Advertisement

ಭಾರತಕ್ಕೆ ಸಿಕ್ಕಿತು 5ನೇ ಲಸಿಕೆ

11:54 PM Aug 07, 2021 | Team Udayavani |

ಹೊಸದಿಲ್ಲಿ: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪೆನಿಯ ಸಿಂಗಲ್‌ ಡೋಸ್‌ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿದೆ. ಈ ಮೂಲಕ ದೇಶದಲ್ಲಿ ಒಟ್ಟು 5 ಲಸಿಕೆಗಳ ಬಳಕೆಗೆ ಒಪ್ಪಿಗೆ ಸಿಕ್ಕಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಹೇಳಿದ್ದಾರೆ.

Advertisement

ಶುಕ್ರವಾರವಷ್ಟೇ ಅಮೆರಿಕ ಮೂಲದ ಕಂಪೆನಿಯು ತಮ್ಮ ಲಸಿಕೆಯ ಬಳಕೆಗೆ ಒಪ್ಪಿಗೆ ನೀಡುವಂತೆ ಭಾರತೀಯ ಔಷಧ ಮಹಾನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ವರದಿ ಆಧರಿಸಿ ಅದೇ ದಿನವೇ ಸಿಂಗಲ್‌ ಡೋಸ್‌ ಲಸಿಕೆಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಭಾರತದಲ್ಲಿ ಕೊವಿಶೀಲ್ಡ್‌, ಕೊವ್ಯಾಕ್ಸಿನ್‌, ಸ್ಪುಟ್ನಿಕ್‌ ವಿ ಮತ್ತು ಮಾಡೆರ್ನಾ ಲಸಿಕೆಗೆ ಒಪ್ಪಿಗೆ ದೊರೆತಿದೆ. ಈ ನಡುವೆ, ದೇಶಾದ್ಯಂತ ಲಸಿಕೆ ವಿತರಣೆ ಪ್ರಕ್ರಿಯೆ ತೀವ್ರಗೊಂಡಿದ್ದು, ಜುಲೈ ತಿಂಗಳಲ್ಲಿ ಒಟ್ಟಾರೆ 13.45 ಕೋಟಿ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವ ಮಾಂಡವೀಯಾ ತಿಳಿಸಿದ್ದಾರೆ.

ಶುಕ್ರವಾರದಿಂದ ಶನಿವಾರಕ್ಕೆ ದೇಶಾದ್ಯಂತ 24 ಗಂಟೆಗಳಲ್ಲಿ 38,628 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 617 ಮಂದಿ ಸಾವಿಗೀಡಾಗಿದ್ದಾರೆ. ಕೇರಳದಲ್ಲಿ ಶನಿವಾರ 20,367 ಪ್ರಕರಣಗಳು ಪತ್ತೆಯಾಗಿ, 139 ಸಾವು ಸಂಭವಿಸಿವೆ.

ಬಿಜೆಪಿಯಿಂದ ಬೃಹತ್‌ ಪಡೆ :

Advertisement

ದೇಶದಲ್ಲಿ ಕೊರೊನಾ 3ನೇ ಅಲೆ ಅಪ್ಪಳಿಸುವ ಭೀತಿ ಹಿನ್ನೆಲೆಯಲ್ಲಿ ಬಿಜೆಪಿಯು ಜಗತ್ತಿನಲ್ಲೇ ಅತೀ ದೊಡ್ಡ “ಆರೋಗ್ಯ ಸ್ವಯಂಸೇವಕರ ಪಡೆ’ಯನ್ನು ರಚಿಸಲು ಮುಂದಾಗಿದೆ. ಆಗಸ್ಟ್‌ ಅಂತ್ಯದೊಳಗೆ ಸುಮಾರು 4 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಛುಗ್‌ ಹೇಳಿದ್ದಾರೆ. ತರಬೇತಿ ಪಡೆಯುವ ಸ್ವಯಂಸೇವಕರ ಪೈಕಿ 51 ಸಾವಿರ ಮಂದಿ ದಿಲ್ಲಿಯ ಯುವಕರೇ ಇರಲಿದ್ದಾರೆ. ಕೊರೊನಾ 3ನೇ ಅಲೆಯ ಸಂದರ್ಭದಲ್ಲಿ ಜನರಿಗೆ ಅಗತ್ಯ ನೆರವು ನೀಡಲು ಇವರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next