Advertisement

ಜೋಗೇಶ್ವರಿ: ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ ಸಂಪನ್ನ

05:51 PM Aug 20, 2019 | Team Udayavani |

ಮುಂಬಯಿ, ಆ. 19: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಜೋಗೇಶ್ವರಿಯ ಮಂತ್ರಾಲಯ ರಾಘವೇಂದ್ರ ಮಠದ ಅಭಿನವ ಮಂತ್ರಾಲಯದಲ್ಲಿ ಆ. 18ರಂದು ಉತ್ತರಾರಾಧನೆಯೊಂದಿಗೆ ಸಂಪನ್ನಗೊಂಡಿತು.

Advertisement

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಶುಭಾಶೀರ್ವಾದದೊಂದಿಗೆ ಮೂರು ದಿನಗಳ ಕಾಲ ಜರಗಿದ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಇಂದು ಉತ್ತರಾರಾಧನೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಆ. 16ರಿಂದ ರಾಯರ ಪೂರ್ವಾರಾಧನೆಯೊಂದಿಗೆ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾರಾಧನೆ, ಉತ್ತರಾರಾಧನೆಯ ಪ್ರಯುಕ್ತ ದಿನಂಪ್ರತಿ ಬೆಳಗ್ಗೆ 5ರಿಂದ ನೈರ್ಮಲ್ಯ ವಿಸರ್ಜನೆ, ವೇದ ಪಾರಾಯಣ, ಫಲ ಪಂಚಾಮೃತ ಅಭಿಷೇಕ, ಮಹಾರಥೋತ್ಸವ, ಸರ್ವಸೇವೆ, ಕನಕ ಮಹಾಪೂಜೆ, ಪಾದ ಪೂಜೆ, ಬ್ರಾಹ್ಮಣ ಅಲಂಕಾರ ಪೂಜೆ, ಅಷ್ಟೋದಕ ಮಹಾಮಂಗಳಾರತಿಯ ಅನಂತರ ತೀರ್ಥ ಪ್ರಸಾದ, ಅನ್ನದಾನ ಮೂರೂ ದಿನವೂ ಅಸಂಖ್ಯಾತ ರಾಯರ ಭಕ್ತರ ಸಂಭ್ರಮದಲ್ಲಿ ಜರಗಿತು.

ಮಧ್ಯಾರಾಧನೆ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನವನ್ನು ಸೇರಿದ ಪುಣ್ಯ ದಿನವಾಗಿ ಆಚರಿಸಲ್ಪಡುತ್ತದೆ. ಈ ಪುಣ್ಯ ಆರಾಧನೆಯ ಸಂದರ್ಭದಲ್ಲಿ ಭಕ್ತರಿಂದ ಅನ್ನ ಸೇವೆ ಪ್ರಾಣದೇವರಿಗೆ ವಸ್ತ್ರ ಸಮರ್ಪಣೆ, ಪುಷ್ಪ ಅಲಂಕಾರ ಸಂಪೂರ್ಣ ಸೇವೆ ರಥೋತ್ಸವ ಸೇವೆ, ಕನಕ ಮಹಾಪೂಜೆ, ಮಹಾಪೂಜೆ ಸರ್ವಸೇವೆ, ಫಲ ಪಂಚಾಮೃತ, ಅಷ್ಟೋದಕ, ಫಲತರಕಾರಿ ಮತ್ತು ಕ್ಷೀರ ಸೇವೆಗಳನ್ನು ಆರಾಧನೆಯಲ್ಲಿ ಸಮರ್ಪಿಸಲಾಯಿತು.

ನನ್ನ ತೀರ್ಥವನ್ನು ಸ್ವೀಕರಿಸು ಸಾಕು, ನಿನ್ನೆಲ್ಲ ಕಷ್ಟಗಳನ್ನು ಪರಿಹರಿಸುತ್ತೇನೆ ಎನ್ನುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪುಣ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲುಮಹಾನಗರದ ಅಸಂಖ್ಯಾತ ಭಕ್ತರು ಕಳೆದ ಮೂರುದಿನಗಳಿಂದ ರಾಯರ ಪುಣ್ಯ ಆರಾಧನೆಯಲ್ಲಿ ಭಾಗವಹಿಸಿ ಧನ್ಯರಾದರು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಭಕ್ತರಿಗೆ ರಾಯರ ಮಠದ ಪ್ರಬಂಧಕರಾದ ಪ್ರಹ್ಲಾದಾಚಾರ್ಯ ಪ್ರಧಾನ ಅರ್ಚಕ ವ್ಯಾಸರಾಜಾಚಾರ್ಯ ಮತ್ತು ಅರ್ಚಕ ವೃಂದದವರು ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವಾರು ಭಜನಾ ತಂಡದವರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮೂರು ದಿನಗಳ ಕಾಲ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಲವಾರು ಧಾರ್ಮಿಕ ಮುಖಂಡರು, ರಾಜಕೀಯ, ಸಮಾಜ ಸೇವಕರು, ನಗರ ಸೇವಕರು ಭಾಗವಹಿಸಿ ರಾಯರ ಆರಾಧನೆಯ ದರ್ಶನ ಪಡೆದರು.

 

Advertisement

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next