ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನ ಮಹೋತ್ಸವವು ಮೂಲ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳ ಶುಭಾಶೀರ್ವಾದಗಳೊಂದಿಗೆ ಜೋಗೇಶ್ವರಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 10ರಂದು ಸಮಾಪ್ತಿಗೊಂಡಿತು.
ಆ. 6ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆಯೊಂದಿಗೆ ಪ್ರಾರಂಭಗೊಂಡ ಆರಾಧನಾ ಮಹೋತ್ಸವದಲ್ಲಿ ಧ್ವಜಾರೋಹಣ, ಗೋಪೂಜೆ, ಲಕ್ಷ್ಮೀ ಪೂಜೆ, ಧಾನ್ಯೋತ್ಸವ, ಸ್ವಸ್ತಿ:ವಾಚನ ಮತ್ತು ಮಂಗಳಾರತಿ ಜರಗಿತು. ರಾಯರ ಆರಾಧನೆಯ ಆ. 8ರಂದು ಪೂರ್ವಾರಾಧನೆಯೊಂದಿಗೆ ಪ್ರಾರಂಭಗೊಂಡು ಆ. 9ರಂದು ಮಧ್ಯಾರಾಧನೆ ಮತ್ತು ಆ. 10ರಂದು ಉತ್ತರಾಧನೆಯಲ್ಲಿ ಸಂಪನ್ನಗೊಂಡಿತು.
ಮೂರು ದಿನಗಳಲ್ಲಿ ನಡೆದ ರಾಯರ ಆರಾಧನೆಯಲ್ಲಿ ರಾಯರಿಗೆ ನಿರ್ಮಲ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ, ಪಾಲ ಪಂಚಾಮೃತ, ರಥೋತ್ಸವ, ತುಳಸಿ ಅರ್ಚನೆ, ಅಲಂಕಾರ ಪೂಜೆ, ಅಷ್ಟೋದಕ ಮಹಾಮಂಗಳಾರತಿ, ಸಮರ್ಪಣೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಭಕ್ತರಿಂದ ವಿವಿಧ ಪೂಜೆಗಳು ರಾಯರಿಗೆ ಅರ್ಪಿತವಾದತು.
ಶ್ರೀ ರಾಯರ 346ನೇ ಆರಾಧನಾ ಮಹೋತ್ಸವವು ನೂತನ ಅಭಿನವ ಮಂತ್ರಾಲಯದಲ್ಲಿ ಜರಗಿತು. ನೂತನ ಮಂದಿರದಲ್ಲಿ ವೆಂಕಟೇಶ್ವರ, ಶ್ರೀದೇವಿ, ಭೂದೇವಿ, ಮುಖ್ಯಪ್ರಾಣ, ನವಗ್ರಹ, ಗಣಪತಿ, ಮಂಚಾಲಮ್ಮ ಜೊತೆಗೆ ರಾಘವೇಂದ್ರ ಸ್ವಾಮಿಗಳ ಮೃತಿಕಾ ಬೃಂದಾವನವು ಇಲ್ಲಿ ಪ್ರತೀ ದಿನ ಆರಾಧಿಸಲ್ಪಡುತ್ತದೆ. ಶುಕ್ರವಾರದಂದು ಶ್ರೀನಿವಾಸ ಕಲ್ಯಾಣ ಪೂಜೆಯು ಜರಗುತ್ತಿದೆ. ಮಠದಲ್ಲಿ ಹಲವು ಯೋಜನಾತ್ಮಕ ಕೆಲಸಗಳನ್ನು ಕೈಗೊಳ್ಳಲಾಗಿದ್ದು, ಅದು ಶೀಘ್ರದಲ್ಲೇ ನೆರವೇರಲಿದೆ.
ಕಳೆದ 3 ದಿನಗಳ ರಾಯರ ಆರಾಧನ ಉತ್ಸವದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಮಠದ ಆಡಾಳಿತಾಧಿಕಾರಿ ವಿ. ಪೂರ್ಣಪ್ರಜ್ಞ, ಮುಖ್ಯ ಪ್ರಬಂಧಕ ರಮಾಕಾಂತ್ ಮಾನ್ವಿ, ಪ್ರಧಾನ ಅರ್ಚಕ ಗುರುರಾಜ ಆಚಾರ್ಯ, ಅರ್ಚಕ ವೃಂದದವರು ಆರಾಧನೆಯ ಯಶಸ್ಸಿಗೆ ಸಹಕರಿಸಿದರು. ಭಕ್ತರಿಂದ ಹಾಗೂ ಮಹಾಲಕ್ಷ್ಮೀಭಜನ ಮಂಡಳಿ ಅಂಧೇರಿ ಇವರಿಂದ ಭಜನ ಕಾರ್ಯಕ್ರಮ ಜರಗಿತು.
ಚಿತ್ರ-ವರದಿ: ರಮೇಶ್ ಉದ್ಯಾವರ