Advertisement
23ರ ಹರೆಯದ ಥೀಮ್ 7-6 (7-5), 6-3, 6-0 ಅಂತರದಿಂದ ಜೊಕೋವಿಕ್ ಅವರನ್ನು ಕೆಡವಿ ದರು. ಆರಂಭಿಕ ಸೆಟ್‌ನಿಂದಲೇ ತನ್ನ ಆಟವನ್ನು ಬಿರುಸುಗೊಳಿಸುತ್ತಲೇ ಹೋದ ಥೀಮ್, ಕೊನೆಯ ಸೆಟ್‌ನಲ್ಲಿ ಜೊಕೋಗೆ ಒಂದೂ ಅಂಕ ಬಿಟ್ಟುಕೊಡದೆ ತನ್ನ ತಾಕತ್ತು ಪರಿಚಯಿಸಿದ್ದರು. ಇದು ಥೀಮ್ ಕಾಣುತ್ತಿರುವ ಸತತ 2ನೇ ಫ್ರೆಂಚ್ ಓಪನ್ ಸೆಮಿಫೈನಲ್. ಕಳೆದ ವರ್ಷ ಇದೇ ಹಂತದಲ್ಲಿ ಅವರು ಜೊಕೋವಿಕ್‌ಗೆ ಶರಣಾಗಿ ಕೂಟದಿಂದ ಹೊರಬಿದ್ದಿದ್ದರು. ಆ ಸೋಲಿಗೆ ಸರಿಯಾಗಿ ಒಂದು ವರ್ಷದ ಬಳಿಕ ಸೇಡು ತೀರಿಸಿಕೊಂಡಿದ್ದಾರೆ. ಸರ್ಬಿ ಯನ್ ಆಟಗಾರನ ವಿರುದ್ಧ ಥೀಮ್ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಹಿಂದಿನ ಐದೂ ಪಂದ್ಯಗಳಲ್ಲಿ ಅವರು ಸೋಲನುಭವಿಸಿದ್ದರು.
ಡೊಮಿನಿಕ್ ಥೀಮ್ ಸೆಮಿಫೈನಲ್‌ನಲ್ಲಿ ಆವೆಯಂಗಳದ ಕಿಂಗ್, ಸ್ಪೇನಿನ ರಫೆಲ್ ನಡಾಲ್ ಸವಾಲನ್ನು ಎದುರಿಸಬೇಕಿದೆ. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನಿನವರೇ ಆದ ಕರೆನೊ ಬುಸ್ಟ ಗಾಯಾಳಾಗಿ ಹಿಂದೆ ಸರಿದುದರಿಂದ ನಡಾಲ್ ಹಾದಿ ಸುಗಮಗೊಂಡಿತು. ಆಗ ನಡಾಲ್ 6-2, 2-0 ಅಂತರದ ಮುನ್ನಡೆಯಲ್ಲಿದ್ದರು. ಹಾಲೆಪ್, ಪ್ಲಿಸ್ಕೋವಾ ಗೆಲುವು
ವನಿತೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ರೊಮೇನಿಯಾದ ತೃತೀಯ ಶ್ರೇಯಾಂಕಿತೆ ಸಿಮೋನಾ ಹಾಲೆಪ್ ಮತ್ತು ದ್ವಿತೀಯ ಶ್ರೇಯಾಂಕದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಸಿಮೋನಾ ಹಾಲೆಪ್ ಭಾರೀ ಸ್ಪರ್ಧೆಯೊಡ್ಡಿದ ಉಕ್ರೇನಿನ 5ನೇ ಶ್ರೇಯಾಂಕದ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರನ್ನು 3-6, 7-6 (8-6), 6-0 ಅಂತರದಿಂದ ಮಣಿಸಿದರು. ಕ್ಯಾರೋಲಿನಾ ಪ್ಲಿಸ್ಕೋವಾ 7-6 (7-3), 6-4 ಅಂತರದಿಂದ ಫ್ರಾನ್ಸ್‌ನ 28ನೇ ಶ್ರೇಯಾಂಕಿತೆ ಕ್ಯಾರೋಲಿನಾ ಗಾರ್ಸಿಯಾ ಅವರನ್ನು ಪರಾಭವಗೊಳಿಸಿದರು.