ಕೊಪ್ಪಳ: ಶುದ್ಧ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಎಲ್ಲರೂ ಕೈ ಜೋಡಿಸಿ ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಸ್ಪರ ಸಮನ್ವಯತೆ: ಜಿಲ್ಲೆಯಲ್ಲಿ ಜಲಾಮೃತ ಯೋಜನೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಜಲಾಮೃತ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಪ್ರಮುಖ ಅನುಷ್ಠಾನ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲರೂ ಕೈ ಜೋಡಿಸಿ: ಜಲಾಮೃತ-2019 ಕಾರ್ಯಕ್ರಮವು ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸಿರೀಕರಣಕ್ಕಾಗಿ ಜಲಾಮೃತ ಎಂಬ ಸಮುದಾಯ ಚಾಲಿತ ಸಮಗ್ರ ಚಳವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಿದೆ. ಅದರಂತೆ 2019ನೇ ವರ್ಷವನ್ನು ಜಲ ವರ್ಷವೆಂದು ಘೋಷಿಸಲಾಗಿದ್ದು, ಜಲ ವರ್ಷದ ಆಚರಣೆಯನ್ನು ಜಿಲ್ಲೆಯಾದ್ಯಂತ ಎಲ್ಲ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಿದ್ದು, ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಅರಣ್ಯೀಕರಣಕ್ಕೆ ಸೂಚನೆ: ಜಲಾಮೃತ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿ, ಹೊಸ ಕೆರೆ ನಿರ್ಮಾಣ, ಚೆಕ್‌ಡ್ಯಾಂ, ಗೋ-ಕಟ್ಟೆಗಳನ್ನು ನಿರ್ಮಾಣ ಮಾಡಲು ಸೂಚಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಮತ್ತು ಮಳೆ ಪ್ರಮಾಣ ಹೆಚ್ಚಿಸಲು ಗೋಮಾಳ, ಸ್ಮಶಾನ, ಹುಲ್ಲುಗಾವಲು, ರಸ್ತೆ ಬದಿ ನೀರಿನ ಕಾಲುವೆಗಳ ಅಕ್ಕ-ಪಕ್ಕ, ಶಾಲೆ-ಕಾಲೇಜುಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮತ್ತು ಮುಂತಾದ ಸ್ಥಳಗಳಲ್ಲಿ ಅರಣ್ಯೀಕರಣ ಮಾಡಲು ಸೂಚಿಸಿದರು.
ಜಿಪಂ ಸಿಇಒ ರಘುನಂದನ್ ಮೂರ್ತಿ, ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಪ್ರೊಬೇಷನರಿ ಅಧಿಕಾರಿ ನೇಹಾ ಜೈನ್, ಜಿಲ್ಲಾ ಮಟ್ಟದ ಎಲ್ಲ ಅನುಷ್ಠಾನ ಇಲಾಖೆ ಅಧಿಕಾರಿಗಳು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.