Advertisement
1. ಮಾಯಾಪೆಟ್ಟಿಗೆ ಟಿ.ವಿ. (ದೂರದರ್ಶನ)ಯನ್ನು ಕಂಡು ಹಿಡಿದವರು ಜಾನ್ ಲೋಗಿ ಬೇರ್ಡ್.2. ಈ ಸ್ಕಾಟ್ಲೆಂಡ್‌ನ ಎಂಜಿನಿಯರ್, ಸಂಶೋಧಕ ಬೇರ್ಡ್ ಹುಟ್ಟಿದ್ದು 1888ರ ಆಗಸ್ಟ್ 14ರಂದು.
3. ಬಾಲ್ಯದಿಂದಲೇ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಬೇರ್ಡ್, ತನ್ನ ಮಲಗುವ ಕೋಣೆಯಿಂದಲೇ ಬೀದಿಯಲ್ಲಿರುವ ಸ್ನೇಹಿತರೊಡನೆ ಸಂಪರ್ಕಿಸುವ ರೀತಿಯಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್‌ಅನ್ನು ಬದಲಿಸಿಕೊಂಡಿದ್ದರಂತೆ.
4. ಇಪ್ಪತ್ತರ ಹರೆಯದಲ್ಲಿ, ಗ್ರಾಫೈಟ್ ಅನ್ನು ಬಿಸಿ ಮಾಡಿ ವಜ್ರವನ್ನು ತಯಾರಿಸುವ ಅವರ ಸಂಶೋಧನೆ ಕೈಗೂಡಲಿಲ್ಲ. ಅಷ್ಟೇ ಅಲ್ಲ, ಬೇರ್ಡ್ ಕೈಗೊಂಡ ಅದೆಷ್ಟೋ ಸಂಶೋಧನೆಗಳು ವಿಫಲವಾದವು. ಆ ಸೋಲುಗಳಿಂದ ಕಲಿತ ಪಾಠವೇ ಮುಂದಿನ ಆವಿಷ್ಕಾರಗಳಿಗೆ ಜಯ ತಂದುಕೊಟ್ಟಿತು.
5. ಅನಾರೋಗ್ಯ ಮತ್ತು ಜಾಗತಿಕ ಯುದ್ಧದ ಕಾರಣದಿಂದ ಬೇರ್ಡ್‌ಗೆ ಪದವಿ ಶಿಕ್ಷಣವನ್ನು ಪೂರೈಸಲು ಆಗಲಿಲ್ಲ. ನಂತರ ಅವರು ಎಲೆಕ್ಟ್ರಿಕಲ್ ಪವರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.
6. 1920ರ ದಶಕದಲ್ಲಿ ಬೇರ್ಡ್ ದೂರದರ್ಶನದ ಸಂಶೋಧನೆಯಲ್ಲಿ ತೊಡಗಿದ್ದರು. 1924ರ ಹೊತ್ತಿಗೆ, ಅವರು ಕೆಲವು ಅಡಿಗಳವರೆಗೆ ಮಿನುಗುವ ಚಿತ್ರವನ್ನು ರವಾನಿಸುವಲ್ಲಿ ಯಶಸ್ವಿಯಾದರು.
7. 1925ರಲ್ಲಿ ಬೇರ್ಡ್ ತಮ್ಮ ಪ್ರಯೋಗಾಲಯದಲ್ಲಿ ಮೊದಲ ದೂರದರ್ಶನ ಚಿತ್ರವನ್ನು ರವಾನಿಸಿದರು.ಆಗ ಅವರೆಷ್ಟು ಥ್ರಿಲ್ ಆಗಿದ್ದರೆಂದರೆ, ಹತ್ತಿರದ ಅಂಗಡಿಯೊಂದಕ್ಕೆ ಓಡಿ, ಅಲ್ಲಿದ್ದ ಹುಡುಗನನ್ನು ತನ್ನ ದೂರದರ್ಶನ ಪ್ರಸರಣದ ಭಾಗವಾಗಲು ಒಪ್ಪಿಸಿದರಂತೆ.
8. 1926ರ ಜನವರಿ 26ರಂದು ಲಂಡನ್‌ನಲ್ಲಿ ವಿಜ್ಞಾನಿಗಳ ಎದುರು ತನ್ನ ದೂರದರ್ಶನವನ್ನು ಪ್ರದರ್ಶಿಸಿದರು.
9. ಕಲರ್ ಟಿ.ವಿ., 3 ಡಿ ಟಿ.ವಿ.ಗಳು ಕೂಡಾ ಬೇರ್ಡ್ ಅವರ ಆವಿಷ್ಕಾರದ ಫಲವೇ.
10. 58ನೇ ವಯಸ್ಸಿನಲ್ಲಿ ಬೇರ್ಡ್ ಪಾರ್ಶ್ವವಾಯುವಿನಿಂದ ತೀರಿಕೊಂಡರು.