ಈಗ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದಾನೆ. ಆತ ಈಗ ಅವಿರತ ತಂಡದ ಸಕ್ರಿಯ ಸದಸ್ಯ. ಪಡೆದದ್ದನ್ನು ಸಮಾಜಕ್ಕೆ ಮರಳಿ ಕೊಡುವ ಇಂಥವರಿಂದಲೇ ಅವಿರತ ನಡೆಯುತ್ತಿದೆ. ಅದನ್ನೆಲ್ಲಾ ನೋಡಿದಾಗ ಖುಷಿಯಾಗುತ್ತೆ. ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಬರುತ್ತೆ. 

ಜಾಲತಾಣ- www.aviratha.org
– ಸತೀಶ್‌, ಸ್ಥಾಪಕ ಸದಸ್ಯ, ಅವಿರತ

ಆ ಪುಟ್ಟ ಸಂತಸದ ಹೊಳಪು ನೋಡಿದ್ದೀರಾ?
ನೆರವು: ಸ್ಟೇಷನರಿ ವಸ್ತುಗಳು


ನಮ್ಮ ತಂದೆ, ನಾವು ಕಷ್ಟದಲ್ಲಿದ್ದಾಗಲೂ, ಇತರರು ಸಹಾಯ ಕೇಳಿ ಬಂದಾಗ ಅವರಿಗೆ ಅಗತ್ಯ ನೆರವು ನೀಡುತ್ತಿದ್ದರು. ಚಿಕ್ಕಂದಿನಿಂದಲೂ ಇದನ್ನು ನೋಡಿಕೊಂಡು ಬಂದಿದ್ದೇನೆ. ಅಮ್ಮ ನಮಗೆಲ್ಲಾ ಅನ್ನವಿಕ್ಕಿ ತಾನು ಮಾತ್ರ ಗುಟುಕು ನೀರಿನಲ್ಲಿ ದಿನ ತಳ್ಳುತ್ತಿದ್ದುದನ್ನೂ ನೋಡಿದ್ದೀನಿ. ಹೀಗಾಗಿ, ಕಷ್ಟ ಎಂದರೆ ಏನೆಂದು ನನಗೆ ಚೆನ್ನಾಗಿ ಗೊತ್ತು. ನಾನು ಕೂಡಾ ಅಪ್ಪನಂತೆಯೇ. ಈಗ ಅಪ್ಪ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಏನೋ..?! ಕಷ್ಟದಲ್ಲಿ ಓದುವ ಸರ್ಕಾರಿ ಶಾಲಾ ಮಕ್ಕಳನ್ನು ಕಂಡರೆ ಜೀವ ಚುರುಗುಟ್ಟುತ್ತೆ. ಸಿಟಿಯಲ್ಲಿ ವಾಸಿಸುತ್ತಿರುವವರಿಗೆ ಗ್ರಾಮೀಣ ಪ್ರದೇಶಗಳ ಮಕ್ಕಳ ಚಿಕ್ಕಪುಟ್ಟ ಸಂತಸಗಳ ಕುರಿತು ಗೊತ್ತೇ ಇರೋದಿಲ್ಲ. ಆ ಮಕ್ಕಳ ಬಳಿ ಪೆನ್ಸಿಲ್ಲು, ಪೆನ್ನು, ಪುಸ್ತಕಗಳೇ ಇರೋದಿಲ್ಲ. ಅದಕ್ಕೇ ಅವರಿಗೆ ಸ್ಟೇಷನರಿ ವಸ್ತುಗಳನ್ನು ಒದಗಿಸುವ ಕೆಲಸವನ್ನು ಮೂರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಅನೇಕರು ನನಗೆ ಜೊತೆಯಾಗಿದ್ದಾರೆ. ಇದಲ್ಲದೆ ಹಲವು ಎನ್‌ಜಿಒಗಳ ಜೊತೆ ಒಡನಾಟ ಇಟ್ಟುಕೊಂಡಿರುವುದರಿಂದ ಅವರಿಗೆ ಯಾವುದಾದರೂ ಮಗುವಿಗೆ ನೆರವು ಬೇಕೆನಿಸಿದಾಗ ನನ್ನನ್ನು ಸಂಪರ್ಕಿಸುತ್ತಾರೆ. ಆ ನೆರವು ವೈದ್ಯಕೀಯ ಆಗಿರಬಹುದು, ಕೌನ್ಸೆಲಿಂಗ್‌ ಆಗಿರಬಹುದು, ಹಣದ ನೆರವಾಗಿರಬಹುದು. ನಾನು ನನಗೆ ಪರಿಚಯವಿರುವವರೊಂದಿಗೆ ಆ ವಿಚಾರವನ್ನು ಹಂಚಿಕೊಳ್ಳುತ್ತೇನೆ. ಆಸಕ್ತರು ನನ್ನನ್ನು ಸಂಪರ್ಕಿಸುತ್ತಾರೆ.

  ಮಕ್ಕಳನ್ನು ದೇವರು ಎನ್ನುತ್ತಾರೆ. ನಗುವ ಮಕ್ಕಳನ್ನು ಮುದ್ದಾಡಲು ಹಲವರು ಮುಂದೋಡಿ ಬರುತ್ತಾರೆ. ಅದೇ, ಮಕ್ಕಳು ವಿಧಿಯಾಟಕ್ಕೆ ಸಿಕ್ಕು ಕಷ್ಟದಲ್ಲಿದ್ದರೆ ಯಾರೂ ಬರೋದಿಲ್ಲ ಅನ್ನೋದು ಕಹಿ ಸತ್ಯ. ಒಂದು ಸಲ ಮಕ್ಕಳನ್ನು ದತ್ತು ನೀಡುವ ಸಂಸ್ಥೆಯೊಂದರಿಂದ ಕಾಲ್‌ ಬಂತು. ಹೋದೆ. ಅನಾಥರಾಗಿದ್ದ ಇಬ್ಬರು ಪುಟ್ಟ ಅಣ್ಣ ತಂಗಿಯಿಬ್ಬರನ್ನು ಕೌನ್ಸೆಲಿಂಗ್‌ ಮಾಡಬೇಕಿತ್ತು. ಆ ಮಕ್ಕಳು ತಮ್ಮ ಚೀಲದಲ್ಲಿ ಎರಡು ಫೋಟೋಗಳನ್ನು ಇಟ್ಟುಕೊಂಡು ಓಡಾಡುತ್ತಿದರಂತೆ. ಅದರಲ್ಲೊಂದು, ನೇಣು ಬಿಗಿದ ಸ್ಥಿತಿಯಲ್ಲಿರುವ ತಂದೆಯ ಫೋಟೋ. ಇನ್ನೊಂದು, ತಂದೆಯಿಂದಲೇ ಕೊಲೆಯಾಗಿದ್ದ ತಾಯಿಯ ಫೋಟೋ. ಸಿಕ್ಕ ಸಿಕ್ಕವರಿಗೆಲ್ಲಾ ಅವೆರಡು ಫೋಟೋ ತೋರಿಸಿಕೊಂಡು ತಮ್ಮನ್ನು ದತ್ತು ತೆಗೆದುಕೊಳ್ಳುವಂತೆ ಆ ಇಬ್ಬರು ಮಕ್ಕಳು ಗೋಗರೆಯುತ್ತಿದ್ದವಂತೆ. ಪ್ರಪಂಚ ಎಷ್ಟು ಕ್ರೂರ ಅನ್ನಿಸಿತು. ಸಹಾಯ ಮಾಡುವ ಮನಸ್ಸಿದ್ದರೆ, ಒಂದೆರಡು ಒಳ್ಳೆಯ ಮಾತಾಡುವುದರ ಮೂಲಕವೂ ನೆರವಾಗಬಹುದು.

– ರೂಪಾ ಸತೀಶ್‌ ಎಚ್‌.ಆರ್‌.
www.facebook.com/roopa.satish.56

ಆಗದು ಎಂದು ಕೈಕಟ್ಟಿ ಕುಳಿತರೆ…
ನೆರವು: ಸರ್ಕಾರಿ ಶಾಲೆಗೆ ಹೋಗಿ ಪಾಠ


ನಾನು ವಾರಕ್ಕೊಂದು ದಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಠ ಮಾಡಲು ಹೋಗುತ್ತೇನೆ. ಮುಂಚಿನಿಂದಲೂ ಮಕ್ಕಳನ್ನು ಕಂಡರೆ ತುಂಬಾ ಇಷ್ಟ. ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ವಲ್ಪ ಪುಶ್‌ ಕೊಟ್ಟರೆ ಸಾಕು, ಅವರೂ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಮಕ್ಕಳಂತೆಯೇ ಚುರುಕುತನವನ್ನು ಮೈಗೂಡಿಸಿಕೊಳ್ಳಬಲ್ಲರು. ಇದು ನನಗೆ ಪ್ರತ್ಯಕ್ಷವಾಗಿ ತಿಳಿದದ್ದು ನಾನು ಸರ್ಕಾರಿ ಶಾಲೆಗೆ ಪಾಠ ಮಾಡಲು ಹೋದಾಗಲೇ. ನಾನು ಯೂತ್‌ ಫಾರ್‌ ಸೇವಾ ಎನ್ನುವ ಎನ್‌.ಜಿ.ಓ ತಂಡದ ಸದಸ್ಯ. ಅವರು ಇಂತಿಷ್ಟು ಸದಸ್ಯರನ್ನು ಒಟ್ಟು ಮಾಡಿ ಅವರ ಮನೆ ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ವ್ಯವಸ್ಥೆ ರೂಪಿಸುತ್ತಾರೆ. ಮಕ್ಕಳಿಗೆ ಕಂಪ್ಯೂಟರ್‌ ಹೇಳಿಕೊಡುವಾಗ ಅವರ ಗ್ರಹಿಕೆಯ ವೇಗ ಕಂಡು ತಬ್ಬಿಬ್ಟಾಗಿಬಿಟ್ಟಿದ್ದೆ. ಒಮ್ಮೆ ಹೇಳಿಕೊಟ್ಟರೆ ಸಾಕು, ಮಿಕ್ಕಿದ್ದೆಲ್ಲವನ್ನೂ ನಾನು ಹೇಳಿಕೊಡುವ ಮುನ್ನವೇ ಅವರು ತಾವಾಗಿಯೇ ಟ್ರಯಲ್‌ ಯಂಡ್ ಎರರ್‌ ಮೂಲಕ ಪತ್ತೆ ಹಚ್ಚಿ ನನಗೆ ತೋರಿಸಿಕೊಡುತ್ತಿದ್ದರು.

  ಪ್ರಶಾಂತ ಅನ್ನುವ ಹುಡುಗನಂತೂ ನನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದ. ಮಜಾ ಅಂದರೆ ಅವನನ್ನು ಕಂಡರೆ ಯಾವ ಶಿಕ್ಷಕರಿಗೂ ಆಗುತ್ತಿರಲಿಲ್ಲ. ಎಲ್ಲರೂ ಅವನ ಮೇಲೆ ದೂರುಗಳ ಸರಮಾಲೆಯನ್ನೇ ಹೊರಿಸುತ್ತಿದ್ದರು. ನಾನು ಬಂದಾಗ ಮಾತ್ರ ನನ್ನನ್ನು ಇತರ ತರಗತಿಗಳಿಗೆ ಕರೆದೊಯ್ಯುವುದು, ಏನಾದರೂ ವಸ್ತು ಬೇಕಾದರೆ ತಂದುಕೊಡುವುದು, ಟೀಚರ್‌ಗಳನ್ನು ಕರೆದುಕೊಂಡು ಬರೋದು ಮುಂತಾದ ಸಹಾಯ ಮಾಡಲು ಮುಂದೋಡುತ್ತಿದ್ದ. 

   ನಾನು ಬೇರೆ ಕಂಪನಿ ಸೇರಿದಾಗ, ಬೇರೆಡೆ ಮನೆ ಮಾಡಿದ್ದರಿಂದ, ಪಾಠ ಹೇಳಿಕೊಡುತ್ತಿದ್ದ ಶಾಲೆಯನ್ನೂ ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಅನೇಕ ಮಂದಿ ವಿದ್ಯಾರ್ಥಿಗಳು ಪ್ರತಿ ಶನಿವಾರ ನಾನು ಬರುವುದನ್ನೇ ಎದುರು ನೋಡುತ್ತಿದ್ದರು. ಅವರೆಲ್ಲರಿಗೂ ತುಂಬಾ ಬೇಜಾರಾಗಿತ್ತು. ಅದರಲ್ಲೂ ಆ ಶಾಲೆಯಿಂದ ಹೊರಗೆ ಬರುವ ದಿನ ಪ್ರಶಾಂತನನ್ನು ಸಮಾಧಾನಪಡಿಸುವುದೇ ಕಷ್ಟವಾಗಿತ್ತು. ಅವನನ್ನು ಓಲೈಸಿ ಮನೆ ತನಕ ಡ್ರಾಪ್‌ ಮಾಡಬೇಕಾದ ಪರಿಸ್ಥಿತಿಯೂ ಬಂತು. 

  ನನ್ನಂತೆಯೇ ಬಿಡುವಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ತಮ್ಮ ಕೈಲಾದ ನೆರವು ನೀಡುವವರು ಅನೇಕ ಮಂದಿಯಿದ್ದಾರೆ, ಅನೇಕ ಸಂಘಟನೆಗಳೂ ಇವೆ. ಆಸಕ್ತರು ಸೇರಬಹುದು. ಅಭಿವೃದ್ಧಿ ಆಗುತ್ತಿಲ್ಲ, ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಾ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಕ್ಕಿಂತ ಸರ್ಕಾರಿ ಶಾಲೆಯ ಮಕ್ಕಳಿಗೆ ಕೈಲಾದ ಸಹಾಯ ಮಾಡುವುದು ಎಷ್ಟೋ ಮಿಗಿಲು. ಮಕ್ಕಳೇ ದೇಶದ ಭವಿಷ್ಯ ಅಲ್ಲವೇ? 

– ಪ್ರದೀಪ್‌ ಶಿರಿಯ, ಸಾಫ್ಟ್ವೇರ್‌ ಎಂಜಿನಿಯರ್‌

ನಿರೂಪಣೆ: ಹರ್ಷವರ್ಧನ್‌ ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next