ಧಾರವಾಡ: “ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರು ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ಧಾರವಾಡದ ಸತ್ತೂರಿನಲ್ಲಿರುವ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳಿಂದ ಅವರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ತಮ್ಮ ತೋಟದ ಮನೆಯಲ್ಲಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡು ತಮ್ಮ ಆಪ್ತರ ಸಹಾಯದಿಂದ ಎಸ್‌ಡಿಎಂ ಆಸ್ಪತ್ರೆ ಸೇರಿದ್ದಾರೆ.
ಕಾಂಗ್ರೆಸ್ ಶಾಸಕ ಎಂ.ಬಿ.ನಾಗರಾಜ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪದ ಮೇಲೆ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದ ಶಾಸಕರ ಹಕ್ಕು ಬಾಧ್ಯತೆಗಳ ಸಮಿತಿ, “ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು “ಯಲಹಂಕ ವಾಯ್ಸ ‘ ಪತ್ರಿಕೆಯ ಅನಿಲರಾಜ್ ಅವರಿಗೆ ತಲಾ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿತ್ತು. ಶಿಕ್ಷೆಯನ್ನು ಜಾರಿಗೊಳಿಸಲು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್. ಮೂರ್ತಿ ಅವರು ಒಳಾಡಳಿತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸುಭಾಷಚಂದ್ರ ಅವರಿಗೆ ಪತ್ರ ಬರೆದ್ದರು. ಅವರು ಬೆಳಗೆರೆ ಬಂಧನಕ್ಕೆ ಆದೇಶ ನೀಡಿದ್ದರು.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದ ಪೊಲೀಸರ ತಂಡ ರವಿ ಬೆಳಗೆರೆ ಅವರನ್ನು ಬಂಧಿಸಲು ಜೋಯಿಡಾದ ತೋಟದ ಮನೆಗೆ ತೆರಳಿತ್ತು. ಬೆಳಗೆರೆ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕುಮಾರಸ್ವಾಮಿ ಲೇಔಟ್ ಪೊಲೀಸರು ಎಸ್‌ಡಿಎಂನಲ್ಲೇ ಮೊಕ್ಕಾಂ ಹೂಡಿದ್ದಾರೆ.