Advertisement

ಅನುಭವದ ಪುನರನುಭವವೇ ಕಾವ್ಯ: ದೊಡ್ಡರಂಗೇಗೌಡ

12:35 PM Jul 05, 2017 | |

ಮುಂಬಯಿ: ಕವಿತೆ ಬಗ್ಗೆ ಮಾತನಾಡೋದು ಕಷ್ಟದ ಕೆಲಸ. ಕವಿತೆ ಹರಿಯುವಂತಹ ನದಿ. ಪ್ರವಹಿಸುವಂತಹ ಗುಣವುಳ್ಳದ್ದು. ಮಧುರವಾದ ಲಯ, ಮಿನುಗುವ ನಕ್ಷತ್ರ. ಅಳುವ ಮಗುವಿನಲ್ಲೂ ಕವಿತೆ ಹಿಡಿದಿಡುತ್ತದೆ. ಧ್ಯಾನಿಸುವ ಕವಿಗೆ ಈ ಲಯದ ಕೂಗಿನಲ್ಲಿ ಕಾವ್ಯದ ಹೊಳಪು ಸಿಗಬಹುದು. ಮನುಷ್ಯನಿಗೆ ಕುತೂಹಲ ಇರಬೇಕು. ಕುತೂಹಲ ತೀರಿ ಹೋದ ತತ್‌ಕ್ಷಣ ಅದು ನಮ್ಮ ಸಾವಿನ ದಿನ. ಮನಸ್ಸಿಗೆ – ಹೃದಯಕ್ಕೆ – ಕವಿತೆಗೆ ಪೂರಕವಾದ ಒಂದು ಸಂಬಂಧ ಇರುತ್ತದೆ. ಕವಿಗೆ ಬೇಕಾದುದು ಐಡಿಯಾಸ್‌ ಎಂದು ಹೆಸರಾಂತ ಕವಿ ದೊಡ್ಡರಂಗೇ ಗೌಡ ನುಡಿದರು.

Advertisement

ಬೆಂಗಳೂರಿನ ಎನ್‌.ಆರ್‌. ಕಾಲೊನಿಯ ಬಿ.ಎಂ.ಶ್ರೀ ಪ್ರತಿಷ್ಠಾನದ ಸಭಾಗೃಹದಲ್ಲಿ ಜೂ.25 ರಂದು ಸುಂದರ ಪ್ರಕಾಶನ ಪ್ರಕಟಿಸಿದ ಮುಂಬಯಿಯ ಸಾಹಿತಿ, ಪತ್ರಕರ್ತ, ಶ್ರೀನಿವಾಸ ಜೋಕಟ್ಟೆ ಅವರ “ಊರಿಗೊಂದು ಆಕಾಶ’ ಕವನ ಸಂಕಲನ, ಖ್ಯಾತ ಲೇಖಕಿ ಆರ್‍ಯಾಂಬ ಪಟ್ಟಾಭಿ (ತ್ರಿವೇಣಿ ಅವರ ಸಹೋದರಿ) ಅವರ “ವಿಶ್ವ ವಿಜ್ಞಾನಿಗಳು’ ಕೃತಿ ಮತ್ತು ಕನ್ನಡ ಕವಿ ಕಾವ್ಯ ಕುಸುಮ – 21, 22 ಮತ್ತು 23 ಕೃತಿಗಳನ್ನು ಬಿಡುಗಡೆ ಮಾಡಿ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿ, ಇಣುಕಿದ್ದು, ತಿಣುಕಿದ್ದು, ಕೆಣಕಿದ್ದೆಲ್ಲ ಕಾವ್ಯವಾಗುವುದಿಲ್ಲ. ಅನುಭವದ ಪುನರನುಭವವೇ ಕಾವ್ಯ. ಕವಿಗಳಿಗೆ ಎಂದಿಗೂ ಪದಗಳ ಬರ ಇರಬಾರದು. ಯಾವ ಪದವನ್ನು ಯಾವುದರ ಜತೆ ಸಮ್ಮಿಳಿತಗೊಳಿಸಿದರೆ ಯಾವ ಅರ್ಥ ಬರುತ್ತದೆ ಎಂಬ ಪರಿಜ್ಞಾನವಿದ್ದರೆ ಹೂ ಅರಳಿದಂತೆ ಒಳ್ಳೆಯ ಕವಿತೆ ಪಲ್ಲವಿಸುತ್ತದೆ ಎಂದು ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ಒಳ್ಳೆಯ ಕಾವ್ಯ ಹೊರಗಣ್ಣಿಗೆ ವಾಚ್ಯದಂತೆ ಕಂಡರೂ ಒಳಗಣ್ಣಿನಲ್ಲಿ ಬೇರೆ ಬೇರೆ ಅರ್ಥಗಳನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾ ಶೇಖರ್‌ ವಿಶೇಷ ಅತಿಥಿ ಸ್ಥಾನದಿಂದ ಹೇಳಿ, ಒಳ್ಳೆಯ ಕಾವ್ಯ ಅಂದರೆ ಗೂಡು ಹೊಕ್ಕಿ ಗೂಡು ಕಟ್ಟುವ ಕ್ರಿಯೆ. ಜೋಡಿಸಿ ಜೋಡಿಸಿ ಭದ್ರವಾಗಿ ಕಟ್ಟಿದ ಗೂಡು ಎಂದು ನುಡಿದರು.

ಶ್ರೀನಿವಾಸ ಜೋಕಟ್ಟೆ ಅವರ ಕೃತಿಯನ್ನು ಬಿಡುಗಡೆಗೊಳಿಸಿ ಪರಿಚಯಿಸಿದ ವಿಮರ್ಶಕಿ, ಪ್ರಾಂಶುಪಾಲೆ, ಕವಯಿತ್ರಿ ಡಾ| ಎಚ್‌.ಎಲ್‌.

ಪುಷ್ಪಾ  ಅವರು ಮಾತನಾಡಿ, ಕವಿತೆಯಲ್ಲಿ ಚಲನೆ ಮುಖ್ಯವಾಗುತ್ತದೆ. ವಸ್ತು ಸ್ಥಿತಿಯನ್ನು ವಿಮರ್ಶಿಸುತ್ತಲೇ ಅಂತರಂಗ – ಬಹಿರಂಗವನ್ನು ತೆರೆದಿಡುವ ಇಲ್ಲಿನ ಕವಿತೆಗಳು ಸ್ವಕೇಂದ್ರದಿಂದ ಬಹಿರ್ಮುಖದ ಸಮಾಜದ ಕಡೆಗೆ ಮುಖ ಮಾಡುತ್ತವೆ. ನಾಸ್ತಿಕ-ಆಸ್ತಿಕತೆಯ ಗೊಂದಲ ಗಳನ್ನು ಚರ್ಚಿಸುತ್ತವೆ. ಕವಿ ಅಲ್ಲಲ್ಲಿ ರೂಪಕಗಳನ್ನು ಬಳಸಿದ್ದಾರೆ. ಪತ್ರಕರ್ತರು ಸಮಾಜವನ್ನು ಗ್ರಹಿಸುವ ರೀತಿ ಅಭಿವ್ಯಕ್ತಿಸುವ ರೀತಿ ಕೂಡಾ ಇಲ್ಲಿನ ಕವಿತೆಗಳಲ್ಲಿ ಗಮನಿಸಬಹುದು ಎಂದರು.

Advertisement

ಹೆಸರಾಂತ ಲೇಖಕಿಯರಾದ ಆರ್‍ಯಾಂಭ ಪಟ್ಟಾಭಿ ಅವರ “ವಿಶ್ವ ವಿಜ್ಞಾನಿಗಳು’ ಕೃತಿಯನ್ನು ವಿಜಯಾ ಸುಬ್ಬರಾಜ್‌ ಪರಿಚಯಿಸಿದರು. ಸುಂದರ ಪ್ರಕಾಶನದ ಇಂದಿರಾ ಸುಂದರ್‌ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಎಲ್ಲಾ ಅತಿಥಿಗಳನ್ನೂ, ಕೃತಿಕಾರರನ್ನೂ ಗಣ್ಯರು ಗೌರವಿಸಿದರು. “ಊರಿಗೊಂದು ಆಕಾಶ’ ಸಂಕಲನದ ಮುಖಪುಟ ರಚಿಸಿದ ಗಿರಿಧರ ಕಾರ್ಕಳ ಮತ್ತು ಎಲ್ಲಾ ಕವನಗಳಿಗೆ ಚಿತ್ರ ರಚಿಸಿದ ಸಂತೋಷ್‌ ಸಸಿಹಿತ್ಲು ಅವರಿಗೆ ಪುಸ್ತಕ ಗೌರವ ನೀಡಲಾಯಿತು. ಆನಂದ ರಾಮರಾವ್‌ ಅವರು ಕಾರ್ಯಕ್ರಮ ನಿರೂಪಣೆಗೈದರು. ಖ್ಯಾತ ಲೇಖಕರಾದ ಶೂದ್ರ  ಶ್ರೀನಿವಾಸ್‌, ಆರ್‌. ಜಿ. ಹಳ್ಳಿ ನಾಗರಾಜ್‌, ಕಂನಾಡಿಗ ನಾರಾಯಣ, ಡಾ| ರಾಜ್‌ಕುಮಾರ್‌ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ರಂಗದ ಸಿ. ವಿ. ಶಿವಶಂಕರ್‌, ರೋಹಿತ್‌ ಚಕ್ರತೀರ್ಥ, ವಿಜಯ ಕರ್ನಾಟಕದ ಸಹ ಸಂಪಾದಕ ಕೃಷ್ಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಇಂದು ಕವನ ಸಂಕಲನವನ್ನು ಪ್ರಕಟಿಸಲು ಪ್ರಕಾಶಕರು ಹಿಂದೇಟು ಹಾಕುತ್ತಿರುವಾಗ ಸುಂದರ ಪ್ರಕಾಶನದ ಇಂದಿರಾ ಸುಂದರ್‌, ಮಾನಸಿ ಅವರು ಮುಂದೆ ಬಂದಿರುವುದು ಸಂತೋಷ ತಂದಿದೆ. 23 ವರ್ಷಗಳ ದೀರ್ಘಾವಧಿಯಲ್ಲಿ ದ್ವಿತೀಯ ಸಂಕಲನ ಬಂದಿರುವುದು. ಮೊದಲ ಸಂಕಲನ 1994ರಲ್ಲಿ ಬೆಂಗಳೂರಿನ ಶೂದ್ರ ಪ್ರಕಾಶನ ತಂದಿದ್ದರೆ, ಇದೀಗ ದ್ವಿತೀಯ ಕವನ ಕೃತಿಯನ್ನೂ ಬೆಂಗಳೂರಿನ ಸುಂದರ ಪ್ರಕಾಶನ ತಂದಿರುವುದು. ಮೊದಲ ಬಾರಿಗೆ ಬೆಂಗಳೂರಲ್ಲಿ ನನ್ನ ಕೃತಿಯೊಂದರ ಬಿಡುಗಡೆ ಸಮಾರಂಭ ನನಗೆ ಖುಷಿ  ತಂದಿದೆ. ಅದಕ್ಕಾಗಿ ಪ್ರಕಾಶನದ ಮಿತ್ರರಾದ ದಿ| ಗೌರಿಸುಂದರ್‌ ಮತ್ತು ಇಂದಿರಾ ಸುಂದರ್‌ ಅವರಿಗೆ ಕೃತಜ್ಞನಾಗಿರುವೆ
  – ಶ್ರೀನಿವಾಸ ಜೋಕಟ್ಟೆ 

   (ಸಾಹಿತಿ, ಪತ್ರಕರ್ತರು).

Advertisement

Udayavani is now on Telegram. Click here to join our channel and stay updated with the latest news.

Next