ಅದು 1992ರ ವಿಶ್ವಕಪ್. ಆಗ ತಾನೆ ನಿಷೇಧ ಮುಗಿಸಿ ಬಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಎದುರಾಳಿ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದ ಪಾಕಿಸ್ತಾನ. ಹರಿಣಗಳು ನೀಡಿದ್ದು 211 ರನ್ ಗಳ ಸುಲಭ ಗುರಿ. ಗೆಲುವಿನತ್ತ ಹೊರಟಿದ್ದ ಪಾಕ್ ತಂಡಕ್ಕೆ ಯುವ ಆಟಗಾರರ ಇಂಜಮಮ್ ಉಲ್ ಹಕ್ ಸಾಥ್ ನೀಡಿದ್ದರು.
135 ರನ್ ಗೆ ಪಾಕಿಸ್ತಾನ ಎರಡು ವಿಕೆಟ್ ಕಳೆದುಕೊಂಡಿತ್ತಷ್ಟೇ. ಸ್ಟ್ರೈಕ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಕ್ ಬ್ಯಾಕ್ ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಹೊಡೆದು ಒಂಟಿ ರನ್ ಕಸಿಯಲು ಓಡುತ್ತಾರೆ. ಆದರೆ ಮತ್ತೊಂದು ತುದಿಯಲ್ಲಿದ್ದ ನಾಯಕ ಇಮ್ರಾನ್ ಖಾನ್ ರನ್ ಓಡಲು ನಿರಾಕರಿಸುತ್ತಾರೆ. ಅಷ್ಟೇ ಸಾಕಿತ್ತು ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿದ್ದ ಆ ಫೀಲ್ಡರ್ ಗೆ. ಓಡಿ ಬಂದು ಚೆಂಡನ್ನು ಹಿಡಿದ ಆತ ಅಷ್ಟೇ ವೇಗದಲ್ಲಿ ಚಿಗರೆಯ ಮರಿಯಂತೆ ಹಾರಿ ವಿಕೆಟ್ ಮೇಲೆ ಎಗರಿಯಾಗಿತ್ತು. ಮೂರು ವಿಕೆಟ್ ಗಳು ನೆಲದ ಮೇಲೆ; ಇಂಜಮಮ್ ಉಲ್ ಹಕ್ ರನ್ ಔಟ್ ! ಆಗಷ್ಟೇ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಫೀಲ್ಡರ್ ಅಲ್ಲಿ ಎದ್ದು ನಿಂತಿದ್ದ . ಆತನೇ ಜೋನಾಥನ್ ನೈಲ್ ರೋಡ್ಸ್ ಅಥವಾ ಜಾಂಟಿ ರೋಡ್ಸ್.
1969ರ ಜುಲೈ 27ರಂದು ದಕ್ಷಿಣ ಆಫ್ರಿಕಾದ ಪೀಟರ್ ಮರಿಟ್ಜ್ ಬರ್ಗ್ ನಲ್ಲಿ ಜಾಂಟಿಯ ಜನನ. ಬಾಲ್ಯದಿಂದಲೇ ಜಾಂಟಿ ಆಟೋಟದಲ್ಲಿ ಉತ್ಸಾಹಿ. ಓಟದಲ್ಲಿ ಬಲು ಮುಂದು. ರಗ್ಬಿ ಆಡುತ್ತಿದ್ದವನಿಗೆ ಅಪಸ್ಮಾರದಿಂದ ( ಪಿಟ್ಸ್ ) ರಗ್ಬಿ ಆಡುವುದನ್ನು ಬಿಡಬೇಕಾಯಿತು. ಮುಂದೆ ಹಾಕಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಜಾಂಟಿ ರಾಷ್ಟ್ರೀಯ ತಂಡದ ಸದಸ್ಯನಾಗಿದ್ದ. ಒಲಿಂಪಿಕ್ಸ್ ತಂಡಕ್ಕೂ ಆಯ್ಕೆಯಾಗಿದ್ದ. ಆದರೆ ನಂತರ ಕ್ರಿಕೆಟ್ ಕಡೆಗೆ ಹೊರಳಿದ ಜಾಂಟಿ ವಿಶ್ವದ ಮನೆಮಾತಾದ.
ಆ ವಿಶ್ವಕಪ್ ಪಂದ್ಯದ ಇಂಜಮಮ್ ಉಲ್ ಹಕ್ ರನ್ ಔಟ್ ಕೇವಲ ಜಾಂಟಿ ರೋಡ್ಸ್ ನನ್ನು ಜನಪ್ರಿಯಗೊಳಿಸಿದ್ದಲ್ಲ. ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆ ಫೀಲ್ಡಿಂಗ್ ಕೂಡಾ ಮುಖ್ಯ ಎಂದು ಅರಿವಾಗಿತ್ತು. ಒಬ್ಬ ಫೀಲ್ಡರ್ ಕೂಡಾ ಒಂದು ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಎಂದು ಕ್ರಿಕೆಟ್ ವಿಶ್ವಕ್ಕೆ ತೋರಿಸಿಕೊಟ್ಟಿದ್ದೇ ಇದೇ ಜಾಂಟಿ ರೋಡ್ಸ್.
ಇಂಜಮಮ್ ಉಲ್ ಹಕ್ ರನ್ ಔಟ್ ಜಾಂಟಿ ರೋಡ್ಸ್ ರನ್ನು ಪ್ರಸಿದ್ದಿಗೊಳಿಸಿದ್ದು ನಿಜ. ಆದರೆ ಅದೊಂದೇ ಅಲ್ಲ. ನಂತರದ ದಿನಗಳಲ್ಲಿ ಕೇವಲ ತನ್ನ ಫೀಲ್ಡಿಂಗ್ ನಿಂದಾಗಿಯೇ ಜಾಂಟಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರು. ಕೆಲವು ಅದ್ಭುತ ಕ್ಯಾಚ್ ಗಳು, ನಂಬಲಸಾಧ್ಯ ವೇಗದ ರನ್ ಔಟ್ ಗಳು, ಓರ್ವ ಅತ್ಯದ್ಭುತ ಕ್ಷೇತ್ರರಕ್ಷಕನಾಗಿ ಜಾಂಟಿ ಮಿಂಚತೊಡಗಿದರು.
ಅಂದಮಾತ್ರಕ್ಕೆ ಜಾಂಟಿ ಕೇವಲ ಫೀಲ್ಡಿಂಗ್ ಮಾತ್ರವಲ್ಲ ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಗಳೆರಡರಲ್ಲೂ 35ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2003ರಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ ಜ್ಯಾಂಟಿ ಸದ್ಯ ಫೀಲ್ಡಿಂಗ್ ಕೋಚ್ ಆಗಿ, ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತದಲ್ಲಿ ಐಪಿಎಲ್ ಆರಂಭವಾದ ದಿನಗಳಿಂದಲೂ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿಗೆ ಭಾರತವೆಂದರೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ ಜಾಂಟಿ ದಂಪತಿ.
ವಿಶ್ವ ಕ್ರಿಕೆಟ್ ನ ಇತಿಹಾಸದಲ್ಲಿ ಜಾಂಟಿ ರೋಡ್ಸ್ ನಂತಹ ಮತ್ತೊಬ್ಬ ಫೀಲ್ಡರ್ ಇದುವರೆಗೆ ಬಂದಿಲ್ಲ. ಎಷ್ಟು ದೂರದವರೆಗೂ ಡೈವ್ ಹೊಡೆಯಲೂ ಹಿಂಜರಿಯದ ಜಾಂಟಿ, ಕೇವಲ ಫೀಲ್ಡರ್ ಆಗಿ ಅದೆಷ್ಟೋ ಜನರ ಫೇವರೇಟ್ ಆದವರು. ಅದಕ್ಕೆ ಇರಬೇಕು ಈಗಲೂ ಕ್ಷೇತ್ರರಕ್ಷಣೆ ಎಂದು ಬಂದಾಗ ಮೊದಲು ನೆನಪಿಗೆ ಬರುವ ಹೆಸರು ಜಾಂಟಿ ರೋಡ್ಸ್.
ಕೀರ್ತನ್ ಶೆಟ್ಟಿ ಬೋಳ