ಮೂಡುಬಿದಿರೆ: ಪತ್ರಕರ್ತ ತನ್ನ ವೈಯಕ್ತಿಕ ನಿಲುವು, ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು. ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ ಎಂದು ಪತ್ರಕರ್ತ ಹಮೀದ್ ಪಾಳ್ಯ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ನ್ಯೂಸ್ ಟೈಮ್‌ನ ಶತಕದ ಸಂಭ್ರಮದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಗಂಟೆಗಳ ಮಿತಿ ಇಲ್ಲದೆ ಕೆಲಸ ಮಾಡುವ, ಬದ್ಧತೆ, ಅಧ್ಯಯನಶೀಲತೆ ಮತ್ತು ವಿದ್ವತ್ ಇರುವ ಪತ್ರಕರ್ತರು ಮಾತ್ರ ವೃತ್ತಿಯಲ್ಲಿ ಗಟ್ಟಿಯಾಗಬಲ್ಲರು, ಸಮಾಜಮುಖೀಯಾಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಲ್ಲರು ಎಂದರು.
ಪತ್ರಿಕೋದ್ಯಮ ಸ್ನಾತ ಕೋತ್ತರವಿಭಾಗದ ಮುಖ್ಯಸ್ಥೆ ಡಾ| ಮೌಲ್ಯಾ ಜೀವನ್ ಪ್ರಸ್ತಾವನೆಗೈದರು. ಈ ಹಿಂದೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕೆಗಳತ್ತ ಮಾತ್ರ ಹೋಗುತ್ತಿದ್ದರೂ, ಆದರೆ ಇಂದು ದೃಶ್ಯಮಾಧ್ಯಮದತ್ತ ವಿದ್ಯಾರ್ಥಿಗಳ ಒಲವು ಹೆಚ್ಚಾಗಿದೆ. ಇದಕ್ಕಾಗಿ, ಆಳ್ವಾಸ್ ಕಾಲೇಜಿನಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ಕೊಟ್ಟು ಸುಸಜ್ಜಿತವಾದ ಸ್ಟುಡಿಯೋ ವ್ಯವಸ್ಥೆಯನ್ನು ಕಲ್ಪಿಸಿ ವಿದ್ಯಾರ್ಥಿಗಳ ಆಸಕ್ತಿಯ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದರು.
ಸಮ್ಮಾನ
2018ನೇ ಸಾಲಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮದಲ್ಲಿ ರ್‍ಯಾಂಕ್ ಪಡೆದ ಅಶ್ವಿನಿ ಜೈನ್, ಪ್ರಫುಲ್ಲ, ನರೇಂದ್ರ ಮತ್ತು ಫಾಜಿಲ್ ಅವರನ್ನು ಸಮ್ಮಾನಿಸಲಾಯಿತು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ ಮೋಹನ ಆಳ್ವ, ಅಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿ ವಾಸುದೇವ್ ಭಟ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಟ್ಟಿ, ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು.ಉಪನ್ಯಾಸಕಿ ಶ್ರೀಗೌರಿ ಜೋಷಿ ನಿರೂಪಿಸಿದರು. ಡಾ| ಶ್ರೀನಿವಾಸ ಹೊಡೆಯಾಲ ವಂದಿಸಿದರು.