Advertisement

Dharwad: ಜೋಷಿ-ಶೆಟ್ಟರ್‌: ದೋಸ್ತಿಗಳ ಕುಸ್ತಿ ಆದೀತಾ?

11:21 PM Jan 05, 2024 | Pranav MS |

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಪ್ರತಿನಿಧಿಸುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರ 28 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ. ಹಿಂದುತ್ವದ ಪ್ರಬಲ ಗಾಳಿ ಇಲ್ಲಿ ಬೀಸಲು ಆರಂಭಿಸಿದಂದಿನಿಂದ ಬಿಜೆಪಿ ಈ ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ.

Advertisement

ಧಾರವಾಡ ಕ್ಷೇತ್ರದಲ್ಲಿ (ಹಿಂದಿನ ಧಾರವಾಡ ಉತ್ತರ ಕ್ಷೇತ್ರ) 1952ರಿಂದ 1991ರ ವರೆಗೆ ಸುಮಾರು ಹತ್ತು ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೆ; 1996-2019ರ ವರೆಗೆ 7 ಬಾರಿ ಬಿಜೆಪಿ ಗೆದ್ದಿದೆ. ಈ ಕ್ಷೇತ್ರದಲ್ಲಿ ಮತದಾರರು ವ್ಯಕ್ತಿಗಿಂತ ಪಕ್ಷಕ್ಕೇ ಜೈ ಹೇಳಿರುವುದೇ ಹೆಚ್ಚು ಎನ್ನಬಹುದು.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಹಿತ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ಇಲ್ಲಿ ಪ್ರಸ್ತುತ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದು ಸಮಬಲ ಕಾಯ್ದುಕೊಂಡಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಓಟ ಮುಂದುವರಿಕೆ ಉತ್ಸಾಹದಲ್ಲಿ ಬಿಜೆಪಿ ಇದ್ದರೆ, ಕ್ಷೇತ್ರದ ಮೇಲೆ ಮತ್ತೆ ಪ್ರಭುತ್ವ ಸಾಧಿಸುವ ತವಕದಲ್ಲಿ ಕಾಂಗ್ರೆಸ್‌ ಇದೆ. ಈ ಕ್ಷೇತ್ರದ ಮತ್ತೂಂದು ವಿಶೇಷವೆಂದರೆ ಸರೋಜಿನಿ ಮಹಿಷಿ ಹಾಗೂ ಡಿ.ಕೆ.ನಾಯ್ಕರ್‌ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರೆ, ವಿಜಯ ಸಂಕೇಶ್ವರ ಮೂರು ಬಾರಿ ಗೆದ್ದಿದ್ದರು. ಸಂಸದ ಪ್ರಹ್ಲಾದ ಜೋಷಿ ಅವರು 2004-2019ರ ವರೆಗೆ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಈಗ ಅವರು ಐದನೇ ಬಾರಿ ಸ್ಪರ್ಧಿಸುವುದು ಬಹುತೇಕ ಖಚಿತ. ಜೋಷಿ ರಾಜ್ಯಸಭೆ ಸದಸ್ಯರಾಗಿ ಪಕ್ಷ ಸಂಘಟನೆಗೆ ಹೋಗುತ್ತಾರೆ, ಕ್ಷೇತ್ರ ಬದಲಾಯಿಸುತ್ತಾರೆ ಎಂಬ ಸುದ್ದಿ ಅಂತೆಕಂತೆಯಾಗಿ ಸುಳಿದಾಡಿತ್ತು. ಇದನ್ನು ಜೋಷಿಯವರೇ ತಳ್ಳಿ ಹಾಕಿದ್ದಾರೆ.

ಬಿಜೆಪಿ ವರಿಷ್ಠರ‌ ಅಚ್ಚರಿಯ ನಿಲುವು-ನಿರ್ಧಾರಗಳನ್ನು ಹೊರತು ಪಡಿಸಿದರೆ ಐದನೇ ಬಾರಿಗೂ ಜೋಷಿ ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಅವರನ್ನು ಬದಲಾಯಿಸಲು ಯಾವುದೇ ಸ್ಪಷ್ಟ ಕಾರಣಗಳಿಲ್ಲ ಎಂಬುದು ಬಹುತೇಕರ ಅನಿಸಿಕೆೆ. ಆದರೂ ಪಕ್ಷದ ವಲಯದಲ್ಲಿ ಈ ಬಾರಿ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆಯ ಮಾತು ಕೇಳಿಬರುತ್ತಿದೆ. ಹೀಗಾದರೆ ಒಂದಷ್ಟು ಮಂದಿ ಆಕಾಂಕ್ಷಿಗಳು ಮುನ್ನೆಲೆಗೆ ಬರಲಿದ್ದಾರೆ. ಜೋಷಿ ಅವರೇ ಅಭ್ಯರ್ಥಿ. ಒಂದು ವೇಳೆ ಅವರಿಗೆ ಟಿಕೆಟ್‌ ದೊರೆಯದಿದ್ದರೆ ನಾನು ಪ್ರಬಲ ಆಕಾಂಕ್ಷಿ ಎಂದು ಹಿರಿಯ ಕಾರ್ಯಕರ್ತ ಲಿಂಗರಾಜ ಪಾಟೀಲ್‌ ಬಹಿರಂಗವಾಗಿ ಹೇಳಿದ್ದಾರೆ.

ಕಾಂಗ್ರೆಸ್ಸಿಂದ ಯಾರು?
ಇನ್ನು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಆದರೆ, ಕ್ಷೇತ್ರದ ಮೇಲೆ ಬಿಗಿ ಹಿಡಿತ ಹೊಂದಿರುವ ಜೋಷಿ ವಿರುದ್ಧ ಸೆಣಸಾಟ ಸುಲಭವಲ್ಲ. ಗೆಲುವು ಸಾಧಿಸಬೇಕಾದರೆ ಎಲ್ಲ ರೀತಿಯಿಂದಲೂ ಪ್ರಬಲವೆನ್ನಿಸುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಚಿಂತನೆ ವರಿಷ್ಠರದ್ದಾಗಿದೆ. ಅದಕ್ಕಾಗಿಯೇ ಗೆಲ್ಲುವ ಕುದುರೆಗಾಗಿ ತಲಾಶೆ ನಡೆದಿದೆ.

Advertisement

ರಾಜಕೀಯ ಜೀವನವನ್ನೆಲ್ಲ ಬಿಜೆಪಿಯಲ್ಲಿ ಸವೆಸಿ ಈಗ ಕಾಂಗ್ರೆಸ್‌ನಲ್ಲಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸ್ಪರ್ಧೆಗೆ ಪಕ್ಷದಲ್ಲಿ ಒತ್ತಡವಿದೆಯಾದರೂ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಬಿಜೆಪಿಯಲ್ಲಿರುವ ಅವರ ಶಿಷ್ಯ, ಮಾಜಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಕಾಂಗ್ರೆಸ್‌ಗೆ ಬರಲಿದ್ದಾರೆ, ಅವರೇ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ ಹರಡಿದ್ದರೂ ಅಂತಹ ಸಾಧ್ಯತೆ ಕಾಣುತ್ತಿಲ್ಲ. ಮತ್ತೂಂದೆಡೆ ಪಕ್ಷದವರಿಗೇ ಟಿಕೆಟ್‌ ನೀಡಬೇಕು, ಹೊರಗಿನಿಂದ ಕರೆತರುವ, ವಲಸಿಗರಿಗೆ ಟಿಕೆಟ್‌ ನೀಡುವುದು ಬೇಡ ಎಂಬ ಒತ್ತಾಯವೂ ಕೇಳಿಬಂದಿದೆ.

ಶಾಸಕ ವಿನಯ್‌ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತಿದೆ. ವೀಕ್ಷಕರಿಗೆ ಒಟ್ಟು 17 ಅರ್ಜಿಗಳು ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಯುವ ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಸದಾನಂದ ಡಂಗನವರ, ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಮುಖಂಡರಾದ ವಿಜಯ ಕುಲಕರ್ಣಿ, ರಜತ ಉಳ್ಳಾಗಡ್ಡಿಮಠ, ಅನಿಲ ಕುಮಾರ ಪಾಟೀಲ್‌, ಬಸವರಾಜ ಗುರಿಕಾರ, ಶಾಕೀರ್‌ ಸನದಿ, ಶರಣಪ್ಪ ಕೊಟಗಿ, ಡಾ| ಮಯೂರ ಮೋರೆ, ಲೋಹಿತ ನಾಯ್ಕರ, ಡಾ| ಮಾಲಿ ಪಾಟೀಲ್‌, ಜಾಹೇದಾ ಖಾನ್‌, ರಾಜಶೇಖರ ಮೆಣಸಿನಕಾಯಿ, ತಾರಾದೇವಿ ವಾಲಿ, ಸುರೇಶ ಸವಣೂರು, ಮಹೆಬೂಬ್‌ ಬಾಷಾ ಅರ್ಜಿ ಸಲ್ಲಿಸಿದ್ದಾರೆ. ಜಾತಿ- ಇನ್ನಿತರ ದೃಷ್ಟಿಯಿಂದ ಶಿವಲೀಲಾ ಅವರೇ ಸ್ಪರ್ಧಿಸಿದರೆ ಉತ್ತಮ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಆದರೆ ಕೆಪಿಸಿಸಿ ಅಧ್ಯಕ್ಷರು ರಜತ್‌ ಉಳ್ಳಾಗಡ್ಡಿಮಠ ಪರ ವಹಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

 ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next