Advertisement

ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಿ: ಶೆಟ್ಟರ

08:45 AM Jul 21, 2020 | Suhan S |

ಧಾರವಾಡ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಲಾಕ್‌ಡೌನ್‌ ಹಾಗೂ ಇತರ ಬಿಗಿಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಪ್ರಯತ್ನಗಳಿಗೆ ಸಾರ್ವಜನಿಕರ ಸಹಕಾರ ಮುಖ್ಯ. ನಾಗರಿಕರು ಸ್ವಯಂ ನಿರ್ಬಂಧ ಹಾಕಿಕೊಂಡು ಅನಗತ್ಯ ಸಂಚಾರ ಕೈಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ನಿಂದ ಗುಣಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಳ ಸಮಾಧಾನದ ಸಂಗತಿ. ಜನಜಾಗೃತಿಗಾಗಿ ಸಾಮಾಜಿಕ ಮಾಧ್ಯಮ, ಫ್ಲೆಕ್ಸ್‌, ಬೀದಿನಾಟಕ, ಆಡಿಯೋ ಕ್ಲಿಪ್‌ಗ್ಳು, ಧ್ವನಿವರ್ಧಕ ಬಳಕೆ ಮುಂತಾದ ಸಂಪರ್ಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರಮ ವಹಿಸಬೇಕು ಎಂದರು.

ಅಶೋಕ ಆಸ್ಪತ್ರೆ ಮಾದರಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿ ಅರ್ಧದಷ್ಟು ಹಾಸಿಗೆಗಳನ್ನು ಒದಗಿಸಿವೆ. ಈಗಾಗಲೇ 193ಕ್ಕಿಂತ ಹೆಚ್ಚು ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಅಶೋಕ ಆಸ್ಪತ್ರೆ ಮಾಲೀಕರು ಕೋವಿಡ್‌-19 ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ಪೂರ್ಣಪ್ರಮಾಣದಲ್ಲಿ ನೀಡಲು ಮುಂದೆ ಬಂದಿದ್ದಾರೆ. ಇದು ಉತ್ತಮ ಬೆಳವಣಿಗೆ. ಎಲ್ಲ ವೈದ್ಯರು ಸ್ವಯಂ ಪ್ರೇರಣೆಯಿಂದ ಕೊರೊನಾ ಚಿಕಿತ್ಸೆ ಹಾಗೂ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಏಳು ಆಂಬ್ಯುಲೆನ್ಸ್‌ ಖರೀದಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಕೋವಿಡ್‌-19 ತಪಾಸಣೆಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಸೋಂಕಿತರನ್ನು ತಕ್ಷಣ ನಿಗದಿತ ಆಸ್ಪತ್ರೆಗೆ ದಾಖಲಿಸಲು ಸಾಕಷ್ಟು ಪ್ರಮಾಣದಲ್ಲಿ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿದ್ದು, ಹೆಚ್ಚುವರಿಯಾಗಿ ಏಳು ಆಂಬ್ಯುಲೆನ್ಸ್‌ ಖರೀದಿಸಲು ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರಾಧಿಕಾರಿಗಳೇ ಹೊಣೆ: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಲು ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್‌ ಹಾಗೂ ಎಡಿಎಲ್‌ಆರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸೀಲ್‌ಡೌನ್‌ ಪ್ರದೇಶದ ನಿಯಮಗಳ ಪಾಲನೆಗೆ ಪ್ರತಿ ಸೀಲ್‌ಡೌನ್‌ ಪ್ರದೇಶಕ್ಕೆ ಇನ್ಸಿಡೆಂಟ್‌ ಕಮಾಂಡರ್‌ ನೇಮಕ ಮಾಡಲಾಗಿದೆ. ಅಲ್ಲಿ ನಿಯಮಗಳ ಉಲ್ಲಂಘನೆ, ಸಾರ್ವಜನಿಕರ ಸಂಚಾರ ಕುರಿತು ದೂರುಗಳು ಬಂದಲ್ಲಿ ಇನ್ಸಿಡೆಂಟ್‌ ಕಮಾಂಡರ್‌ ಹಾಗೂ ಅಲ್ಲಿನ ಕ್ಷೇತ್ರ ಅಧಿಕಾರಿಗಳನ್ನು ಜವಾಬ್ದಾರಿಗೊಳಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಡಿಸಿ ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಆದ್ದರಿಂದ ಇತರ ಜಿಲ್ಲೆಗಳಿಂದ ಬರುವ ಗಂಟಲುದ್ರವ ಮಾದರಿಗಳನ್ನು ಸ್ವೀಕರಿಸದೆ ಮರಳಿ ಆಯಾ ಜಿಲ್ಲೆಗೆ ಕಳುಹಿಸಬೇಕು. ಧಾರವಾಡ ಜಿಲ್ಲೆಯ ಗಂಟಲುದ್ರವ ಮಾದರಿಗಳ ಪರೀಕ್ಷೆ ನಿಧಾನವಾಗುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಆಯಾ ಜಿಲ್ಲೆಯಲ್ಲಿಯೇ ಪರೀಕ್ಷೆ ಮಾಡಿ ಫಲಿತಾಂಶ ನೀಡುವಂತೆ ಸೂಚನೆ ನೀಡಬೇಕು ಎಂದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಜಿಲ್ಲೆಯ ಪ್ರಯೋಗಾಲಯಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಟೆಸ್ಟ್‌ಗಳ ಸಂಖ್ಯೆ ಹೆಚ್ಚಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿಗೆ ಆದ್ಯತೆ ನೀಡಬೇಕು. ಪ್ರತಿ ಖಾಸಗಿ ಆಸ್ಪತ್ರೆ ಮುಂದೆ ಹೆಲ್ಪ್ಡೆಸ್ಕ್ ಆರಂಭಿಸಿ, ಹಾಸಿಗೆ ಲಭ್ಯತೆ ಬಗ್ಗೆ ಫಲಕ ಹಾಕಲು ಸೂಚಿಸಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಜಾಗೃತಿ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು. ಶಾಸಕ ಅಮೃತ ದೇಸಾಯಿ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಬಗ್ಗೆ ನಿಖರ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ. ತಪ್ಪು ಮಾಹಿತಿ ನೀಡಿದರೆ ಜನರು ಗೊಂದಲಕ್ಕೆ ಒಳಪಡುತ್ತಾರೆ ಎಂದರು.

ಹು-ಧಾ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಎಸ್ಪಿ ವರ್ತಿಕಾ ಕಟಿಯಾರ್‌, ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next