Advertisement

ಸಿದ್ದೇಶ್ವರ ಜಾತ್ರೋತ್ಸವದಲ್ಲಿ ರಂಜಿಸಿದ ಜಂಗಿ ನಿಕಾಲಿ ಕುಸ್ತಿ

11:27 AM Jan 19, 2019 | |

ವಿಜಯಪುರ: ನಗರ ದೇವತೆ ಸಿದ್ದೇಶ್ವರ ಜಾತ್ರೆ ನಿಮಿತ್ತ ನಗರದ ಎಸ್‌.ಎಸ್‌. ಹೈಸ್ಕೂಲ್‌ ಮೈದಾನದಲ್ಲಿ ಶುಕ್ರವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸಿಳ್ಳೆ, ಕೇಕೆಗಳದ್ದೇ ಅಬ್ಬರವಾಗಿತ್ತು. ಪೈಲ್ವಾನರು ತಮ್ಮ ಪ್ರತಿಸ್ಪರ್ಧಿ ವಿರುದ್ದ ಹಾಕುತ್ತಿದ್ದ ಪಟ್ಟುಗಳನ್ನು ಕಂಡು ಪ್ರೇಕ್ಷಕರು ಕೇಕೆ ಹಾಕುತ್ತಿದ್ದರು.

Advertisement

ನಗರದಲ್ಲಿ ಜಾತ್ರೆ ಕೊನೆ ದಿನವಾದ ಶುಕ್ರವಾರ ಒಂದೆಡೆ ಜಾತ್ರೆ ಸಂಭ್ರಮ ಮೇಳೈಸಿದ್ದರೆ, ಪೈಲ್ವಾನರ ಕಮಾಲ್‌ಗ‌ಳನ್ನು ಕಂಡ ಜನರ ಹರ್ಷೋದ್ಘಾರ, ಸಿಳ್ಳೆ, ಕೇಕೆ ಮುಗಿಲು ಮುಟ್ಟಿದ್ದವು. ಹರ್ಷೋದ್ಘಾರದ ಮಧ್ಯೆಯೇ ಜನರು ಪೈಲ್ವಾನರಿಗೆ ಉತ್ಸಾಹ ಸಹ ತುಂಬಿದರು. ಕುಸ್ತಿ ಪಂದ್ಯಾವಳಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಒಂದೊಂದು ಸೆಣಸಾಟವೂ ರೋಚಕತೆಯಿಂದ ಕೂಡಿತ್ತು. ಯಾರು ಚಿತ್‌ ಮಾಡುತ್ತಾರೆ ಎಂಬುದನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಹೀಗಾಗಿ ಮೈದಾನದ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ನೆರೆದಿದ್ದರು. ಪೈಲ್ವಾನರು ನಡೆಸಿದ ಸ್ಪರ್ಧೆಯಲ್ಲಿ ಕುಸ್ತಿ ಪಟುಗಳು ನೆರೆದ ಕುಸ್ತಿ ಪ್ರಿಯರನ್ನು ಮನಣಿಸುವಲ್ಲಿ ಯಶಸ್ವಿಯಾಗಿತ್ತು.

ಸಾಂಗ್ಲಿ, ಜತ್ತ, ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು. ತೀವ್ರ ಹಣಾಹಣಿಯಿಂದ ಕೂಡಿದ ಕಾಳಗದಲ್ಲಿ ಅನೇಕ ಪೈಲ್ವಾನರು ಚಿತ್‌ ಮಾಡುವತ್ತ ನೋಡುವುದನ್ನು ಜನತೆ ತದೇಕಚಿತ್ತದಿಂದ ವೀಕ್ಷಿಸಿದರು.

ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ಅಮಗೊಂಡ ಪೈಲ್ವಾನ್‌ ನಿರ್ವಾಣಿ ಹಾಗೂ ಗೌಡಪ್ಪ ಧುಮಕನಾಳ ಅವರ ನಡುವಣ ನಡೆದ ಕುಸ್ತಿ ಕಾಳಗ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿತು.

Advertisement

ಕುಸ್ತಿ ಪಂದ್ಯಾವಳಿಗೆ ವಿದ್ಯುಕ್ತವಾಗಿ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹರ್ಷಗೌಡ ಪಾಟೀಲ ಚಾಲನೆ ನೀಡಿದರು. ಕುಸ್ತಿಪಟುವೂ ಆಗಿರುವ ಪೊಲೀಸ್‌ ಅಧಿಕಾರಿ ಮಲ್ಲಿಕಾರ್ಜುನ ಸಿಂಧೂರ, ಅಂತಾರಾಷ್ಟ್ರೀಯ ಕುಸ್ತಿ ಪಟು ರಥಕುಮಾರ ಮಠಪತಿ ಕುಸ್ತಿ ಬಗ್ಗೆ ಸಲಹೆ ನೀಡಿದರು. ಸಿದ್ದೇಶ್ವರ ಬ್ಯಾಂಕ್‌ ನಿರ್ದೇಶಕ ಸಾಯಬಣ್ಣ ಭೋವಿ ನಿರ್ಣಾಯಕರಾಗಿದ್ದರು.

ಸಿದ್ದೇಶ್ವರ ಸಂಸ್ಥೆ ಚೇರಮನ್‌ ಬಸಯ್ಯ ಹಿರೇಮಠ, ಸದಾನಂದ ದೇಸಾಯಿ, ಎಂ.ಎಂ. ಸಜ್ಜನ, ಸದಾಶಿವ ಗುಡ್ಡೋಡಗಿ, ಬಸವರಾಜ ಸುಗೂರ, ವಿಶ್ವನಾಥ ನೀಲಾ, ನಾಗಪ್ಪ ಗುಗ್ಗರಿ, ಶಿವು ಚಿಮ್ಮಲಗಿ, ಎಂ. ಎಸ್‌. ಕರಡಿ, ಲಕ್ಷ್ಮಣ ಜಾಧವ, ರಾಜುಗೌಡ ಪೊಲೀಸ್‌ಪಾಟೀಲ, ಸುಂದರ ಸಾಲಿಯಾನ, ಪ್ರಭು ಗೊಬ್ಬುರ, ನಿಂಗಪ್ಪ ಕುಂದರಗಿ, ಮಹಾದೇವ ಹತ್ತಿಕಾಳ, ಬಸವರಾಜ ಗಣಿ, ಕಿರಣ ಉಳ್ಳಾಗಡ್ಡಿ, ಅನಿಲ ಸಬರದ, ಶಿವಾನಂದ ಚಿಮ್ಮಲಗಿ, ಶಂಕರ ಬನ್ನೂರ, ಮಲ್ಲಿಕಾರ್ಜುನ ನಿರ್ವಾಣಿ ಪ್ರಭು ಗೊಬ್ಬೂರ, ನಿಂಗಪ್ಪ ಕುಂದರಗಿ, ಮಲ್ಲಿಕಾರ್ಜುನ ನಿರವಾಣಿ, ರಾಜು ಪತ್ತಾರ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next