Advertisement
ನಮ್ಮ ಮನೆಯ ಎಲ್ಲರ ಕಾಲಲ್ಲೂ ಶ್ವಾನಚಕ್ರವಿದೆ ! ಅಂದರೆ, ಎಲ್ಲ ಸದಸ್ಯರೂ ನಿರಂತರ ಚಲನೆಯಲ್ಲಿರುತ್ತಾರೆ. ಭೂಪಟದ ಎಲ್ಲ ಅûಾಂಕ್ಷ, ರೇಖಾಂಶಗಳ ವಾರಸುದಾರರಂತೆ ವರ್ತಿಸುತ್ತಾರೆ. ಯಾವಾಗಲೂ ಪ್ರಯಾಣ. ಎಲ್ಲಿಗೋ ಹೋಗುವುದು, ಎÇÉೆಲ್ಲಿಂದಲೋ ಬರುವುದು. ಈ ಪ್ರಯಾಣಗಳ ಗುರಿ ಏನು, ಸಾರ್ಥಕತೆ ಏನು? ಎಂದು ಒಂದೇ ಒಂದು ಸಲವಾದರೂ ಸರಿಯೇ ಎಲ್ಲರೂ ಒಟ್ಟಿಗೇ ಕುಳಿತು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಕುಳಿತುಕೊಂಡರೂ ಆವಾಗಲೂ ಪ್ರಯಾಣದ್ದೇ ಧ್ಯಾನ. ಮತ್ತೆ ಪ್ರಯಾಣ, ಇನ್ನಷ್ಟು ಪ್ರಯಾಣ, ನಿಲುಗಡೆಯೆಂಬುದೇ ಇಲ್ಲ. ಇನ್ನು ನಿಲ್ದಾಣದ ಮಾತೇಕೆ?
Related Articles
Advertisement
ಊರಿಂದ ಊರಿಗೆ ಪ್ರಯಾಣದ ಮಾತು ಬಿಡಿ, ನಮ್ಮೂರೊಂದರಲ್ಲೇ ಎಷ್ಟೊಂದು ನಿಲ್ದಾಣಗಳಿದ್ದವು. ಬಸ್ ಒಂದು ಹೋಟೆಲ್ ಎದುರಿಗೆ ನಿಂತಿದೆ. ಡ್ರೆçವರ್ ಮಾಮನ, ಕಂಡಕ್ಟರ್ ಭಾವನ ಫಲಾರ ಆಗುತ್ತಿದೆ. ಬಸ್ ಹತ್ತಬೇಕಾದವರೆಲ್ಲ ಇವರಿಬ್ಬರೂ ಇಡ್ಲಿ, ವಡೆ, ಉಪ್ಪಿಟ್ಟು ತಿನ್ನುವುದನ್ನು, ಕಾಫಿ ಗುಟುಕರಿಸುವುದನ್ನು ನೋಡುತ್ತ ನಿಂತಿ¨ªಾರೆ. ತಿಂಡಿ ತಿನ್ನುವುದರಲ್ಲಿ ಇಬ್ಬರ ನಡುವೆಯೇ ಆದರೂ ನಾಲ್ಕಾರು ನಿಮಿಷಗಳ ವ್ಯತ್ಯಾಸವಿದೆ. ಪ್ರಯಾಣಿಕರು ನಿಧಾನವಾಗಿ ಮಾತನಾಡುತ್ತ, ಆಕಳಿಸುತ್ತ¤, ಮೈ ಮುರಿಯುತ್ತ ಒಬ್ಬೊಬ್ಬರಾಗಿ ಬಸ್ ಹತ್ತಿದರು. ಹತ್ತು ಹೆಜ್ಜೆ ಹೋಗಿಲ್ಲ, ಬಸ್ ನಿಂತೇಬಿಟ್ಟಿತು. ಪಕ್ಕದ ಕೋಡಿಹಳ್ಳಿಯಿಂದ ಬಸ್ ಹತ್ತಲು ಬರುತ್ತಿರುವವರು ರಸ್ತೆಯ ತುದಿಯಲ್ಲಿ ಕಂಡರಪ್ಪ. ಅವರೆಲ್ಲರೂ ಬಂದು ಬಸ್ ಒಳಗೆ ಕೂರುವ-ನಿಲ್ಲುವ ತನಕ ಬಸ್ ಹಾಗೇ ನಿಂತಿತ್ತು. ಒಳಗೆ ಬಂದವರು ಈಗಾಗಲೇ ಕುಳಿತಿರುವವರ ಹತ್ತಿರ, ಹಿಂದಿನ ಮಾತುಕತೆಯನ್ನು ಮುಂದುವರಿಸುವರು. ಇನ್ನು ಇಪ್ಪತ್ತು ಹೆಜ್ಜೆಯ ನಂತರ ಅಧಿಕೃತ ಬಸ್ ನಿಲ್ದಾಣ. ಬಸ್ ಈಗ ನಿಲ್ಲಲೇಬೇಕಲ್ಲ. ಮತ್ತೆ ಜನ ಬಸ್ ಹತ್ತಿದರು. ಮುಂದಿನ ಬಸ್‌ಗೆ ಬಂದಿದ್ದವರು ಕೂಡ ಈಗಲೇ ಬಸ್ ಹತ್ತಿದ್ದರು. ತಪ್ಪು ಗೊತ್ತಾದ ತತ್‌ಕ್ಷಣ ಬಸ್ ಇಳಿದರು. ಬಸ್ ಹತ್ತುವುದು ನಾಲ್ಕು ಜನವಾದರೆ, ಅವರನ್ನು ಹತ್ತಿಸುವವರು ನಲವತ್ತು ಜನ. ಇವರಲ್ಲಿ ಕೆಲವರು ಮುಂದಿನ ನಿಲ್ದಾಣದ ತನಕವೂ ಬಸ್ ಹಿಂದೆ ನಡೆದುಕೊಂಡು ಬಂದು, ಪ್ರಯಾಣ ಹೊರಟಿರುವ ಬಂಧುಗಳನ್ನು ಮತ್ತಷ್ಟು ಮಾತನಾಡಿಸುವರು, ಇನ್ನೊಮ್ಮೆ ಸುಖ ಪ್ರಯಾಣ ಕೋರುವರು. ಮರೆತಿರುವ ಎಲೆ ಅಡಕೆ, ಕಡ್ಡಿ ಹುಡಿ ಕೂಡ ಕೊಟ್ಟುಬಿಡುವರು. ಸ್ವಲ್ಪ ಜುಲುಮೆ ಮಾಡಿದರೂ ಸಾಕು ಸುಖ ಪ್ರಯಾಣ ಕೋರುತ್ತಿದ್ದವರೇ ಬಸ್ ಹತ್ತಿಬಿಡುತ್ತಿದ್ದರು. ಇನ್ನು ಇಪ್ಪತ್ತೆçದು ಹೆಜ್ಜೆಯ ನಂತರ ಪೊಲೀಸ್ ಸ್ಟೇಷನ್. ಇನ್‌ಸ್ಪೆಕ್ಟರ್ ಕುಟುಂಬವೋ, ದಫೇದಾರನ ಷಡ್ಡಕನೋ ಬಸ್ ಬಳಿಗೆ ಬರುವರು. ಅದಕ್ಕಾಗಿ ಬಸ್ ನಿಲ್ಲಬೇಕು. ಪೊಲೀಸಿನವರಾದ್ದರಿಂದ ಆತುರ ಪಡುವ ಹಾಗೂ ಇಲ್ಲ, ಆತುರ ಪಡಿಸುವ ಹಾಗೂ ಇಲ್ಲ. ಲಗೇಜ್ ಮಾತ್ರ ಹತ್ತು ಜನರದ್ದು. ಬಾಳೆಗೊನೆ, ಬೆಲ್ಲದ ಪಿಂಡಿ, ತೋಟದ ತರಕಾರಿ, ಸಣ್ಣಕ್ಕಿ ಇವೆಲ್ಲ ಊರ ಕಾಣಿಕೆಯಾದ್ದರಿಂದ ಉಳಿದ ಪ್ರಯಾಣಿಕರು ಒಡೆತನದ ಭಾವದಿಂದಲೂ, ಅಸೂಯೆಯಿಂದಲೂ ಕಣ್ಣು ಹಾಕುವರು. ಈಗ ಪ್ರಯಾಣಿಕರಿಗೆ ಒಂದು ರೀತಿಯ ಅಂತಿಮ ಬೀಳ್ಕೊಡುಗೆ. ಸುಖ ಪ್ರಯಾಣ ಕೋರಲು ಬಂದವರೆಲ್ಲ ವಾಪಸು ಹೊರಡುವರು. ಬಸ್ ಒಳಗೆ ಕುಳಿತವರು, ಸರಿ, ಇನ್ನು ಈ ಜಗತ್ತು ತಮ್ಮದೆಂದು ಇಡೀ ಬಸ್‌ನೊಳಗಿರುವವರನ್ನೆಲ್ಲ ಒಮ್ಮೆ ಗಮನಿಸುವರು. ಓ, ಎಲ್ಲರೂ ಗೊತ್ತಿರುವವರೇ, ಎಲ್ಲರಿಗೂ ಗೊತ್ತಿರುವವರೇ.
ಅಲ್ಲಿಂದ ನೂರು ವಿೂàಟರ್ ಕ್ರಮಿಸಿದರೆ ಶೆಟ್ಟರ ಮನೆಗಳು. ಊರಿಗೇ ಕುಳಸ್ಥರು. ಬಸ್ ನಿಲ್ಲಲೇಬೇಕು. ಅವರ ಶ್ರೀಮಂತಿಕೆಗನುಗುಣವಾಗಿ, ನಿಧಾನವಾಗಿ ಸೀಟುಗಳಲ್ಲಿ ವಿರಾಜಮಾನರಾಗುವರು. ಹೆಂಗಸರು ಬಸ್ ಹತ್ತಿದರೆ, ಅವರ ಒಡವೆಗಳ, ಸೀರೆಯ ಒಂದು ಅಂದಾಜನ್ನು ಬಸ್ ಒಳಗೆ ಇರುವ ಎಲ್ಲ ಕಣ್ಣುಗಳ ಜೋಡಿಯು ತೆಗೆಯುವುದು. ಗಂಡಸರಾದರೆ ನಮಸ್ಕಾರವು ಬೀಳುವುದು. ಬಸ್‌ಗೆ ಊರು ಬಿಡಲು ಇಷ್ಟವಿಲ್ಲವೋ ಅಥವಾ ಬಸ್ಸಿನ ವೇಗವೇ ಅಷ್ಟೊಂದು ಕಡಿಮೆಯೋ ಬಸ್‌ನ ಗತಿಯಲ್ಲೇ ಒಂದು ರೀತಿಯ ಉದಾಸೀನ. ನಾಲ್ಕು ನಿಮಿಷದ ನಂತರ ಊರಿನ ಹಿಂದಿನ ಬೀದಿಗಳು. ಮುಖ್ಯ ರಸ್ತೆಗೆ ಬಂದು ಸೇರುವ ಚೌಕ ಬರುವುದು. ಅಲ್ಲಿ ಪ್ರತಿದಿನವೂ ಬಸ್ ಹತ್ತುವವರು ಇದ್ದೇ ಇರುತ್ತಾರೆಂದಲ್ಲ. ಒಬ್ಬರಾದರೂ ಸರಿ ಒಂದು ವಾರದಲ್ಲಿ. ಆದರೂ ಅವರು ನಮ್ಮ ಊರಿನವರಲ್ಲವೇ? ಅದಕ್ಕಾಗಿ ವಾಡಿಕೆಯಿಂದಲೂ, ಮರ್ಯಾದೆಯಿಂದಲೂ ಕಾಯಲಾಗುವುದು.
ನಂತರ ಊರಿನ ಸ್ಕೂಲುಗಳು, ಸಾಬರ ಕೇರಿ, ಜನಗಳ ಆಸ್ಪತ್ರೆ, ದನದ ಆಸ್ಪತ್ರೆ, ಎತ್ತುಗಳ ಕಾಲಿಗೆ ಲಾಳ ಹೊಡೆಯುವ ಅಂಗಡಿ, ಸೆಲೂನು, ಎಲ್ಲವೂ ಒಟ್ಟಿಗೇ. ಬಸ್‌ಗೆ ಇದೊಂದು ಮೇಜರ್ ನಿಲ್ದಾಣ. ಕೊಡೆ, ಚೀಲ, ಕೋಳಿ, ಕುರಿ, ಗೂರಲು ರೋàಗದವರು, ನಾಯಕಸಾನಿ, ಇಂಗ್ಲೀಷ್ ಕಲಿಸುವ ಮೇಷ್ಟರು, ಎಲ್ಲ ವರ್ಣಾಶ್ರಮಗಳ ಜನರೂ ಬಸ್ ಹತ್ತುವರು. ಬಸ್ ಒಳಗೆ ಒಂದು ರೀತಿಯ ಜಾತ್ರೆಯ, ಸಂತೆಯ ವಾತಾವರಣ. ಒಬ್ಬರ ಮೈಮೇಲೆ ಇನ್ನೊಬ್ಬರು ಕೂತ ಅನುಭವ. ಈಗ ಒತ್ತಿಕೊಳ್ಳಬೇಕೆಂದರೂ ಸ್ಥಳವಿಲ್ಲ, ಒತ್ತರಿಸಿಕೊಳ್ಳಬೇಕೆಂದರೂ ಜಾಗವಿಲ್ಲ. ನಂತರ ಊರ ಗೌಡರ ಮನೆಗಳ ದೊಡ್ಡ ಕಾಂಪೌಂಡ್. ಕಾಂಪೌಂಡ್ ಮುಂದೆ ಕಬ್ಬಿಣದ ದೊಡ್ಡ ಗೇಟು. ಗೇಟ್ ಒಳಗಡೆಯಿಂದ ಯಾರು ಬರುತ್ತಾರೋ ಇಲ್ಲವೋ ಎಂಬುದೇ ನಿಗದಿಯಿಲ್ಲ. ಬಸ್ ಆದರೂ ಊರ ಗೌರವಕ್ಕಾಗಿ ಕಾಯಬೇಕು. ಕಾಯುತ್ತ ನಿಂತೇಬಿಡುತ್ತಿತ್ತು.
ನನ್ನಂತಹ ಕೆಲವರಾದರೂ ಬಸ್‌ನಿಂದ ಇಳಿದು, ರಸ್ತೆಗೆ ಆದ ಹಾಗೆ ಇರುವ ಮನೆಗಳ ಜಗುಲಿಗಳ ಮೇಲೆ ಚೌಕಾಭಾರ ಆಡುತ್ತಿರುವದನ್ನು ನೋಡುತ್ತ ನಿಲ್ಲುವೆವು. ಕುಂಟೇಬಿÇÉೆ ಆಡುವ ಹುಡುಗಿಯರು ನೆಗೆಯುವಾಗ, ಲಂಗವನ್ನು ಕೈಯಲ್ಲಿ ಎತ್ತಿ ಹಿಡಿದುಕೊಳ್ಳುವುದರಿಂದ ಅವರ ಕಾಲಿನ ಮಾಂಸಖಂಡಗಳು ಎಲ್ಲರ ಕಣ್ಣಿಗೂ ಬೀಳುವುದು. ಅದನ್ನು ನೋಡಿದ ನಂತರ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದೆವು.
ಆಮೇಲೆ ಬರುವುದು ಸಂತೆಮಾಳ, ಪಟ್ಟಲದಮ್ಮನ ಗುಡಿ, ಸಿನೆಮಾ ಹಾಲ್, ದಿನಸಿ-ಜವಳಿ ಅಂಗಡಿಗಳು, ಹೋಟೆಲ್, ಹಲಸಿನ ತೊಳೆ, ಸೌತೆಕಾಯಿ, ಕಲ್ಲಂಗಡಿ, ಕಬೂìಜ ಮಾರುವ ಅಂಗಡಿ. ಬಸ್ ನಿಂತೇಬಿಡುತ್ತಿತ್ತು. ಬೇರೆ ಬೇರೆ ದಿಕ್ಕುಗಳಿಂದ ಬರುವ ಬಸ್‌ಗಳ ಗಡಿಬಿಡಿ. ಕಂಡಕ್ಟರ್ ಪ್ರತಿಯೊಬ್ಬರಿಗೂ ಟಿಕೆಟ್ ಕೊಟ್ಟು, ದುಡ್ಡು ಪಡೆದು ತಲೆ ಎಣಿಸಿ, ಎಲ್ಲವನ್ನೂ ಖಚಿತ ಮಾಡಿಕೊಂಡು ಬಸ್ ಏಜೆಂಟ್ ಬಸ್‌ನಿಂದ ಕೆಳಗಿಳಿದ ಮೇಲೆ ಬಸ್ ನಮ್ಮೂರ ಎಲ್ಲ ನಿಲ್ದಾಣಗಳನ್ನು ನಿರ್ವಹಿಸಿ ಕೊನೆಗೂ ನಮ್ಮೂರಿನಿಂದ ಹೊರಟೇಬಿಡುತ್ತಿತ್ತು. ಇಷ್ಟೊಂದು ನಿಲ್ದಾಣ, ಇಷ್ಟೊಂದು ಚಟುವಟಿಕೆ, ಇಷ್ಟೆಲ್ಲ ದೂರ, ಇಷ್ಟೆಲ್ಲ ಜನ ಸೇರಿದರೂ ಕೇವಲ ಮೂರು ಫರ್ಲಾಂಗ್ ಕೂಡ ಆಗುತ್ತಿರಲಿಲ್ಲ. ಇಷ್ಟಾಗಿಯೂ ಇವೆಲ್ಲ ಅಧಿಕೃತ ರೂಢಿಗತ ನಿಲ್ದಾಣಗಳು. ಯಾರದಾದರೂ ಮನೆಯಲ್ಲಿ ಲಗ್ನವಾಗಿದ್ದರೆ, ಆ ಮನೆಯಿಂದ ಹೆಣ್ಣು ಗಂಡಿನ ಊರಿಗೆ ಹೊರಟಿದ್ದರೆ, ಬಸ್ ಆ ಮನೆಯ ಮುಂದೆ ನಿಲ್ಲಬೇಕಾಗುವುದು ಕಡ್ಡಾಯವೇ. ಯಾರದಾದರೂ ಮನೆಯಲ್ಲಿ ತಿಥಿಯೋ, ಹಾಲು-ತುಪ್ಪವೋ ಜರುಗುತ್ತಿದ್ದರೆ, ಆ ಮನೆಯ ಮುಂದೆ ಜಮಾಯಿಸಿದ ಅಕ್ಕಪಕ್ಕದ ಊರುಗಳಿಂದ ಬಂದಿರುವ ಜನಸಂದಣಿಯ ವಿಶೇಷ ಸೇವೆಗಾಗಿಯೂ ಬಸ್ ನಿಲ್ಲುತ್ತಿತ್ತು. ಹೀಗೆ ಒಂದರ್ಧ ಕಿ. ಮೀ. ಒಳಗೆ ಹತ್ತು-ಹನ್ನೆರಡು ನಿಲ್ದಾಣಗಳು ಬಂದರೂ ಯಾರೂ ಗೊಣಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ನಾನೇ ಹೆಚ್ಚು ಕಡಿಮೆ ಊರಿನಲ್ಲಿರುವ ಬಹುತೇಕ ನಿಲ್ದಾಣಗಳಿಂದ ಒಂದಲ್ಲ ಒಂದು ಸಂದರ್ಭದಲ್ಲಿ ಬಸ್ ಹತ್ತಿದ್ದೇನೆ. ಬಸ್ ನಿಲ್ಲಲಿ, ಜನ ಹತ್ತಲಿ, ನಮ್ಮನ್ನು ಮಾತನಾಡಿಸಲೆಂದೇ ನಾವೆಲ್ಲರೂ ಕಾಯುತ್ತಿ¨ªೆವು. ಯಾರು ಯಾರು ಬರುತ್ತಾರೆ, ಯಾವ ರೀತಿಯ ಬಟ್ಟೆ ಹಾಕಿಕೊಂಡಿರುತ್ತಾರೆ, ಕೈಯಲ್ಲಿ ಹಿಡಿದುಕೊಂಡು ಬರುವ ಚೀಲದ ಬಣ್ಣ ಯಾವುದು, ಯಾವ ಯಾವ ಕೆಲಸಕ್ಕೆ ಯಾವೂರಿಗೆ ಹೋಗುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುತ್ತಿತ್ತು. ಹೀಗೆ ಎಲ್ಲವೂ ಎಲ್ಲರಿಗೂ ಗೊತ್ತಿದ್ದರಿಂದಲೇ ಎಲ್ಲರಿಗೂ ಕಾಯುವ ತಾಳ್ಮೆ, ವ್ಯವಧಾನವಿರುತ್ತಿತ್ತು.
ಈಗ ಇದೆಲ್ಲವನ್ನೂ ಯಾರಿಗೆ ಹೇಳಲಿ? ಕುಟುಂಬದ ಸದಸ್ಯರ ಜೊತೆ ಚರ್ಚಿಸುವಷ್ಟು ಸಮಯ ಮತ್ತು ವ್ಯವಧಾನ ಸಿಗುತ್ತಿಲ್ಲವೆಂದು ಮೊದಲೇ ಹೇಳಿದೆ. ಅವರಿಗೆ ಮಾರ್ಗ ಮಧ್ಯವು ಬೇಕಿಲ್ಲದೆಯೂ ಇರಬಹುದು. ಅವರನ್ನೇಕೆ ಸುಮ್ಮನೆ ಅನ್ನಬೇಕು. ಜೊತೆಯಲ್ಲಿ ಪ್ರಯಾಣಿಸುವ ಪಯಣಿಗರಲ್ಲೂ ಈ ಉತ್ಸಾಹ ಕಂಡುಬರುತ್ತಿಲ್ಲ.
ಮಾರ್ಗ ಮಧ್ಯದ ನಿಲ್ದಾಣಗಳಿರಲಿ, ಮನೆಯ ಅಕ್ಕ-ಪಕ್ಕ ಇರುವ ನಿಲ್ದಾಣಗಳು ಕೂಡ ನನಗೆ ಗೊತ್ತಿಲ್ಲ. ನಮಗೆ ಏನಾದರೂ ಗೊತ್ತಿಲ್ಲವೆಂದರೆ ಆಳದಲ್ಲಿ ಅದು ನಮಗೆ ಬೇಕಿಲ್ಲವೆಂದೇ ಅರ್ಥ. ಅದು ಬೇಕಿಲ್ಲವೆಂದು ಬೇಸರವೂ ಆಗದಷ್ಟು ಮನಸ್ಸು ಯಾಂತ್ರಿಕವಾಗಿದೆ. ಯಾವಾಗಲೂ ಚಲಿಸುತ್ತಿರುವ, ಯಾವಾಗಲೂ ಆವೇಗದಲ್ಲಿರುವ ಮನಸ್ಸು ಯಾವೊಂದು ಭಾವನೆಯೂ ಮೂಡದಷ್ಟು, ಸೂಕ್ಷ್ಮವೂ ಗೊತ್ತಾಗದಷ್ಟು ಜಡವಾಗಿಬಿಟ್ಟಿರಬಹುದು.
ಕೆ. ಸತ್ಯನಾರಾಯಣ