Advertisement

ಜಲಾಮೃತ ಯೋಜನೆ ಯಶಸ್ವಿಗೆ ಕೈಜೋಡಿಸಿ

01:59 PM Jul 31, 2019 | Team Udayavani |

ಕೋಲಾರ: ರಾಜ್ಯ ಸರ್ಕಾರವು ಪ್ರಸಕ್ತ ವರ್ಷವನ್ನು ಜಲವರ್ಷ ಎಂದು ಘೋಷಿಸಿ ಜಲಾಮೃತ ಯೋಜನೆ ಯನ್ನು ಜಾರಿಗೊಳಿಸಿದೆ. ಇದರಡಿ ಜಿಲ್ಲೆಗಳನ್ನು ಹಸರೀಕರಣ ಮಾಡಲಾಗುತ್ತಿದೆ. ಇದರ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಉಮಾಮಹದೇವನ್‌ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡಬೇಕಾದುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಸರ್ಕಾರಿ ಜಾಗದಲ್ಲಿ ಸಸಿ ನೆಡಿ: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಾ ಸಾಗಿದೆ. ಇದು ಮುಂದಿನ ಪೀಳಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಹಾಗಾಗಿ ಹೆಚ್ಚು ಹೆಚ್ಚು ಸಸಿ ನೆಡುವ ಮೂಲಕ ವಾತಾವರಣದಲ್ಲಿ ಹೆಚ್ಚಾಗುತ್ತಿರುವ ತಾಪಮಾನವನ್ನು ಕಡಿಮೆ ಮಾಡುವ ಕೆಲಸವನ್ನು ಮಾಡಬೇಕು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು ಹಾಗೂ ಹಾಸ್ಟೆಲ್ಗಳ ಬಳಿ ಇರುವ ಖಾಲಿ ಜಾಗದಲ್ಲಿ ತಪ್ಪದೆ ಸಸಿಗಳನ್ನು ನೆಡುವ ಕೆಲಸ ಆಗಬೇಕು ಎಂದು ಸೂಚಿಸಿದರು.

ಅಪೌಷ್ಟಿಕತೆ ನಿವಾರಿಸಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಅಪೌಷ್ಟಿಕತೆಗೆ ಒಳಗಾಗುವಂತಾಗಿದೆ. ಪೌಷ್ಟಿಕವಾದ ಆಹಾರ ಸೇವನೆ ಮಾಡುವುದು ಅಗತ್ಯವಾಗಿದೆ. ಹಾಗಾಗಿ ವಿದ್ಯಾರ್ಥಿ ನಿಲಯಗಳ ಬಳಿ ಸ್ಥಳವಾಕಾಶ ಇರುವ ಕಡೆಗಳಲ್ಲಿ ಹಣ್ಣು ಬಿಡುವ ಸಸಿಗಳನ್ನು ನಾಟಿ ಮಾಡಿಸು ವುದು ಸೂಕ್ತ. ಇದರ ಜೊತೆಗೆ ಅಡುಗೆ ತಯಾರಿಕೆಗೆ ಅಗತ್ಯ ತರಕಾರಿಗಳಲ್ಲಿ ಅಲ್ಲಿಯೇ ಬೆಳೆದುಕೊಳ್ಳುವ ಕೆಲಸವಾದರೆ ಪೌಷ್ಟಿಕತೆ ಹೆಚ್ಚಾಗಲಿದೆ. ಹಾಗಾಗಿ ಇಂತಹ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಉತ್ತಮ ಆಹಾರ: ರಾಜ್ಯದಲ್ಲಿ ಸುಮಾರು 6 ಸಾವಿರ ಹಾಸ್ಟೆಲ್ಗಳಿದ್ದು, ಇವುಗಳ ಬಳಿ ಹಣ್ಣು ಮತ್ತು ತರಕಾರಿ ಗಳನ್ನು ಬೆಳೆಯುವ ಸಸಿಗಳನ್ನು ನೆಟ್ಟಿದ್ದೇ ಆದರೆ, ಇದರಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ದೊರೆಯುವಂತಾಗುತ್ತದೆ. ಕೇವಲ ಸಭೆ ಸಮಾ ರಂಭಗಳಲ್ಲಿ ಮಾಹಿತಿ ನೀಡಿದರೆ ಸಾಲದು, ಅದನ್ನು ಸೂಕ್ತ ವಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

Advertisement

ಹಣ್ಣು, ತರಕಾರಿ ತಾವೇ ಬೆಳೆಯಬೇಕು: ರಷ್ಯಾದಲ್ಲಿ ಶಾಲೆಗಳ ಬಳಿಯೇ ಸಾಕಷ್ಟು ಹಣ್ಣು, ತರಕಾರಿಗಳನ್ನು ಅಲ್ಲಿನ ವಿದ್ಯಾರ್ಥಿಗಳೇ ಬೆಳೆಯುತ್ತಾರೆ. ನಂತರ ಅವುಗಳನ್ನೇ ವಿಜ್ಞಾನದ ಕಲಿಕೆಯಲ್ಲಿ ಬಳಸಿಕೊಳ್ಳುತ್ತಾರೆ. ಇದರ ಜೊತೆಗೆ ಮಧ್ಯಾಹ್ನದ ಉಪಾಹಾರಕ್ಕೆ ಇವರು ಬೆಳೆದ ಹಣ್ಣು ತರಕಾರಿಗಳನ್ನೇ ಬಳಸಿಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತದೆ. ಈ ಮಾದರಿ ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮರ ಬೆಳೆಸಿ ಕಲಿಕೆಗೆ ಪ್ರೋತ್ಸಾಹಿಸಿ: ಸಾಕಷ್ಟು ಶಾಲೆಗಳ ಬಳಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಕುಳಿತು ಊಟ ಮಾಡುವುದನ್ನು ನಾವು ಕಾಣುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಶಾಲಾ ಕೊಠಡಿಯಲ್ಲಿ ಕುಳಿತು ಓದುವುದಕ್ಕಿಂತ ಮರಗಳ ಕೆಳಗೆ ಕುಳಿತು ಓದುವುದೇ ಹೆಚ್ಚು ಅರ್ಥವಾಗುವಂತಹುದು. ಹಾಗಾಗಿ ಶಾಲೆಯ ಆವರಣದಲ್ಲಿ ಹೆಚ್ಚು ಮರಗಳನ್ನು ಬೆಳೆಸಬೇಕು. ಅದರಂತೆ ಉತ್ತಮ ವಾತಾವರಣ ಕಲ್ಪಿಸಿ ಕಲಿಕೆಗೆ ಪ್ರೋತ್ಸಾಹಿಸಬೇಕೆಂದರು.

ಸಿಕ್ಕಿದ್ದನ್ನು ವಾಪಸ್‌ ಕೊಡಬೇಕು:ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಅತಿ ಹೆಚ್ಚಾಗಿ ಅಂದರೆ ಶೇ.90 ಅಧಿಕಾರಿಗಳಾಗಿದ್ದೀರಿ. ಅಂತಹ ಶಾಲೆಗಳಿಗೆ ಉತ್ತಮ ವಾತಾವರಣ ಹಾಗೂ ಮೈದಾನವನ್ನು ಕಲ್ಪಿಸಿಕೊಡಬೇಕು. ಶಾಲೆಯಿಂದ ನಮಗೆ ಸಿಕ್ಕಿದ್ದನ್ನು ನಾವು ವಾಪಸ್‌ ನೀಡಬೇಕಲ್ಲವೇ? ನಮಗೆಲ್ಲಾ ಸಿಕ್ಕಿರುವ ಅವಕಾಶದಲ್ಲಿ ಉತ್ತಮವಾದುದನ್ನು ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next