ಲಕ್ನೋ : ಪಕ್ಷ ಸಂಘಟನೆಯನ್ನು ಬಲಪಡಿಸುವುದೇ ನನ್ನ ಆದ್ಯತೆಯಾಗಿದೆ; 2019ರ ನಿರ್ಣಾಯಕ ಮಹಾ ಚುನಾವಣೆಗೆ ಮುನ್ನ ಮೈತ್ರಿ ಚಿಂತನೆ ನಡೆಸುವುದು ನನ್ನ ಆದ್ಯತೆಯಾಗಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಇಂದು ಬುಧವಾರ ಹೇಳಿರುವುದು ಕಾಂಗ್ರೆಸ್‌ಗೆ ಅನಿರೀಕ್ಷಿತ ಆಘಾತವನ್ನು ನೀಡಿದೆ.
ಕಾಂಗ್ರೆಸ್ ಜತೆಗೆ ಮೈತ್ರಿ ಮಾತುಕತೆ ನಡೆಸುವುದು ಕೇವಲ ವೇಸ್ಟ್ ಆಫ್ ಟೈಮ್ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಹೇಳಿರುವುದು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಕೊಟ್ಟಿರುವ ಹೊಡೆತ ಎಂದು ತಿಳಿಯಲಾಗಿದೆ.
2017 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಎಸ್‌ಪಿ ಮುಖ್ಯಸ್ಥ ಅಖೀಲೇಶ್, ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಜತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದರು.
2017ರ ಉ.ಪ್ರ. ವಿಧಾನಸಭಾ ಚುನಾವಣೆಯಲ್ಲಿ 403 ಸದಸ್ಯ ಬಲದ ಸದನದ 325 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಎಸ್‌ಪಿಗೆ 47 ಸ್ಥಾನ ಸಿಕ್ಕಿದ್ದರೆ ಕಾಂಗ್ರೆಸ್‌ಗೆ ಕೇವಲ 7 ಸ್ಥಾನಗಳು ಪ್ರಾಪ್ತವಾಗಿದ್ದವು.
“2019ರ ಮಹಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಾವೀಗ ನಮ್ಮ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುತ್ತಿದ್ದೇವೆ; ರಾಜ್ಯದ ಪ್ರತಿಯೊಂದು ಸ್ಥಾನಕ್ಕೆ ಸ್ಥಳೀಯ ಮಟ್ಟದಲ್ಲೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ; ಕಾಂಗ್ರೆಸ್ ಜತೆ ನಾವು ಯಾವುದೇ ರೀತಿಯ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಅಖೀಲೇಶ್ ಕಡ್ಡಿ ಮುರಿದ ಹಾಗೆ ಹೇಳಿದರು.