ಧಾರವಾಡ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಮಾಜಿ ಸಚಿವರಾದ ಸಂತೋಷ ಲಾಡ್, ಬಾಬಾಗೌಡ ಪಾಟೀಲ ಕಲಘಟಗಿ ತಾಲೂಕಿನ ಗಳಗಿ
ಹುಲಕೊಪ್ಪದಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು.
ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗದ ಜನರು ಪರಸ್ಪರ ಒಗ್ಗಟ್ಟಿನಿಂದ ಬದುಕು ಕಟ್ಟಿಕೊಂಡಿದ್ದಾರೆ.
ಬಿಜೆಪಿಯವರು ಜಾತಿ ಮಂತ್ರ ಬಿತ್ತುವ ಮೂಲಕ ದೇಶವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಲು ಮನವಿ ಮಾಡಿದರು.
ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಜೋಶಿಯವರು ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯವಾಗಿದ್ದು, ಸರ್ವ ಸಮುದಾಯ ಬಾಂಧವರು ಬೆಂಬಲಿಸಿ ಆಶೀರ್ವದಿಸಲು ವಿನಂತಿಸಿದರು. ಮಂಜುನಾಥ ಮುರಳ್ಳಿ, ಎಸ್.ಆರ್. ಪಾಟೀಲ, ರಜನಿಕಾಂತ ಬಿಜವಾಡ ಇನ್ನಿತರರಿದ್ದರು.
ಇಂದು ವಿನಯ್ ಬೈಕ್ ರ್ಯಾಲಿ
ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಏ. 14ರಂದು ಬೆಳಗ್ಗೆ 11:30 ಗಂಟೆಯಿಂದ ವಿವಿಧೆಡೆ ಬೈಕ್ ರ್ಯಾಲಿ ಮೂಲಕ ಪ್ರಚಾರ ನಡೆಸಲಿದ್ದಾರೆ. ಮಂಟೂರು ರಸ್ತೆಯ ಅಹ್ಮದ್ ಪ್ಲಾಟ್ ಮುಖ್ಯರಸ್ತೆಯಿಂದ ಆರಂಭವಾಗುವ ಬೈಕ್ ರ್ಯಾಲಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ ಸೇರಿದಂತೆ ಪಕ್ಷದ ಗಣ್ಯರು, ಮುಖಂಡರು ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಬೈಕ್ ರ್ಯಾಲಿ ಮಂಟೂರು ರಸ್ತೆಯಿಂದ ಆರಂಭವಾಗಿ ಗಣೇಶಪೇಟೆ, ಸಿಬಿಟಿ, ಮಂಗಳವಾರ ಪೇಟೆ, ಸೆಟ್ಲಮೆಂಟ್,
ಕೆ.ಬಿ. ನಗರ, ಯಲ್ಲಾಪುರ ಓಣಿ, ವೀರಾಪುರ ಓಣಿ, ಬಂಕಾಪುರ ಚೌಕ್, ಇಸ್ಲಾಂಪುರ, ಹಳೇ ಹುಬ್ಬಳ್ಳಿ ವೃತ್ತ, ಬಮ್ಮಾಪುರ ಓಣಿ, ಅಕ್ಕಿಹೊಂಡ, ದಾಜೀಬಾನ ಪೇಟೆ ಸೇರಿದಂತೆ ಇನ್ನಿತರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂರುಸಾವಿರ ಮಠದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.
ಅಣ್ಣಿಗೇರಿಗೆ ಇಂದು ಗೃಹ ಸಚಿವ ಎಂ.ಬಿ. ಪಾಟೀಲ
ಅಣ್ಣಿಗೇರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಪ್ರಚಾರ ಮಾಡಲು ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ ಪಟ್ಟಣಕ್ಕೆ ಏ. 14ರಂದು ಆಗಮಿಸುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಇಲ್ಲಿಯ ಆದಿಕವಿ ಪಂಪ ಪ್ರಾಥಮಿಕ ಶಾಲೆ ಬಯಲಲ್ಲಿ ಬೆಳಗ್ಗೆ 11 ಗಂಟೆಗೆ ಪಾಟೀಲ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಅಭ್ಯರ್ಥಿ ವಿನಯ ಕುಲಕರ್ಣಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನೋದ ಅಸೂಟಿ, ಜೆಡಿಎಸ್ ಪರವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಬಿ.ಬಿ. ಗಂಗಾಧರಮಠ ಮತ್ತಿತರ ಮುಖಂಡರು ಭಾಗಿಯಾಗಲಿದ್ದಾರೆ.