Advertisement

ಬಾರ್‌ನಲ್ಲಿ ಕೆಲಸಕ್ಕೆ ಸೇರಿ ಮರುದಿನ ಏರ್‌ಪೋರ್ಟ್‌ಗೆ!

01:49 AM Jan 24, 2020 | mahesh |

ಕಾರ್ಕಳ: ಆದಿತ್ಯ ರಾವ್‌ ಕೃತ್ಯಕ್ಕೆ 2 ದಿನ ಮೊದಲು ಕಾರ್ಕಳದ ಬಾರ್‌ ಒಂದರಲ್ಲಿ ಕೆಲಸಕ್ಕಿದ್ದ ಮಾಹಿತಿ ಬಹಿರಂಗಗೊಂಡಿದೆ. ಆದಿತ್ಯ ಜ. 17ರ ಬೆಳಗ್ಗೆ ಕಾರ್ಕಳದ ಕರಿಯಕಲ್ಲಿನಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಹೋಗಿ, ವೈಟರ್‌ ಕೆಲಸ ಕೊಡಿಸುವಂತೆ ವಿನಂತಿಸಿದ್ದ. ಆದರೆ ಅಲ್ಲಿನ ಮ್ಯಾನೇಜರ್‌ ಕೆಲಸ ನೀಡಲು ನಿರಾಕರಿಸಿದ್ದರು. ಜ.18ರ ಬೆಳಗ್ಗೆ ಗೋಪಾಲ್‌ ಟವರ್ ನಲ್ಲಿರುವ ಹೊಟೇಲ್‌ಗೆ ಹೋಗಿದ್ದ ಆತ ಕ್ಯಾಶಿಯರ್‌ ಬಳಿ ಕೆಲಸ ಕೇಳಿದ್ದ. ಅವರು ಮ್ಯಾನೇಜರ್‌ ನಂಬರ್‌ ನೀಡಿ ದ್ದರು. ಮ್ಯಾನೇಜರ್‌ಗೆ ಕರೆ ಮಾಡಿ ಸ್ವಲ್ಪ ಹೊತ್ತು ಅಲ್ಲಿದ್ದು, ಬಳಿಕ ಪೋಸ್ಟ್‌ ಆಫೀಸ್‌ಗೆ ಹೋಗಿ ಬರುತ್ತೇನೆಂದು ತೆರಳಿದವ ವಾಪಸಾಗಿರಲಿಲ್ಲ.

Advertisement

ಕಿಂಗ್ಸ್‌ ಬಾರ್‌ಗೆ
ಅಂದು ಸಂಜೆ 7ರ ವೇಳೆ ಕಾರ್ಕಳದ ಕಿಂಗ್ಸ್‌ ಬಾರ್‌ಗೆ ಬಂದು ಅಲ್ಲಿನ ಮ್ಯಾನೇಜರ್‌ ಬಳಿ ಕೆಲಸ ಕೇಳಿದ್ದ. ಮಂಗಳೂರಿನಲ್ಲಿ ಬಿಲ್‌ ಕೌಂಟರ್‌, ವೇಟರ್‌, ಸಪ್ಲೆ„ಯರ್‌ ಆಗಿ ಕೆಲಸ ಮಾಡಿದ ಅನುಭವವಿದೆ ಎಂದಿದ್ದ. ಕೆಲಸ ನೀಡಲು ಆಧಾರ್‌ ಕಾರ್ಡ್‌ ಮತ್ತು ಫೋಟೋ ಕೇಳಿದಾಗ ಮೊದಲು ಇಲ್ಲ ಎಂದಿದ್ದ ಆದಿತ್ಯ, ಅದಿಲ್ಲದೆ ಕೆಲಸ ನೀಡುವುದಿಲ್ಲ ಎಂದಾಗ ಅವರೆಡನ್ನೂ ಕೊಟ್ಟು ಕೆಲಸ ಪಡೆದಿದ್ದ.

ಜಿಮ್‌ ಕೇಂದ್ರಕ್ಕೂ ಹೋಗಿದ್ದ
ಕೆಲಸಕ್ಕೆ ಸೇರಿದಂದೇ ಸಂಜೆ ಬ್ಯಾಗ್‌ನೊಂದಿಗೆ ಹತ್ತಿರದ ಜಿಮ್‌ಗೆ ತೆರಳಿ, ಸ್ವಲ್ಪ ಹೊತ್ತು ಜಿಮ್‌ ಮಾಡಬಹುದೇ ಎಂದು ವಿನಂತಿಸಿದ್ದ. 15 ನಿಮಿಷ ವ್ಯಾಯಾಮ ಮಾಡಿ ಬಳಿಕ ತೆರಳಿದ್ದ. ಆದಿತ್ಯ ಕಾರ್ಕಳದಲ್ಲಿ ಸುತ್ತಾಟ ನಡೆಸುವಾಗ ತನ್ನ ಜತೆಗೆ ಬ್ಯಾಗ್‌ ಹೊಂದಿರುವುದು ಸಿಸಿಟಿವಿ ಫ‌ೂಟೇಜ್‌ನಲ್ಲಿ ಕಂಡುಬರುತ್ತಿದೆ. ವ್ಯಾಯಾಮ ಶಾಲೆಗೆ ತೆರಳುವಾಗಲೂ ಬ್ಯಾಗ್‌ ಜತೆಗೆ ಒಯ್ದಿದ್ದ. ಆದರೆ ರಾಕ್‌ ಸೈಡ್‌ ಬಾರ್‌ಗೆ ಹೋಗುವ ವೇಳೆ ಬ್ಯಾಗ್‌ ಇರಲಿಲ್ಲ.

ಸೋಮವಾರ ಬೆಳಗ್ಗೆ ನಾಪತ್ತೆ
ಜ. 19ರಂದು ಇಡೀ ದಿನ ಕೆಲಸ ಮಾಡಿ ಕೆಲಸ ಮುಗಿಸಿ ಮಲಗಿದ್ದಾತ ಮರುದಿನ ಬೆಳಗ್ಗೆ ಯಾರಲ್ಲೂ ತಿಳಿಸದೆ ವಿಮಾನ ನಿಲ್ದಾಣಕ್ಕೆ ಹೋಗಿದ್ದ ಎನ್ನಲಾಗುತ್ತಿದೆ.

ಪೊಲೀಸರ ತನಿಖೆ
ಕಾರ್ಕಳದಲ್ಲಿ ಆದಿತ್ಯನ ಚಲನ ವಲನದ ಕುರಿತು ಮಾಹಿತಿ ಪಡೆದಿದ್ದ ಪೊಲೀಸರ ತಂಡ ಜ. 20ರಂದೇ ತಡರಾತ್ರಿ ಎಸಿಪಿ ಬೆಳಿಯಪ್ಪ ಗೌಡರ ನೇತೃತ್ವದಲ್ಲಿ ಅಲ್ಲಿಗೆ ತೆರಳಿ ಮಾಹಿತಿ ಕಲೆಹಾಕಿತ್ತು.

Advertisement

ಸುಳಿವು ನೀಡಿದ ಕ್ಯಾಪ್‌!
ಆದಿತ್ಯ ಧರಿಸುತ್ತಿದ್ದ ಕ್ಯಾಪ್‌ ಆತನನ್ನು ಗುರುತು ಪತ್ತೆಗೆ ಮಹತ್ವದ ಆಧಾರವಾಗಿತ್ತು. ತಾನು ಕೆಲಸ ಮಾಡಿದ್ದ ಬಹುತೇಕ ಕಡೆ ಆತ ಕ್ಯಾಪ್‌ ಧರಿಸಿರುತ್ತಿದ್ದ. ಬಾಂಬ್‌ ಇಡುವ ವೇಳೆ ಹಾಕಿದ್ದ ಬಿಳಿ ಕ್ಯಾಪ್‌ ಮೇಲೆ 23 ಸಂಖ್ಯೆ ನಮೂದಾಗಿತ್ತು. ಮಂಗಳೂರು, ಕಾರ್ಕಳದ ಹೊಟೇಲ್‌ಗೆ ಹೋಗಿ ಕೆಲಸ ಕೇಳಿದಾಗಲೂ ಇದೇ ಕ್ಯಾಪ್‌ ಧರಿಸಿದ್ದ.

ಬಾಂಬ್‌ ಇಟ್ಟ ದಿನವೇ ಸುಳಿವು
ಆದಿತ್ಯನೇ ಕೃತ್ಯ ಎಸಗಿರುವ ಖಚಿತ ಮಾಹಿತಿ ಬಾಂಬ್‌ ಪತ್ತೆಯಾದ ದಿನ ಸಂಜೆಯೇ ಪೊಲೀಸರಿಗೆ ಲಭಿಸಿತ್ತು. ಬೆಂಗಳೂರಿನಲ್ಲಿ ಹುಸಿ ಬಾಂಬ್‌ ಕರೆ ಮಾಡಿ ಸಿಕ್ಕಿ ಬಿದ್ದಿದ್ದ ಕಾರಣ ಅನುಮಾನ ಬಂದಿತ್ತು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಅಂದು ಸಂಜೆಯೇ ಮೊಬೈಲ್‌ಗೆ ಕರೆ ಮಾಡಿ
ದ್ದರು. ಆದರೆ ಸ್ವಿಚ್ಡ್ ಆಫ್‌ ಆಗಿತ್ತು. ಆತನನ್ನು ವಿಮಾನ ನಿಲ್ದಾಣದಿಂದ ಕೆಂಜಾರು ವರೆಗೆ ಡ್ರಾಪ್‌ ಮಾಡಿದ್ದ ಆಟೋ ಚಾಲಕ ಮತ್ತು ಕೆಂಜಾರಿನ ಸೆಲೂನ್‌ ಉದ್ಯೋಗಿಗಳಿಂದಲೂ ಮಾಹಿತಿ ಸಿಕ್ಕಿತ್ತು.

ತೀವ್ರ ವಿಚಾರಣೆ
ಪಣಂಬೂರು: ಆದಿತ್ಯ ರಾವ್‌ನನ್ನು ಪಣಂಬೂರು ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಬುಧವಾರ ಸಂಜೆ ಯಿಂದ ಗುರುವಾರ ಮಧ್ಯಾಹ್ನದ ವರೆಗೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆತನನ್ನು ಬುಧವಾರ ಮಂಗ ಳೂರಿಗೆ ಕರೆತಂದ ಬಳಿಕ ಇಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಲಾಯಿತು. ಆಯುಕ್ತ ಡಾ| ಹರ್ಷ ಆಗಮಿಸಿ ಖುದ್ದಾಗಿ ವಿಚಾರಣೆಗೆ ಒಳಪಡಿಸಿದರೆ ಮಧ್ಯರಾತ್ರಿ 2 ಗಂಟೆಯ ವರೆಗೆ ಎಸಿಪಿ ಗಳಾದ ಬೆಳ್ಳಿಯಪ್ಪ ಮತ್ತು ವಿನಯ ಗಾಂವಕರ್‌ ವಿಚಾರಣೆ ನಡೆಸಿದರು. ಆರೋಪಿ ತನಿಖೆಯಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾನೆ. ಮಾತ್ರವಲ್ಲದೆ ತಾನು ಈ ಹಿಂದೆ ಎಸಗಿದ ಎಲ್ಲ ಕೃತ್ಯಗಳನ್ನು ತಿಳಿಸಿದ್ದಾನೆ.

ಬುಧವಾರ ರಾತ್ರಿ ಆತನಿಗೆ ಊಟಕ್ಕೆ ಅನ್ನ ಸಾಂಬಾರು ನೀಡಲಾಗಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆದ ಆರೋಪಿ ಗುರುವಾರ ಬೆಳಗ್ಗೆ ಬೇಗನೆ ಎದ್ದಿದ್ದಾನೆ. ಆತನಿಗೆ ಉಪಾಹಾರ, ಮಧ್ಯಾಹ್ನ ಊಟ ನೀಡಲಾಯಿತು. ಬಳಿಕ 3.30ಕ್ಕೆ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next