Advertisement

ಜೊಹಾನ್ಸ್‌ಬರ್ಗ್‌ ಟೆಸ್ಟ್‌: ಆಸೀಸ್‌ ತೀವ್ರ ಕುಸಿತ

06:40 AM Apr 01, 2018 | Team Udayavani |

ಜೊಹಾನ್ಸ್‌ಬರ್ಗ್‌: “ನ್ಯೂ ಲುಕ್‌’ ಪಡೆದಿರುವ ಆಸ್ಟ್ರೇಲಿಯ ತಂಡ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ತೀವ್ರ ಕಜುಸಿತ ಕಂಡು ಅಪಾಯಕ್ಕೆ ಸಿಲುಕಿದೆ. ಆತಿಥೇಯ ದಕ್ಷಿಣ ಆಫ್ರಿಕಾದ 488 ರನ್ನುಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ 6 ವಿಕೆಟಿಗೆ ಕೇವಲ 110 ರನ್‌ ಮಾಡಿ ದ್ವಿತೀಯ ದಿನದ ಆಟ ಮುಗಿಸಿದೆ. ಇನ್ನೂ 378 ರನ್‌ ಹಿನ್ನಡೆಯಲ್ಲಿದೆ.

Advertisement

ವನ್‌ಡೌನ್‌ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖ್ವಾಜಾ ಹೊರತುಪಡಿಸಿ ಉಳಿದವರ್ಯಾರಿಗೂ ಹರಿಣಗಳ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಉತ್ತಮ ಹೋರಾಟವೊಂದನ್ನು ಸಂಘಟಿಸಿದ ಖ್ವಾಜಾ 53 ರನ್‌ ಬಾರಿಸಿದರು (84 ಎಸೆತ, 9 ಬೌಂಡರಿ). ಮ್ಯಾಟ್‌ ರೆನ್‌ಶಾ (8), ಜೋ ಬರ್ನ್ಸ್ (4), ಪೀಟರ್‌ ಹ್ಯಾಂಡ್ಸ್‌ಕಾಂಬ್‌ (0), ಶಾನ್‌ ಮಾರ್ಷ್‌ (16), ಮಿಚೆಲ್‌ ಮಾರ್ಷ್‌ (1) ಅಗ್ಗಕ್ಕೆ ಔಟಾದರು. ವೇಗಿ ವೆರ್ನನ್‌ ಫಿಲಾಂಡರ್‌ 3 ವಿಕೆಟ್‌ ಹಾರಿಸಿ ಕಾಂಗರೂಗಳನ್ನು ಕಾಡಿದರು. ರಬಾಡ, ಮಾರ್ಕೆಲ್‌, ಮಹಾರಾಜ್‌ ಒಂದೊಂದು ವಿಕೆಟ್‌ ಉರುಳಿಸಿದರು.

ಮೊದಲ ದಿನ 6 ವಿಕೆಟಿಗೆ 313 ರನ್‌ ಮಾಡಿದ್ದ ದಕ್ಷಿಣ ಆಫ್ರಿಕಾ ಶನಿವಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. 25 ರನ್‌ ಮಾಡಿ ಆಡುತ್ತಿದ್ದ ಟೆಂಬ ಬವುಮ 95ರ ತನಕ ಸಾಗಿ ಅಜೇಯರಾಗಿ ಉಳಿದರು (194 ಎಸೆತ, 13 ಬೌಂಡರಿ). ಜತೆಗಾರರಿಲ್ಲದ ಕಾರಣ ಅವರು ಶತಕ ವಂಚಿತರಾಗಬೇಕಾಯಿತು. 7 ರನ್‌ ಗಳಿಸಿ ಆಡುತ್ತಿದ್ದ ಕ್ವಿಂಟನ್‌ ಡಿ ಕಾಕ್‌ 39 ರನ್‌ ಮಾಡಿ ನಿರ್ಗಮಿಸಿದರೆ, ಕೇಶವ್‌ ಮಹಾರಾಜ್‌ 45 ರನ್ನುಗಳ ಕೊಡುಗೆ ಸಲ್ಲಿಸಿದರು.ಆಸ್ಟ್ರೇಲಿಯ ಪರ ಪ್ಯಾಟ್‌ ಕಮಿನ್ಸ್‌ 83 ರನ್ನಿತ್ತು 5 ವಿಕೆಟ್‌ ಉಡಾಯಿಸಿದರು. ಸ್ಪಿನ್ನರ್‌ ನಥನ್‌ ಲಿಯೋನ್‌ 3 ವಿಕೆಟ್‌ ಕೊಟ್ಟರೂ 182 ರನ್‌ ಸೋರಿ ಹೋಯಿತು. ಚಾಡ್‌ ಸೇಯರ್ 78ಕ್ಕೆ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next