Advertisement
ಕೋಟ: ಅವಿಭಜಿತ ದ.ಕ. ಜಿಲ್ಲೆಯ ಅತಿ ಹಳೆಯ ಹಾಲು ಉತ್ಪಾದಕರ ಸಂಘಗಳಲ್ಲಿ ಹಳ್ಳಾಡಿ ಸಂಘವೂ ಒಂದು. ಶಿರಿಯಾರ ಸಮೀಪದ ಹಳ್ಳಾಡಿಯ ಈ ಸಂಘ 1975 ಜೂ. 30ರಂದು ಕೆನರಾ ಮಿಲ್ಕ್ ಯೂನಿಯನ್(ಕೆಮುಲ್) ಅಧೀನದಲ್ಲಿ ಸ್ಥಾಪನೆಗೊಂಡಿದ್ದು ವಿಶಿಷ್ಟ ಸಾಧನೆ ಮಾಡಿದೆ. ಈಗ ಇದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕೆನರಾ ಮಿಲ್ಕ್ ಯೂನಿಯನ್ ಹುಟ್ಟು ವುದಕ್ಕಿಂತ ಮೊದಲೇ ಇಲ್ಲಿನ ಶಿರಿಯಾರ ಪೇಟೆಯಲ್ಲಿ ಹಾಲು ಉತ್ಪಾದಕರ ಕೇಂದ್ರದ ಮಾದರಿಯ ವ್ಯವಸ್ಥೆಯೊಂದು ಖಾಸಗಿಯಾಗಿ ಕಾರ್ಯನಿರ್ವಹಿಸುತಿತ್ತು ಹಾಗೂ ಜನರು ಪ್ರತಿದಿನ ಇಲ್ಲಿಗೆ ಹಾಲು ಸರಬರಾಜು ಮಾಡುತ್ತಿದ್ದರು. ಅದನ್ನು ಸ್ಥಳೀಯ ಹೊಟೇಲ್‌ಗಳಿಗೆ ಮಾರಾಟ ಮಾಡಲಾಗುತಿತ್ತು. ಇದನ್ನು ನೋಡಿದ ಊರಿನವರು ವ್ಯವಸ್ಥಿತವಾದ ಹಾಲು ಉತ್ಪಾದಕರ ಸಂಘವನ್ನು ಸ್ಥಾಪಿಸಿದಲ್ಲಿ ಜನರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡಬಹುದು ಎನ್ನುವ ನಿರ್ಧಾರಕ್ಕೆ ಬಂದಿದ್ದು ಹಳ್ಳಾಡಿ ಹಾಲು ಉತ್ಪಾದಕರ ಸಂಘವನ್ನು ಹುಟ್ಟುಹಾಕಿದರು. ಊರಿನ ಗಣ್ಯರಾದ ನೈಲಾಡಿ ದಿ| ಭುಜಂಗ ಶೆಟ್ಟಿಯವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು. ಸ್ಥಳೀಯರಾದ ಎನ್.ನಾರಾಯಣ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ ಮುಂತಾದವರು ಅಂದು ಇವರಿಗೆ ಸಾಥ್ ನೀಡಿದ್ದರು. ಮನೆ-ಮನೆಗೆ ತಿರುಗಿ ಹೈನುಗಾರಿಕೆಯ ಕುರಿತು ಮಾಹಿತಿ ನೀಡಿ 47 ಮಂದಿ ಸದಸ್ಯರೊಂದಿಗೆ ಸಂಸ್ಥೆ ಆರಂಭಿಸಲಾಗಿತ್ತು.ಆಗ ದಿನವೊಂದಕ್ಕೆ ಕೇವಲ 33 ಲೀ. ಹಾಲು ಪೂರೈಕೆಯಾಗುತಿತ್ತು. ದಿ| ರಾಮಚಂದ್ರ ಕೆದ್ಲಾಯರು ಆರಂಭದಿಂದ 38 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸಂಘವನ್ನು ಮುನ್ನಡೆಸಿದ್ದರು ಹಾಗೂ ನರಸಿಂಹ ಕಾಮತ್ ಸಹಾಯಕರಾಗಿ ಕೈಜೋಡಿಸಿದ್ದರು ಅಂದು ಏಳೆಂಟು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಡೈರಿ ಇರಲಿಲ್ಲ. ಹೀಗಾಗಿ ಐದಾರು ಕಿ.ಮೀ. ದೂರದಿಂದ ಜನ ಇಲ್ಲಿಗೆ ಹಾಲು ತರುತ್ತಿದ್ದರು. ಆದರೆ ಇದೀಗ ಅದೇ ವ್ಯಾಪ್ತಿಯಲ್ಲಿ ಐದು ಡೈರಿಗಳಿದೆ. ಆ ಕಾಲದಲ್ಲಿ ಒಂದೆರಡು ಲೀಟರ್ ಹಾಲು ಪೂರೈಕೆ ಮಾಡುವಾತನೇ ದೊಡ್ಡ ಹೈನುಗಾರನಾಗಿದ್ದ.
Related Articles
2002ರಲ್ಲಿ ಸಂಘ ಹೊಸ ಕಟ್ಟಡವನ್ನು ನಿರ್ಮಿಸಿದ್ದು ಅನಂತರ ಸಭಾಭವನವನ್ನು ನಿರ್ಮಿಸಲಾಯಿತು. ಊರಿನ ಕಾರ್ಯಕ್ರಮಗಳಿಗೆ ಈ ಸಭಾಭವನವನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ.
Advertisement
ಜನಾರ್ದನ ಪೂಜಾರಿಯವರು ಕೇಂದ್ರ ಸಚಿವರಾಗಿದ್ದ ಸಂದರ್ಭ ಜಾರಿಗೆ ತಂದ ಸಾಲ ಮೇಳ ಯೋಜನೆ ಕುರಿತು ಗ್ರಾಮೀಣ ಪ್ರದೇಶದ ಜನರಿಗೆ ಮಾಹಿತಿ ನೀಡುವಲ್ಲಿ ಈ ಸಂಸ್ಥೆ ಸಹಕರಿಸಿತ್ತು ಹಾಗೂ ಜಾನುವಾರು ಖರೀದಿಗೆ ಪ್ರೋತ್ಸಾಹ ನೀಡಿದ್ದರಿಂದ ಸಾಕಷ್ಟು ಮಂದಿ ಹಸುಗಳನ್ನು ಖರೀದಿಸಿದ್ದರು. 1985-90ರ ದಶಕದ ಅನಂತರ ಹೈನುಗಾರಿಕೆ ಅಭಿವೃದ್ಧಿ ಹೊಂದತೊಡಗಿತು ಹಾಗೂ ಡೈರಿಗೆ ಹಾಲು ಪೂರೈಕೆ ಮಾಡುವವರ ಸಂಖ್ಯೆ ಹೆಚ್ಚಿತು.
ಪ್ರಸ್ತುತ ಸ್ಥಿತಿಗತಿಪ್ರಸ್ತುತ ಸಂಸ್ಥೆಯಲ್ಲಿ 313ಮಂದಿ ಸದಸ್ಯರಿದ್ದು ಪ್ರತಿದಿನ 450 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅವಿನಾಶ್ ಗಾವಳಿ ಅಧ್ಯಕ್ಷರಾಗಿ ಹಾಗೂ ಸತೀಶ್ ಭಂಡಾರಿ ಕಾರ್ಯದರ್ಶಿಯಾಗಿದ್ದಾರೆ. ಸಂಘದ ಸದಸ್ಯೆ ರೂಪಶ್ರೀ ಶೆಟ್ಟಿಯವರು ಮಿನಿಡೈರಿಯನ್ನು ನಿರ್ವಹಿಸುತ್ತಿದ್ದು ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಹೈನುಗಾರಿಕೆ ಬಗ್ಗೆ ಹೇಳುವು ದೆಂದರೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಚಕ್ರ. ಈ ದಿಸೆಯಲ್ಲೇ ನಮ್ಮ ಕ್ಷೀರಕಥನ. ಜಿಲ್ಲೆಯ ಅತ್ಯಂತ ಹಿರಿಯ ಸಂಘಗಳಲ್ಲಿ ಒಂದು ಎನ್ನುವಂತದ್ದು ನಮಗೆ ಹೆಮ್ಮೆ ತರುವ ವಿಚಾರ. ಸಂಸ್ಥೆಯ ಸಮಾಜಮುಖೀ ಚಟುವಟಿಕೆಗಳನ್ನು ಇದೇ ರೀತಿ ಮುಂದುವರಿಸಲು ಒತ್ತು ನೀಡಲಾಗುವುದು.
– ಅವಿನಾಶ್ ಗಾವಳಿ,
ಅಧ್ಯಕ್ಷರು ಅಧ್ಯಕ್ಷರು: ದಿ| ನೈಲಾಡಿ ಭುಜಂಗ ಶೆಟ್ಟಿ, ನವಿನ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಹೆಗ್ಡೆ, ಭಾಸ್ಕರ್ ಅಡಿಗ ಜಿ., ಬಿ.ನರಸಿಂಹ ಶೆಟ್ಟಿ, ಹಳ್ಳಾಡಿ ಶ್ರೀನಿವಾಸ ಕೆದ್ಲಾಯ, ಎನ್.ಕರುಣಾಕರ ಶೆಟ್ಟಿ, ಅವಿನಾಶ್ ಗಾವಳಿ.
ಕಾರ್ಯದರ್ಶಿಗಳು:
ದಿ| ರಾಮಚಂದ್ರ ಕೆದ್ಲಾಯ ಹಾಗೂ ಪ್ರಸ್ತುತ ಸತೀಶ್ ಭಂಡಾರಿ - ರಾಜೇಶ್ ಗಾಣಿಗ ಅಚ್ಲಾಡಿ