ಮದ್ದೂರು: ಆತಗೂರು ಹೋಬಳಿಯ 15ಕ್ಕೂ ಹೆಚ್ಚು ಕೆರೆಗಳಲ್ಲಿ ನೀರಿಲ್ಲದೆ ಬರಿದಾಗಿದ್ದು, ಅವುಗಳ ಪೈಕಿ 1200 ವರ್ಷಗಳ ಇತಿಹಾಸ ಹೊಂದಿರುವ 700 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ತೈಲೂರು ಕೆರೆ ಪ್ರಮುಖವಾದುದು. ಆದರೆ, ಕೆರೆಯಲ್ಲಿ ನೀರಿಲ್ಲದೆ ಬಣಗುಡುತ್ತಿದೆ.
ಒತ್ತುವರಿ ತೆರವು ಕಾರ್ಯ ಸ್ಥಗಿತ: ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶ ಒತ್ತುವರಿಯಾಗಿದೆ. ಹಿಂದೊಮ್ಮೆ ಒತ್ತುವರಿ ತೆರವಿಗೆ ಕೈಗೊಂಡಿದ್ದ ಕಾರ್ಯಾಚರಣೆ ಅರ್ಧಕ್ಕೆ ನಿಂತಿದೆ. ಕೆರೆಯಂಗದ ರೈತರು ಕೆರೆ ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ.
Advertisement
ತೈಲೂರು, ರುದ್ರಾಕ್ಷಿಪುರ, ಮಾದನಾಯಕನಹಳ್ಳಿ ಗ್ರಾಮ ವ್ಯಾಪ್ತಿಯ 700 ಎಕರೆ ವಿಸ್ತೀರ್ಣ, 584 ಅಚ್ಚುಕಟ್ಟು ಪ್ರದೇಶದ ಹಾಗೂ 97.33 ಎಂ.ಸಿ.ಎಫ್ಟಿ ನೀರು ಸಾಮರ್ಥ್ಯ ಹೊಂದಿರುವ ತೈಲೂರು ಕೆರೆ ಸ್ಥಳೀಯ ರೈತರ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡು ಗುಬ್ಬಚ್ಚಿಯಂತಾಗಿದೆ.
Related Articles
Advertisement
ನದಿ ದಡದಲ್ಲಿದ್ದರೂ ನೀರಿಲ್ಲ: ಶಿಂಷಾನದಿ ದಡದಲ್ಲಿರುವ ತೈಲೂರು ಕೆರೆ ನದಿಯ ಕೂಗಳತೆ ದೂರದಲ್ಲಿದ್ದರೂ ಬೇಸಿಗೆಯಲ್ಲಿ ಬರಿದಾಗು ವುದು ದುರಂತ. ಜನಪ್ರತಿನಿಧಿಗಳು ಚುನಾವಣೆ ವೇಳೆ ಕೆರೆ ತುಂಬಿಸುವ, ಸಂರಕ್ಷಿಸುವ ಪೊಳ್ಳು ಭರವಸೆಗಳನ್ನು ಕೊಟ್ಟು ಕೊಟ್ಟು ಸಾಕಾಗಿದೆ. ಇನ್ನು ಅಧಿಕಾರಿಗಳು ವಿಷಯವಂತೂ ಹೇಳುವುದೇ ಬೇಡ. ಅವರವರ ಕೆಲಸವನ್ನೇ ಅವರು ಸಕ್ರಮವಾಗಿ ನಿರ್ವಹಿಸುವುದಿಲ್ಲ. ಇನ್ನು ಇಂತಹ ಅಭಿವೃದ್ಧಿ ಕೆಲಸಗಳು ಅವರಿಗೆಲ್ಲಿಂದ ಕಾಣಬೇಕು.
ಕುಸಿದ ಅಂತರ್ಜಲ ಮಟ್ಟ: ಸಮೀಪದಲ್ಲೇ ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಸಾವಿರಾರು ಕಿ.ಮೀ. ದೂರದಿಂದ ಸಂತಾನೋತ್ಪತ್ತಿಗಾಗಿ ವಿವಿಧ ಪ್ರಭೇದದ ಪಕ್ಷಿಗಳು ದೇಶವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತವೆ. ನವಂಬರ್ ತಿಂಗಳಿಂದ ಜೂನ್ ಮಾಸಾಂತ್ಯದವರೆಗೆ ತಂಗುವ ಪಕ್ಷಿಗಳಿಗೆ ಕುಡಿಯುವ ನೀರು, ಆಹಾರ ಲಭ್ಯವಿಲ್ಲದೆ ಇತ್ತೀಚೆಗೆ ತುಂಬಾ ಸಮಸ್ಯೆಯಾಗಿದೆ.
ಇದರೊಟ್ಟಿಗೆ ತೈಲೂರು ಕೆರೆ ವ್ಯಾಪ್ತಿಯ ಸುಮಾರು 8 ಗ್ರಾಮಗಳಿಗೂ ಹೆಚ್ಚು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಈ ಹಿಂದೆ ಕೊರೆಸಿದ್ದ ಕೊಳವೆ ಬಾವಿಗಳು ನಿಷ್ಕ್ರಿಯವಾಗಿವೆ. ಕೃಷಿ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಜಾನುವಾರುಗಳಿಗೆ ಬರದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನಿರ್ಮಿಸಿರುವ ತೊಟ್ಟಿಗಳ ನೀರೇ ಆಧಾರವಾಗಿದೆ.
ಕೆಆರ್‌ಎಸ್ ನೀರು ಹರಿಸಲು ವಿಫಲ: ಬೇಸಿಗೆಯಲ್ಲಿ ಎಂದೂ ತೈಲೂರು ಕೆರೆಯಲ್ಲಿ ನೀರಿದ್ದ ಉದಾಹರಣೆಗಳೇ ಇಲ್ಲ. ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯ ನೀರು ಕೊನೆಯ ಭಾಗಕ್ಕೆ ಹರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದಾಗಿ ರೈತರು ಕೇವಲ ವರ್ಷಕ್ಕೆ ಒಂದೇ ಬೆಳೆ ಬೆಳೆಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಶಿಂಷಾನದಿಗೆ ಇಗ್ಗಲೂರು ಬಳಿ ನಿರ್ಮಿಸಿರುವ ಎಚ್.ಡಿ. ದೇವೇಗೌಡ ಅಣೆಕಟ್ಟೆ (ಬ್ಯಾರೇಜ್)ಯಿಂದ ನೆರೆಯ ರಾಮನಗರ ಜಿಲ್ಲೆಯ ಕಣ್ವ ಜಲಾಶಯ ಸೇರಿದಂತೆ ಚನ್ನಪಟ್ಟಣ ತಾಲೂಕಿನ ನೂರಕ್ಕೂ ಹೆಚ್ಚು ಕೆರೆಗಳಿಗೆ ಕಣ್ವ ಏತ ನೀರಾವರಿ ಯೋಜನೆಯಡಿ ಜಲ ಮರುಹೂರಣ ಕಾಯಕ ಮುಂದುವರಿದಿದೆ. ತಾಲೂಕಿನ ಕೆರೆಗಳು ಶಾಪ ವಿಮೋಚನೆಗಾಗಿ ಕಾದಿರುವುದು ಮಾತ್ರ ದುರಂತವೇ ಸರಿ.
ಹೂಳೆತ್ತುವ ಕೆಲಸವಾಗಲಿ: ತೈಲೂರು ಕೆರೆ ಒತ್ತುವರಿ ಜತೆಗೆ ಹೂಳು ತುಂಬಿಕೊಂಡಿದೆ. ಕೆರೆ ಏರಿ ಸುತ್ತೆಲ್ಲಾ ಬೆಳೆದಿರುವ ಕಳೆಸಸ್ಯಗಳು, ಗಿಡಗಂಟಿಗಳು ಇಲ್ಲಿನ ಅವ್ಯವಸ್ಥೆ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಕೆರೆಯ ಸಂರಕ್ಷಣೆ ಬಗ್ಗೆ ರೈತರು, ಸ್ಥಳೀಯರೂ ಗಮನಹರಿಸದೇ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಕೆರೆ ಹಾಗೂ ನೀರು ನಿರ್ವಹಣೆಗೆಂದೇ ಇದ್ದ ನೀರುಗಂಟಿಗಳನ್ನು ಒಕ್ಕಲೆಬ್ಬಿಸಿದ್ದು, ಕೆರೆ ಏರಿ, ತೂಬು, ಕಸ ವಿಲೇವಾರಿ ಮುಂತಾದ ಕಾರ್ಯಗಳು ನನೆಗುದಿಗೆ ಬಿದ್ದಿದೆ. ಒಮ್ಮೊಮ್ಮೆ ಮಂಜೂರಾಗುವ ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ನಿಂತು ಕೆರೆಗಳ ಅವ್ಯವಸ್ಥೆಗೆ ಕಾರಣವಾಗಿದೆ.
ಅಂತರ್ಜಲ ಮಟ್ಟ ಕುಸಿತದಿಂದ ಈ ಹಿಂದೆ ಕೊರೆಸಿದ್ದ ಕೊಳೆವೆ ಬಾವಿಗಳು ಬತ್ತಿಹೋಗಿವೆ. ಪೂರ್ವಿಕರು ನಿರ್ಮಿಸಿರುವ ಕೆರೆಕಟ್ಟೆಗಳ ಪುನಶ್ಚೇತನಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಸ್ಥಳೀಯ ರೈತರು ಸ್ವಯಂಪ್ರೇರಿತರಾಗಿ ಮುಂದಡಿ ಇಟ್ಟು ಅವಸಾನದ ಅಂಚಿನಲ್ಲಿರುವ ಕೆರೆಗಳ ಪುನರುಜೀವನಕ್ಕೆ ಕೈಜೋಡಿಸಬೇಕಿದೆ.
ಅರ್ಧಕ್ಕೆ ನಿಂತ ತೈಲೂರುಕೆರೆ ಪ್ರವಾಸೋದ್ಯಮ ಅಭಿವೃದ್ಧಿ
ರಾಜ್ಯ ಸರ್ಕಾರದ ನೆರವಿನೊಂದಿಗೆ ಪ್ರವಾಸೋದ್ಯಮ ಇಲಾಖೆ ತೈಲೂರು ಕೆರೆ ಅಭಿವೃದ್ಧಿಗೆ ತಯಾರಿಸಿದ ನೀಲನಕ್ಷೆ ಸದನದಲ್ಲಿಯೂ ಪ್ರಸ್ತಾಪಗೊಂಡು ದೋಣಿ ವಿಹಾರ, ಬೋಟಿಂಗ್ ವ್ಯವಸ್ಥೆ, ನಡುಗದ್ದೆ ವೀಕ್ಷಣೆ ಮತ್ತಿತರ ಯೋಜನೆಗಳ ಅನುಷ್ಠಾನಕ್ಕೆ ಮುಂದಾದರು. ಮತ್ತೆ ಅರ್ಧಕ್ಕೆ ಕೈಬಿಟ್ಟರು. ಮದ್ದೂರು ಕ್ಷೇತ್ರದ ಶಾಸಕಿಯಾಗಿದ್ದ ಕಲ್ಪನಾ ಸಿದ್ದರಾಜು, ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ರಾಮಕೃಷ್ಣ ತೈಲೂರು ಕೆರೆ ಯನ್ನು ಪ್ರವಾಸಿ ತಾಣವಾಗಿಸಲು ಯತ್ನಿಸಿ ಅರ್ಧಕ್ಕೆ ಕೈಬಿಟ್ಟರು. ತೈಲೂರು ಕೆರೆ ಕೆಳ ಪ್ರದೇಶದಲ್ಲಿ ಆಲೂರು, ನೀಲಕಂಠನಹಳ್ಳಿ, ಕಬ್ಟಾರೆ, ಹಾಗಲಹಳ್ಳಿ ಗ್ರಾಮದ ಕೆರೆಗಳಿಗೆ ಐದು ದಶಕಗಳ ಹಿಂದೆಯೇ ಸಂಪರ್ಕ ಕಲ್ಪಿಸಿದ್ದರು. ಮೂಲ ನೀರಿನ ಸೆಲೆಯೇ ತೈಲೂರು ಕೆರೆಯಾಗಿದ್ದರೂ ಮಳೆ ವೈಫಲ್ಯ, ಸತತ ಬರಗಾಲ ಈ ಎಲ್ಲಾ ಯೋಜನೆಗಳನ್ನು ಬುಡಮೇಲು ಮಾಡಿದೆ.
● ಎಸ್.ಪುಟ್ಟಸ್ವಾಮಿ