ಹುಮನಾಬಾದ: 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನ ವಚನಕಾರ ಗಡವಂತಿ ಗ್ರಾಮದ ಮುಗ್ಧ ಸಂಗಯ್ಯ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳದ ಅಧಿಕಾರಿಗಳ ಧೋರಣೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣ ತಾಲೂಕು ಶಿವಪುರ ಮೂಲದವರಾದ ಸಂಗಯ್ಯ ಅವರು ಸ್ವಭಾವತಃ ಅತ್ಯಂತ ಮುಗ್ಧರಾಗಿದ್ದರು ಎಂಬ ಕಾರಣಕ್ಕಾಗಿ ಅವರ ಹೆಸರು ಮುಗ್ಧ ಸಂಗಯ್ಯ ಎಂದೇ ಖ್ಯಾತಿಯಲ್ಲಿದೆ. ಅಪ್ಪಟ ಆಧ್ಯಾತ್ಮ ಜೀವಿಗಳಾದ ಅವರು ಸದಾ ಇಷ್ಟಲಿಂಗ ಧ್ಯಾನದಲ್ಲಿ ಇರುತ್ತಿದ್ದರು. ನಿರ್ದಿಷ್ಟ ಕಾಯಕವಿಲ್ಲದೇ ಸದಾ ದೇಶ ಸಂಚಾರದಲ್ಲಿ ಇರುತ್ತಿದ್ದರು. ಇಂದಿಗೂ ಬಸವಕಲ್ಯಾಣ ತಾಲೂಕು ಶಿವಪುರದಲ್ಲಿ ಅವರ ಮನೆ ಇದ್ದು, ಪೂಜಾ ಪಾಠಗಳು ನಿರಂತರ ನಡೆಯುತ್ತಿರುತ್ತವೆ.
ದೇಶ ಸಂಚಾರ ವೇಳೆ ಗಡವಂತಿ ಗ್ರಾಮ ಮಾರ್ಗವಾಗಿ ತೆರಳುವಾಗ ತಮ್ಮ ನೆಲೆಗೆ ಪ್ರಕೃತಿ ರಮ್ಯವಾದ ಈ ಪ್ರದೇಶ ಸೂಕ್ತವೆಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಗಡವಂತಿ ಗ್ರಾಮದವರೇ ಆದ ಗಂಗಾಧರ ಸ್ವಾಮಿ ಅವರು ಪ್ರತಿನಿತ್ಯ ಪೂಜೆ ನೆರವೇರಿಸುವುದು ಮಾತ್ರವಲ್ಲದೇ ಇಡೀ ಪರಿಸರ ಸ್ವತ್ಛತೆ ಕಾಪಾಡುವುದು ಪ್ರವಾಸಿಗರಿಗೆ ಮುಗ್ಧ ಸಂಗಯ್ಯ ಶರಣರ ಕುರಿತು ಪರಿಚಯಿಸುವ ಮಹತ್ವದ ಕೆಲಸ ಮಾಡುತ್ತಾರೆ.
ವಚನಗಳು ಲಭ್ಯವಾಗಿಲ್ಲ: ವಿಸ್ಮಯದ ಸಂಗತಿ ಎಂದರೇ ಮುಗ್ಧ ಸಂಗಯ್ಯ ಶರಣರು ಬಸವಾದಿ ಶರಣರ ಸಮಕಾಲೀನಕರೆ ಆಗಿದ್ದರೂ ಅವರು ರಚಿಸಿದ ಒಂದು ವಚನಗಳು ಲಭ್ಯವಾಗಿಲ್ಲ. ಆದರೆ ಜನಪದ ಸಾಹಿತ್ಯ ಸಂಶೋಧಕರು ಅವರೆ ರಚಿಸಿರುವ ಕೆಲವು ತ್ರಿಪದಿಗಳನ್ನು ಸಂಗ್ರಹಿಸಿದ್ದಾರೆ ಎನ್ನುತ್ತಾರೆ ಹಿರಿಯ ಜಾನಪದ ಸಂಶೋಧಕ ಎಚ್.ಕಾಶಿನಾಥರೆಡ್ಡಿ. ಗವಿ ಪರಿಸರದಲ್ಲಿ ಇರುವ ಬೃಹತ್ ಆಲದ ಮರ ಬಿಸಿಲ ಬೇಗೆಯಿಂದ ಬೇಸತ್ತವರಿಗೆ ತಂಪನ್ನೀಯುತ್ತದೆ. ಗವಿ ಪರಿಸರದಲ್ಲಿ ಬೆಳೆಸಲಾದ ಹಸಿರು ಹುಲ್ಲು, ವಿವಿಧ ಹಣ್ಣು ಮತ್ತು ಹೂವಿನ ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಗ್ರಾಮದ ಯುವಕರು
ಸೇರಿ ಸ್ಥಾಪಿಸಿದ ಗ್ರಂಥಾಲಯವಿದೆ. ಸಂಜೆ ನಿತ್ಯ ಗ್ರಾಮಸ್ಥರು ಪರಿವಾರ ಸಮೇತ ಬಂದು ಅಲ್ಲಿ ಕಾಲ ಕಳೆಯುತ್ತಾರೆ.
ಪ್ರಾಧಿಕಾರ ಸೇರ್ಪಡೆ ಇಲ್ಲ: ಇಷ್ಟೆಲ್ಲ ಮಹತ್ವ ಹೊಂದಿರುವ ಈ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಗ್ರಾಮಸ್ಥರು ಈವರೆಗೆ ವಿವಿಧ ಹಂತದ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಮೇಲಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂಬುದು ಗ್ರಾಮಸ್ಥರ ಗಂಭೀರ ಆರೋಪ.
12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಮುಗ್ಧ ಸಂಗಯ್ಯ ಶರಣರ ಈ ಗವಿ ಅಭಿವೃದ್ಧಿ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಭಿವೃದ್ಧಿಗೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು.
ಸಿದ್ದಣ್ಣ ಭೂಶೆಟ್ಟಿ, ಗವಿ ಅಭಿವೃದ್ಧಿ ಚಿಂತಕ
ಶಶಿಕಾಂತ ಕೆ.ಭಗೋಜಿ