ಸಾಗರ: ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿನ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತ ಇದಾಗಿದ್ದು ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿನಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲವು. ಶರಾವತಿ ನದಿ ಜೋಗದಲ್ಲಿ ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಪ್ರಮುಖ ಜಲಪಾತಗಳನ್ನು ಸೃಷ್ಟಿಸುತ್ತದೆ.
ಮಳೆ ಕೊರತೆಯಿಂದ ಕಾಣೆಯೇ ಆಗುವ ಅಪಾಯವನ್ನೂ ಕಂಡಿದ್ದ ತಾಲೂಕಿನ ಜಗತ್ಪ್ರಸಿದ್ಧ ಜೋಗ ಜಲಪಾತ ಕಳೆದ ನಾಲ್ಕು ದಿನಗಳಿಂದ ಆಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿ ಆಗುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮತ್ತೆ ಜೀವ ತುಂಬಿಕೊಳ್ಳುವತ್ತ ಸಾಗಿದೆ. ಬುಧವಾರ ದಿನವಿಡೀ ಮಳೆ ಸುರಿಯುತ್ತಿದ್ದುದರಿಂದ ದಿನದ ಬಹುಪಾಲು ಸಂದರ್ಭಗಳಲ್ಲಿ ಜಲಪಾತದ ಎದುರು ಮಂಜು ಕವಿದು ಜಲಪಾತ ಕಾಣದ ಸ್ಥಿತಿ ನಿರ್ಮಾಣವಾಗಿತ್ತು.
ಜಲಪಾತದ ವೀಕ್ಷಣಾ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಬ್ರಿಟಿಷ್ ಬಂಗ್ಲೋ ಭಾಗದ ಅಂಗಡಿ ಮುಗ್ಗಟ್ಟುಗಳನ್ನು ಸ್ಥಳಾಂತರಿಸಲಾಗಿದೆ. ಹಲವು ಸ್ಥಳೀಯ ಅಂಗಡಿಯವರು ಪರ್ಯಾಯ ಜಾಗ ತೋರಿಸಿದ್ದರೂ ಅಲ್ಲಿನ ಅನಾನುಕೂಲತೆಗಳ ಹಿನ್ನೆಲೆಯಲ್ಲಿ ಅಂಗಡಿ ಹಾಕಿಲ್ಲ. ಸದ್ಯ ವಾರದ ಮಧ್ಯದ ದಿನಗಳಲ್ಲಿ ಹೇಳುವಂತಹ ಪ್ರವಾಸಿಗರ ದಟ್ಟಣೆ ಕಾಣಿಸಿಲ್ಲ. ಆದರೆ ಬರಲಿರುವ ವಾರಾಂತ್ಯದಲ್ಲಿ ಪ್ರವಾಸಿಗರು ದಾಳಿ ಇಡಲಿದ್ದಾರೆ. ಈ ಸಂದರ್ಭದಲ್ಲಿ ಉಂಟಾಗಬಹುದಾದ ಪರಿಸ್ಥಿತಿಯ ನಿಯಂತ್ರಣಕ್ಕೆ ಜೋಗ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Goa; ಮೈದುಂಬಿಕೊಂಡ ಹರ್ವಳೆ ಜಲಪಾತ; ಪವಿತ್ರ ಯಾತ್ರಾ ಸ್ಥಳವಿದು