Advertisement

ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸರ ಜೊತೆ ಕೈಜೋಡಿಸಿ

09:16 PM Nov 11, 2019 | Lakshmi GovindaRaju |

ನೆಲಮಂಗಲ: ಪೊಲೀಸರ ಮೇಲೆ ಭಯ, ಅನುಮಾನ ಪಡುವುದನ್ನು ಬಿಟ್ಟು ಅಪರಾಧಿಗಳ ಸುಳಿವು ನೀಡಿದರೆ, ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್‌ ಸಲಹೆ ನೀಡಿದರು.

Advertisement

ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಮೊದಲ ಪೊಲೀಸರ ಗ್ರಾಮ ವಾಸ್ತವ್ಯ ಹಾಗೂ ಗ್ರಾಮ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.  ಬ್ರಿಟಿಷರ ಕಾಲದ ಹೊಡಿಬಡಿ ಪೊಲೀಸರನ್ನು ನೋಡಿರುವ ಹಳ್ಳಿಗಾಡಿನ ಜನರು ಇಂದಿನ ಪೊಲೀಸರನ್ನೂ, ಅದೇ ದೃಷ್ಟಿಯಿಂದ ನೋಡುತ್ತಿದ್ದಾರೆ.

ಆದರೆ ಇಂದಿನ ಪೊಲೀಸ್‌ ವ್ಯವಸ್ಥೆ ಜನ ಸ್ನೇಹಿಯಾಗಿದ್ದು, ಪೊಲೀಸರ ಜೊತೆ ಕೈಜೊಡಿಸಿದರೆ ಮಾತ್ರ, ನಮ್ಮ ಸುತ್ತಮುತ್ತಲ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ, ನ್ಯಾಯಾಲಯದಲ್ಲಿ ಪೊಲೀಸರ ಸಾಕ್ಷಿಗೆ ಮನ್ನಣೆ ಇಲ್ಲ. ಇನ್ನೂ ಸಾರ್ವಜನಿಕರು ಪ್ರತ್ಯಕ್ಷವಾಗಿ ಕಂಡರು ಸಾಕ್ಷಿ ಹೇಳುವುದಿಲ್ಲ. ಇದರಿಂದ ಅಪರಾಧಿಗಳು ತಪ್ಪಿಸಿಕೊಳ್ಳುತಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ವಾರ್ಷಿಕ ಸುಮಾರು 8 ಸಾವಿರ ಅಪರಾಧ ಪ್ರಕರಣಗಳು ದಾಖಲಾಗುತ್ತವೆ. ಆದರೆ, ಅದರಲ್ಲಿ ಕೇವಲ ಶೇ.4 ಅಂದರೆ, 80 ರಿಂದ 90 ಪ್ರಕರಣಕ್ಕೆ ಮಾತ್ರ ಸೂಕ್ತ ಸಾಕ್ಷಿಗಳು ದೊರೆತು ಅಪರಾಧಿಗಳಿಎ ಶಿಕ್ಷೆಯಾಗುತ್ತದೆ. ಸಾರ್ವಜನಿಕರು ತಮ್ಮ ವಸ್ತುಗಳನ್ನು ಗುರುತಿಸಿದಂತೆ ಅಪರಾಧಿಗಳನ್ನು ಗುರುತಿಸಿದರೆ ಅಪರಾಧ ಮುಕ್ತ ಸಮಾಜಕ್ಕೆ ಸಹಕಾರಿಯಾಗುತ್ತದೆ ಎಂದರು.

ಗ್ರಾಮಸಭೆ: ಗ್ರಾಮಾಂತರ ಠಾಣೆಯ ಗಡಿಗ್ರಾಮ ಅರೆಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಜನರ ಜೊತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಬೀಟ್‌, ಗಸ್ತು ಪೊಲೀಸರಿಗೆ ಮಾಹಿತಿ ನೀಡುವಂತೆ ಹಾಗೂ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಸಲಹೆ ನೀಡಿದರು.

Advertisement

ವಿದ್ಯಾರ್ಥಿಗಳ ಜೊತೆ ಸಂವಾದ: ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಜೊತೆ ಕಾನೂನು ಜಾಗೃತಿ, ಕಡ್ಡಾಯ ಹಾಗೂ ಮಕ್ಕಳಹಕ್ಕುಗಳ ಬಗ್ಗೆ ಸಂವಾದ ನಡೆಸಿದರು, ಇದೇ ಸಂದರ್ಭದಲ್ಲಿ ಅಮೃತ ಬಿಂದು ಸಂಸ್ಥೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್‌ ವಿತರಿಸಲಾಯಿತು.

1 ತಿಂಗಳಲ್ಲಿ ಸಮಸ್ಯೆ ಪರಿಹಾರ: ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ, ಚಿರತೆಕಾಟ, ಅಕ್ರಮಕಲ್ಲು ಗಣಿಗಾರಿಕೆ, ಜಾನುವಾರು ಕಳ್ಳತನ, ದೇವಾಲಯ ಕಳ್ಳತನ ಸೇರಿದಂತೆ ಜನರ ಇನ್ನಿತರ ಸಮಸ್ಯೆಗಳನ್ನು ಒಂದು ತಿಂಗಳ ಅವಧಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಕ್ರೀಡಾ ಸಾಮಾಗ್ರಿ ವಿತರಣೆ: ರಾಜ್ಯಾದ್ಯಂತ ಸ್ಕೂಲ್‌ ಬೆಲ್‌ ಕಾರ್ಯಕ್ರಮದ ಮೂಲಕ ಸರಕಾರಿ ಶಾಲೆಗಳಿಗೆ ಹೊಸರೂಪ ನೀಡಿದ ತಂಡದಿಂದ ನೀಡಲಾದ 14 ಶಾಲೆಗಳ ಕ್ರೀಡಾಸಾಮಾಗ್ರಿಗಳನ್ನು ಎಸ್ಪಿ ವಿತರಣೆ ವಿತರಿಸಿದರು.

ಗ್ರಾಮ ವಾಸ್ತವ್ಯ: ಜಿಲ್ಲೆಯ ಗಡಿಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಎಸ್ಪಿಯೊಬ್ಬರು ಸರಕಾರಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡುವ ಮೂಲಕ, ಪೊಲೀಸರು ಜನಸ್ನೇಹಿ ಎಂಬ ಸಂದೇಶ ನೀಡಿದ್ದಾರೆ. ಇನ್ನೂ ಎಸ್ಪಿಯ ಜೊತೆ ಗ್ರಾಮಾಂತರ ಪಿಎಸ್‌ಐ ಅಂಜನಕುಮಾರ್‌, ಬೀಟ್‌ ಪೊಲೀಸ್‌ ಮಧು ,ಶಿವಶಂಕರ್‌ ಸೇರಿದಂತೆ ಅನೇಕ ಅಧಿಕಾರಿಗಳು ಶಾಲೆಯಲ್ಲಿ ವಾಸ್ತವ್ಯ ಹೂಡಿದರು.

ರಾಗಿ ಮುದ್ದೆ ಸವಿದ ಎಸ್ಪಿ: ಅರೆಬೊಮ್ಮನಹಳ್ಳಿ ಗ್ರಾಮಕ್ಕೆ ರಾತ್ರಿ ಆಗಮಿಸಿದ ಎಸ್ಪಿ, ಜನರ ಜೊತೆ ಸಂವಾದ ನಡೆಸಿದ ನಂತರ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, 11 ಗಂಟೆಗೆ ಬೆಳೆಸಾರು ರಾಗಿ ಮುದ್ದೆಯನ್ನು ಸವಿಯುವ ಮೂಲಕ ತಮ್ಮ ಗ್ರಾಮದ ನೆನಪು ಮಾಡಿಕೊಂಡರು. ಊಟಮಾಡಿದ ನಂತರ ಗ್ರಾಮದ ಯುವಕ ರೊಂದಿಗೆ ಕೆಲ ಕಾಲ ಚರ್ಚಿಸಿ ನಿದ್ರೆಗೆ ಜಾರಿದರು.

ಬೆಟ್ಟ ಹತ್ತಿದ ಎಸ್ಪಿ: ಬೆಳಿಗ್ಗೆ ಗ್ರಾಮಸ್ಥರೊಂದಿಗೆ ಅರೆಬೊಮ್ಮನಹಳ್ಳಿ ಬೆಟ್ಟ ಹತ್ತಿ ಗ್ರಾಮದಲ್ಲಿ ಚಿರತೆ ದಾಳಿ ಸಮಸ್ಯೆಯ ಬಗ್ಗೆ ದೂರು ಬಂದ ಹಿನ್ನಲೆ ಚಿರತೆಯ ಬರುವ ಮಾರ್ಗದ ಬಗ್ಗೆ ಮಾಹಿತಿ ಪಡೆದರು.

ಸಂದರ್ಭದಲ್ಲಿ ಡಿವೈಎಸ್ಪಿ ಮೋಹನ್‌ ಕುಮಾರ್‌, ವೃತ್ತ ನಿರೀಕ್ಷಕ ಶಿವಣ್ಣ, ಸತ್ಯನಾರಾಯಣ್‌, ಪಿಎಸ್‌ಐ ಅಂಜನಕುಮಾರ್‌, ಕೃಷ್ಣಕುಮಾರ್‌ ಸೇರಿದಂತೆ 20 ಕ್ಕೂಹೆಚ್ಚು ಪೊಲೀಸರು, ಗ್ರಾಮ ಪಂಚಾಯಿತಿ ಅಧ್ಯಕ್ಷ , ಊರಿನ ಮುಖಂಡರು, ಯುವಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next